ಕೊರೋನಾ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ – ಡಿಸಿ ಜಗದೀಶ್
ಉಡುಪಿ: ಸೋಶಿಯಲ್ ಮೀಡಿಯಾಗಳ ಮೂಲಕ ಜಿಲ್ಲೆಯಲ್ಲಿ ಕರೋನಾ ಕುರಿತಂತೆ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ವಿರುದ್ದ ಕಾಯ್ದೆಯಲ್ಲಿ ಸೂಚಿಸಿರುವಂತೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದರು.
ಈ ಕುರಿತು ಶನಿವಾರ ಮಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಜಿ.ಜಗದೀಶ್ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಗೆ ಈಗಾಗಲೇ ಕಾರ್ಯಾಗಾರ ನಡೆಸಿ ಸ್ಪಷ್ಠ ಸೂಚನೆಗಳನ್ನು ನೀಡಿದ್ದು,ಕೊರೋನಾ ರೋಗ ಲಕ್ಷಣ ಇರುವ ರೋಗಿಗಳನ್ನು ನಿರ್ಲಕ್ಷಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದು, ಪ್ರತಿ ಆಸ್ಪತ್ರೆಯಲ್ಲಿ 2 ಐಸೋಲೇಟೆಡ್ ಕೊಠಡಿ ಗಳನ್ನು ಮೀಸಲಿಡುವಂತೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಪ್ರಸ್ತುತ ಇಂದು ಒಬ್ಬರು ಕೊರೋನಾ ಶಂಕಿತರು ಆಸ್ಪತ್ರೆಗೆ ದಾಖಲಾಗಿದ್ದು ಸೇರಿದಂತೆ, ಒಟ್ಟು 3 ಮಂದಿ ಕೊರೋನಾ ಶಂಕಿತರು ದಾಖಲಾಗಿದ್ದು, ಅವರ ವೈದ್ಯಕೀಯ ವರದಿಯನ್ನು ಶಿವಮೊಗ್ಗಕ್ಕೆ ಕಳುಹಿಸಲಾಗಿದ್ದು, ವರದಿ ನಿರೀಕ್ಷೆಯಲ್ಲಿದ್ದೇವೆ , ಇದುವರೆಗೆ ಜಿಲ್ಲೆಯಿಂದ ಕಳುಹಿಸಿದ ಎಲ್ಲಾ ವರದಿಗಳು ನೆಗೆಟಿವ್ ಆಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು.
ಡಿ.ಹೆಚ್.ಓ ಡಾ.ಸುಧೀರ್ ಚಂದ್ರ ಸೂಡಾ ಉಪಸ್ಥಿತರಿದ್ದರು.