ಕೊರೋನಾ ವೈರಸ್: ಮಂಗಳೂರು ಸೇರಿದಂತೆ ಕರ್ನಾಟಕದ 5 ಜಿಲ್ಲೆಗಳು ‘ಕೋವಿಡ್-19 ರೆಡ್ ಝೋನ್’ ಪಟ್ಟಿಗೆ!

Spread the love

ಕೊರೋನಾ ವೈರಸ್: ಮಂಗಳೂರು ಸೇರಿದಂತೆ ಕರ್ನಾಟಕದ 5 ಜಿಲ್ಲೆಗಳು ‘ಕೋವಿಡ್-19 ರೆಡ್ ಝೋನ್’ ಪಟ್ಟಿಗೆ!

ಬೆಂಗಳೂರು: ಕರ್ನಾಟಕದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವಂತೆಯೇ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಐದು ಜಿಲ್ಲೆಗಳನ್ನು ಕೋವಿಡ್ 19 ರೆಡ್ ಝೋನ್ ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದೆ.

ಅತ್ತ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ಮೂಲಕ ವೈರಸ್ ಸೋಂಕು ನಿಯಂತ್ರಣದ ಕುರಿತು ಚರ್ಚೆ ನಡೆಸಿದ ಬೆನ್ನಲ್ಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಬಿಎಸ್ ಯಡಿಯೂರಪ್ಪ ಅವರು ಹಲವು ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ. ಈ ಪೈಕಿ ಕೊರೋನಾ ವೈರಸ್ ಸೋಂಕು ಪೀಡಿತರ ಸಂಖ್ಯೆ ಹೆಚ್ಚಿರುವ ಜಿಲ್ಲೆಗಳನ್ನು ಕೋವಿಡ್-19 ರೆಡ್ ಝೋನ್ ಪಟ್ಟಿಗೆ ಸೇರಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ,

ಮೂಲಗಳ ಪ್ರಕಾರ ರಾಜಧಾನಿ ಬೆಂಗಳೂರು ಸೇರಿದಂತೆ ಹೆಚ್ಚು ಸೋಂಕಿತ ಪ್ರಕರಣಗಳು ದಾಖಲಾಗಿರುವ ರಾಜ್ಯದ 5 ಜಿಲ್ಲೆಗಳನ್ನು ಕೋವಿಡ್ 19 ರೆಡ್ ಝೋನ್ ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರಕನ್ನು ಕ್ವಾರಂಟೈನ್ ಮಾಡಲಾಗಿದೆ. ಹೀಗಾಗಿ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದ್ದು, ಉಳಿದಂತೆ ಚಿಕ್ಕಬಳ್ಳಾಪುರ, ಮೈಸೂರು, ಉತ್ತರ ಕನ್ನಡ ಮತ್ತು ಮಂಗಳೂರು (ದಕ್ಷಿಣ ಕನ್ನಡ) ಜಿಲ್ಲೆಗಳು ಕೋವಿಡ್ 19 ರೆಡ್ ಝೋನ್ ಪಟ್ಟಿಗೆ ಸೇರಿವೆ. ಈ ಜಿಲ್ಲೆಗಳಲ್ಲಿ ಲಾಕ್ ಡೌನ್ ಅನ್ನು ಮತ್ತಷ್ಟು ಕಠಿಣಗೊಳಿಸಿ ಸೋಂಕು ಪ್ರಕರಣಗಳು ಹೆಚ್ಚು ದಾಖಲಾಗದಂತೆ ಮುನ್ನಚ್ಚರಿಕೆ ವಹಿಸಲಾಗುತ್ತದೆ.

ಈ ಕುರಿತಂತೆ ಮಾತನಾಡಿರುವ ಸಚಿವ ಸುಧಾಕರ್ ಅವರು, ದಿನಕಳದಂತೆ ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಜಿಲ್ಲೆಗಳಿಗೆ ಹೆಚ್ಚಿನ ಒತ್ತು ನೀಡಿ ಲಾಕ್ ಡೌನ್ ನಿಯಮವನ್ನು ಮತ್ತಷ್ಡು ಕಠಿಣಗೊಳಿಸಲಾಗುತ್ತದೆ ಎಂದು ಹೇಳಿದರು, ಮೈಸೂರಿನ ಫಾರ್ಮಾಸುಟಿಕಲ್ ಸಂಸ್ಥೆಯಲ್ಲಿ ಸೋಂಕಿತರು ಪತ್ತೆಯಾದ ಬಳಿಕ ಮೈಸೂರಿನಲ್ಲಿ ವೈರಸ್ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದ್ದು, ಈ ಪೈಕಿ 14 ಮಂದಿ ಇದೇ ಫಾರ್ಮಾಸುಟಿಕಲ್ ಸಂಸ್ಥೆಯ ಸಿಬ್ಬಂದಿಗಳಾಗಿದ್ದಾರೆ. ಅಂತೆಯೇ ಜಿಲ್ಲೆಯಲ್ಲಿ 1,463 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಹೇಳಿದರು.

ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರಿಗಾಗಿ ತೀವ್ರ ಶೋಧ
ಇದೇ ವೇಳೆ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರಿಗಾಗಿ ಸರ್ಕಾರ ತೀವ್ರ ಶೋಧ ನಡೆಸುತ್ತಿದ್ದು, ಮೂಲಗಳ ಪ್ರಕಾರ 371 ಮಂದಿಯ ಜಾಡು ಹಿಡಿದಿರುವ ಅಧಿಕಾರಿಗಳು ಇವರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಈ ಪೈಕಿ ಹಲವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಇದು ಪತ್ತೆ ಕಾರ್ಯಕ್ಕೆ ತೊಡಕಾಗಿದೆ. ಇದೇ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ತುಮಕೂರಿನ ಶಿರಾ ಮೂಲದ ವೃದ್ಧ ಕೊರೋನಾ ವೈರಸ್ ಗೆ ಬಲಿಯಾಗಿದ್ದರು.


Spread the love