ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ; ಕೇಂದ್ರ ರಾಜ್ಯದ ಸುಗ್ರೀವಾಜ್ಞೆ ಕಟ್ಟುನಿಟ್ಟಾಗಿ ಜಾರಿ – ಬೊಮ್ಮಾಯಿ
ಉಡುಪಿ: ರಾಜ್ಯದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಆರೋಪಿಗಳಿಗೆ ಜಾಮೀನು ಕೊಡಬಾರದೆಂಬ ವಿಚಾರ ಇದೆ ಆದ್ದರಿಂದ ಕೇಂದ್ರ ರಾಜ್ಯದ ಸುಗ್ರೀವಾಜ್ಞೆ ಕಟ್ಟುನಿಟ್ಟಾಗಿ ಜಾರಿಗೆ ತರುತ್ತೇವೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು
ಅವರು ಗುರುವಾರ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊರೋನಾ ವಿಚಾರದಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಪ್ರಗತಿಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠೀಯಲ್ಲಿ ಮಾತನಾಡಿದರು. ಪೊಲೀಸರು, ಆರೋಗ್ಯ ಇಲಾಖೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಕ್ಕೆ ಕಾರ್ಯಾಚರಣೆ ಮಾಡಿದ್ದೇವೆ. ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಆರೋಗ್ಯ ಕಾರ್ಯಕರ್ತರಿಗೆ ಹಲ್ಲೆ ಅಥವಾ ಅವರ ಕೆಲಸಕ್ಕೆ ನಿರ್ಬಂಧ ವಿಧಿಸಿದರೆ ಸಹಿಸೊದಿಲ್ಲ ಮತ್ತು ಅಂತಹವರ ವಿರುದ್ದ ಮುಖ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ. ಇದರಲ್ಲಿ ಭಾಗಿಯಾದ ವ್ಯಕ್ತಿಗಳು ಯಾರೇ ಎಷ್ಟೇ ದೊಡ್ಡವರಾದ್ರೂ ಕಠಿಣ ಕ್ರಮ ತೆಗದುಕೊಳ್ತೇವೆ ಪ್ರಕರಣದಲ್ಲಿ ರಾಜಿಗೆ ಅವಕಾಶ ಇಲ್ಲ ಎಂದು ಅವರು ಹೇಳಿದರು.
ಇದೇ ವೇಳೆ ಕೊರೋನ ವೈರಸ್ನಂತಹ ಮಾರಕ ರೋಗದಿಂದ ಜನರನ್ನು ರಕ್ಷಿಸುವ ಜಿಲ್ಲೆಯಲ್ಲಿ ಕೊರೊನಾ ಟೆಸ್ಟಿಂಗ್ ಲ್ಯಾಬ್ ನಿರ್ಮಾಣ ಮಾಡಲು ಬೊಮ್ಮಾಯಿ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ರಾಜ್ಯದಲ್ಲಿ ಈಗಾಗಲೇ 17 ಕೊರೋನಾ ಸೋಂಕು ಪರೀಕ್ಷಾ ಲ್ಯಾಬ್ ಗಳನ್ನು ನಿರ್ಮಾಣ ಮಾಡಲಾಗಿದ್ದು ಮುಂದಿನ ಏಪ್ರಿಲ್ 30ರ ಒಳಗೆ ಇನ್ನೂ 10 ಲ್ಯಾಬ್ ಗಳನ್ನು ನಿರ್ಮಾಣ ಮಾಡಲಾಗುವುದು. ಉಡುಪಿ ಜಿಲ್ಲೆಯಲ್ಲಿ ಎಸ್ ಡಿ ಆರ್ ಎಫ್ ನಿಧಿಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಅದನ್ನು ನಿರ್ಮಾಣ ಮಾಡಲು ರಾಜ್ಯ ಸರಕಾರದ ಅನುಮೋದನೆಗಾಗಿ ಕಳುಹಿಸಿ ಕೊಡುವಂತೆ ಸೂಚನೆ ನೀಡಿದರು.
ಉಡುಪಿಯಲ್ಲಿ ಕೋವಿಡ್ ಮ್ಯಾನೇಜ್ಮೆಂಟ್ ಚೆನ್ನಾಗಿ ಆಗಿದ್ದು, ಎಲ್ಲಾ ವೈದ್ಯರಿಗೆ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ ಬೊಮ್ಮಾಯಿ ಮುಂದಿನ ದಿನಗಳಲ್ಲಿ ಮುಂಜಾಗೃತ ಕ್ರಮವಾಗಿ ಜಿಲ್ಲಾಸ್ಪತ್ರೆಯಲ್ಲಿ ಸೆಂಟ್ರಲೈಸ್ಡ್ ಆಕ್ಸಿಜನ್ 50 ಬೆಡ್ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ 10 ಬೆಡ್ ವ್ಯವಸ್ಥೆ ಮಾಡಲು ನಿರ್ಧಾರ. ಜಿಲ್ಲೆಗೆ 3500 ಪಿಪಿಇ ಕಿಟ್ ಅಗತ್ಯತೆ ಇದ್ದು ಅದನ್ನು ಕೂಡಲೇ ಸರಬರಾಜು ಆಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು.
ಜಿಲ್ಲೆಯಲ್ಲಿ ಲಾಕ್ ಡೌನ್ ಬಳಿಕ ನಿರ್ಬಂಧ ಸಡಿಲಿಸುವ ಬಗ್ಗೆ ಬೇಡಿಕೆ ಇದೆ ಆದರೆ ಈ ಬಗ್ಗೆ ಉಡುಪಿ ಗ್ರೀನ್ ಝೋನ್ ವ್ಯಾಪ್ತಿಗೆ ಬಂದಮೇಲೆ ಚಿಂತನೆ ನಡೆಸಲಾಗುವುದು ಸದ್ಯಕ್ಕೆ ಹೊರ ಜಿಲ್ಲೆಯಿಂದ ಜನರನ್ನು ಸದ್ಯಕ್ಕೆ ಉಡುಪಿಯೊಳಗೆ ಬಿಡಲಾಗುವುದಿಲ್ಲ ಎಂದು ಅವರು ಹೇಳಿದರು.
ಪಾದರಾಯಣಪುರ ಹಲ್ಲೆ ಪ್ರಕರಣದ ಕುರಿತು ಮಾತನಾಡಿದ ಸಚಿವ ಬೊಮ್ಮಾಯಿ ಘಟನೆಗೆ ಸಂಬಂಧಿಸಿ ಈಗಾಗಲೇ 126 ಕ್ಕೂ ಹೆಚ್ಚಿನ ಆರೋಪಿಗಳನ್ನು ಬಂಧಿಸಲಾಗಿದ್ದು ಆರೋಪಿಗಳನ್ನು ರಾಮನಗರ ಜೈಲಿನಲ್ಲಿ ಇಡಲಾಗಿದೆ. ಪ್ರಕರಣದ ಒಬ್ಬ ಪ್ರಮುಖ ಆರೋಪಿಯ ಬಂಧನ ಬಾಕಿಯಿದ್ದು ಶೀಘ್ರ ಬಂಧನವಾಗಲಿದೆ. ಆರೋಪಿಗಳ ವಿರುದ್ದ ನ್ಯಾಶನಲ್ ಡಿಸಾಸ್ಟರ್ ಆಕ್ಟ್ ಅಡಿ ಬಂಧಿಸಿ ಎಂಟರಿಂದ ಹತ್ತು ಸೆಕ್ಷನ್ ಹಾಕಲಾಗಿದ್ದುಸರ್ಕಾರಿ ಸೇವೆಗೆ ಅಡ್ಡಿಪಡಿಸಿದ ಪ್ರಕರಣವೂ ದಾಖಲಾಗಿದೆ. ಚಾರ್ಜ್ ಶೀಟ್ ಇನ್ನೂ ಫೈಲ್ ಮಾಡಿಲ್ಲ. ಈ ಪ್ರಕರಣದ ತನಿಖಾ ಹಂತ ನೋಡಿಕೊಂಡು ಸಾಧ್ಯವಿದ್ದರೆ ಅಗತ್ಯ ಸೆಕ್ಷನ್ ಗಳ ಸೇರ್ಪಡೆ ಮಾಡಲಾಗುವುದು ಎಂದರು.
ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್, ಜಿಪಂ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೊಟ್, ಜಿಪಂ ಅಧ್ಯಕ್ಷ ದಿನಕರ ಬಾಬು, ಶಾಸಕರಾದ ರಘುಪತಿ ಭಟ್, ಹಾಲಾಡಿ ಶ್ರಿನೀವಾಸ ಶೆಟ್ಟಿ, ಲಾಲಾಜಿ ಆರ್ ಮೆಂಡನ್, ಸುನೀಲ್ ಕುಮಾರ್ ಸುಕುಮಾರ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.