ಕೊರಗ ಸಮುದಾಯದ ಯುವಕರ ಮೇಲೆ ಹಲ್ಲೆ ; ಸಂಘಟನೆಗಳಿಂದ ಎಸ್ಪಿ ಕಚೇರಿ ಎದುರು ಪ್ರತಿಭಟನೆ
ಮಂಗಳೂರು: ದನದ ಮಾಂಸ ಸೇವಿಸುತ್ತಿರುವುದಾಗಿ ಆರೋಪಿಸಿ ಬಜರಂಗದಳ ಕಾರ್ಯಕರ್ತರು ಮೊವಾಡಿ – ಹೊಸಾಡು ಕೊರಗ ಸಮುದಾಯದವರ ಮೆಲೆ ಹಲ್ಲೆ ನಡೆಸಿ ಜಾತಿನಿಂದನೆ ಮಾಡಿರುವುದನ್ನು ವಿರೋಧಿಸಿ ದಲಿತ ಸಂಘಟನೆಗಳು ಶುಕ್ರವಾರ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಾರಾಯಣ ಮಣೂರು ದಲಿತ ಯುವಕರ ತಲೆಗೆ ಧರ್ಮದ ವಿಷ ಬೀಜವನ್ನು ಬಿತ್ತಿ ಮನೆಯಲ್ಲಿರುವ ತಂದೆ ತಾಯಂದಿರನ್ನು ಬಿಟ್ಟು ಪ್ರಾಣಿಯನ್ನು ವೈಭವೀಕರಿಸಲಾಗುತ್ತದೆ. ಅದನ್ನು ಸಮಾಜದ ಮೇಲೆ ಹೇರು ಕೃತ್ಯವನ್ನು ಕೆಲವೊಂದು ಸಂಘಟನೆಗಳು ಮಾಡುತ್ತಿದೆ ಇದರಿಂದ ಸಮಾಜದ ಶಾಂತಿ ಕದಡಿದೆ ಎಂದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಮಾತನಾಡಿ ದಲಿತ ಸಮುದಾಯದವರ ಮೇಲೆ ಆಹಾರ ಪದ್ದತಿಯನ್ನು ಹೇರು ಕೆಲಸ ನಡೆಯುತ್ತಿದ್ದು ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದ ಇಂತಹ ಕೃತ್ಯಗಳು ಉಡುಪಿ ಜಿಲ್ಲೆಗೂ ಕಾಲಿಟ್ಟಿದೆ. ನಮ್ಮ ಆಹಾರದ ಆಯ್ಕೆಯನ್ನು ನಿರ್ಧರಿಸುವ ಹಕ್ಕು ಬೇರ್ಯಾರಿಗೂ ಇಲ್ಲ. ಕೊರಗ ಸಮುದಾಯದವರ ಮೇಲೆ ಧಾಳಿ ನಡೆದಾಗ ಆರೋಪಿಗಳನ್ನು ಬಂಧಿಸಿ ಕ್ರಮಕೈಗೊಳ್ಳಬೇಕಾದ ಪೋಲಿಸರು ಅಮಾಯಕ ಕೊರಗ ಯುವಕರನ್ನು ಬಂಧಿಸಿ ಠಾಣೆಗೆ ಕರೆದೊಯ್ದು ದೌರ್ಜನ್ಯ ಎಸಗಿದ್ದಾರೆ. ಆ ಭಾಗದ ಕೊರಗ ಸಮುದಾಯದವರು ಸಂಪೂರ್ಣ ಭಯದಿಂದ ಬದುಕುತ್ತಿದ್ದು, ಸ್ಥಳೀಯ ಮೇಲ್ವರ್ಗದ ಜಾತಿಯವರು ಕೂಡ ಅವರುಗಳಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದರು.
ದಸಂಸ ಭೀಮಘರ್ಜನೆ ರಾಜ್ಯ ಸಂಚಾಲಕ ಉದಯ್ ಕುಮಾರ್ ತಲ್ಲೂರು ಮಾತನಾಡಿ ಈ ಪ್ರಕರಣದಲ್ಲಿ ಸ್ಥಳೀಯ ಮಾಜಿ ಜಿಪಂ ಸದಸ್ಯ ಅನಂತ್ ಮೊವಾಡಿ ಸ್ವತಃ ದಲಿತ ಮುಖಂಡರಾಗಿ ಬಿಜೆಪಿಯವರೊಂದಿಗೆ ಸೇರಿ ಕೊಂಡು ಆರೋಪಿಗಳಿಗೆ ಬೆಂಬಲಿಸುತ್ತಿದ್ದಾರೆ. ಘಟನೆ ನಡೆದು ಮೂರು ದಿನಗಳಾದರೂ ಸ್ಥಳೀಯ ಶಾಸಕ ಗೋಪಾಲ ಪೂಜಾರಿ ಮೌನವಹಿಸಿದ್ದಾರೆ. ಪೋಲಿಸರು ಯಾವುದೇ ಪ್ರಭಾವಕ್ಕೆ ಒಳಗಾಗದೆ ಆರೋಪಿಗಳನ್ನು ಬಂಧೀಸಬೇಕು ಇದಕ್ಕೆ ತಪ್ಪಿದ್ದಲ್ಲಿ ಉಪವಾಸ ಸತ್ಯಾಗ್ರಹ ನಡೆಸಬೇಕಾಗಿದೀತು ಎಂದು ಎಚ್ಚರಿಸಿದರು.
ಪ್ರಗತಿಪರ ನಾಯಕರಾದ ಜಿ ರಾಜ್ ಶೇಖರ್, ಶ್ಯಾಮ್ ರಾಜ್ ಬಿರ್ತಿ, ಎಸ್ ಎಸ್ ಪ್ರಸಾದ್, ಶೇಖರ್ ಹೆಜಮಾಡಿ, ವಿಶ್ವನಾಥ್ ಪೇತ್ರಿ, ವಂ ವಿಲಿಯಂ ಮಾರ್ಟಿಸ್, ಗ್ರಾಪಂ ಶಕುಂತಲಾ, ಫ್ರೋ ಫಣಿರಾಜ್, ಪ್ರೋ ಸಿರಿಲ್ ಮಥಾಯಸ್, ಯಾಸಿನ್ ಕೋಡಿಬೇಂಗ್ರೆ ಇತರರು ಉಪಸ್ಥಿತರಿದ್ದರು.