Home Mangalorean News Kannada News ಕೊರೋನಾ ವೈರಸ್: ಮಾರ್ಚ್ 31ರವೆರೆಗೂ ತಾತ್ಕಾಲಿಕ ನಿರ್ಬಂಧ ಮುಂದುವರಿಕೆ

ಕೊರೋನಾ ವೈರಸ್: ಮಾರ್ಚ್ 31ರವೆರೆಗೂ ತಾತ್ಕಾಲಿಕ ನಿರ್ಬಂಧ ಮುಂದುವರಿಕೆ

Spread the love

ಕೊರೋನಾ ವೈರಸ್: ಮಾರ್ಚ್ 31ರವೆರೆಗೂ ತಾತ್ಕಾಲಿಕ ನಿರ್ಬಂಧ ಮುಂದುವರಿಕೆ

ಬೆಂಗಳೂರು: ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 31ರವರೆಗೂ ರಾಜ್ಯದಲ್ಲಿ ತಾತ್ಕಾಲಿಕ ಬಂದ್ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಕುರಿತಂತೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ರಾಜ್ಯ ಮತ್ತು ದೇಶದಲ್ಲಿ ವ್ಯಾಪಕವಾಗಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ತುರ್ತು ಸಭೆ ನಡೆಯಿತು. ಈ ಸಭೆಯಲ್ಲಿ ಕೊರೋನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಕೈಗೊಳ್ಳಬೇಕಾದ ಅಂಶಗಳ ಕುರಿತು ಚರ್ಚೆ ನಡೆಸಲಾಯಿತು. ಈ ವೇಳೆ ಮಾರ್ಚ್ 31ರವರೆಗೆ ಯಾವುದಕ್ಕೆಲ್ಲ ನಿರ್ಬಂಧ ಹೇರಲಾಗಿದೆಯೋ ಅವುಗಳಿಗೆ ನಿರ್ಬಂಧ ಮುಂದುವರಿಸಲಾಗಿದೆ. ಹೀಗಾಗಿ ಮಾಲ್ ಗಳು, ಸಿನಿಮಾ ಥಿಯೇಟರ್, ಪಬ್, ಈಜುಕೊಳ, ಸಭೆ, ಸಮಾರಂಭ, ಜಾತ್ರೆಗಳಿಗೆ ನಿರ್ಬಂಧ ಹೇರಲಾಗಿದೆ. ಆದರೆ ಬೆಂಗಳೂರಿನಲ್ಲಿ ರೆಸ್ಟೋರೆಂಟ್ಸ್, ಹೊಟೇಲ್ ಗಳಿಗೆ ನಿರ್ಬಂಧ ಇಲ್ಲ. ಅಂತೆಯೇ ದೊಡ್ಡ ಮಟ್ಟದ ಸಭೆ ಸಮಾರಂಭ ಮಾಡಲು ಅವಕಾಶ ನಿರಾಕರಿಸಲಾಗಿದೆ.

ಇನ್ನು ವಿಧಾನಸಭೆ, ವಿಕಾಸಸೌಧ ಕಡೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಟಾಸ್ಕ್ ಫೋರ್ಸ್ ರಚನೆ: ಸಭೆಯಲ್ಲಿ 4 ಸಚಿವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದ್ದು, ತುರ್ತು 200 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ. ಸಚಿವರಾದ ಡಾ.ಅಶ್ವಥ್ ನಾರಾಯಣ, ಬಸವರಾಜ ಬೊಮ್ಮಾಯಿ, ಶ್ರೀರಾಮುಲು ಮತ್ತು ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಕೊರೋನಾ ಟಾಸ್ಕ್ ಫೋರ್ಸ್ ರಚಿಸಲಾಗಿದ್ದು, ನಿತ್ಯ ಈ ತಂಡದ ಸದಸ್ಯರು ಕೊರೊನಾ ಬಗ್ಗೆ ಮಾಹಿತಿ ತಿಳಿಸಲಿದ್ದಾರೆ. ಇನ್ನು ಮನೆಯಲ್ಲೇ ಇರಬೇಕೆಂದು ವೈದ್ಯರು ಸೂಚನೆ ನೀಡಿದ್ದರೂ ಟೆಕ್ಕಿಯೊಬ್ಬ ಬೆಂಗಳೂರಿನ ಹಲವು ಕಡೆ ಸುತ್ತಾಡಿದ ಹಿನ್ನೆಲೆಯಲ್ಲಿ ಚೀನಾ, ಇಟಲಿಯ ನಗರಗಳಂತೆ ಸಿಲಿಕಾನ್ ಸಿಟಿಯೂ ಲಾಕ್‍ಡೌನ್ ಆಗುತ್ತಾ ಎನ್ನುವ ಪ್ರಶ್ನೆ ಎದ್ದಿತ್ತು. ಆದರೆ ಈ ಬೆಂಗಳೂರನ್ನು ಲಾಕ್‍ಡೌನ್ ಮಾಡದೇ ಇರಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ನಿತ್ಯ ಎರಡು ಸಲ ಈ ಟಾಸ್ಕ್ ಫೋರ್ಸ್ ನಿಂದ ಕೊರೋನಾ ಅಪ್ಡೇಟ್ ಬುಲೆಟಿನ್ ಗಳ ಪ್ರಕಟಣೆ ನೀಡಲಾಗುತ್ತದೆ.

ಸೋಂಕಿತರ ಕೈಗೆ ಸ್ಯ್ಟಾಂಪ್: ಇನ್ನು ಸೋಂಕಿತರನ್ನು ಗುರುತಿಸಲು ಮತ್ತು ಅವರ ಮೇಲೆ ನಿಗಾ ಇರಿಸಲು ಮಹಾರಾಷ್ಟ್ರ ಮಾದರಿಯಲ್ಲಿ ಸೋಂಕಿತರ ಕೈಗೆ ಸ್ಯ್ಟಾಂಪ್ ಹಾಕಲು ಸರ್ಕಾರ ನಿರ್ಧರಿಸಿದೆ. ಇದಲ್ಲದೆ ವಿದೇಶಗಳಿಂದ ರಾಜ್ಯಕ್ಕೆ ಬರುವ ಎಲ್ಲ ಪ್ರಯಾಣಿಕರನ್ನು ಪರೀಕ್ಷಿಸಿ ಪ್ರತ್ಯೇಕ 14 ದಿನ ಇಡಲು ತೀರ್ಮಾನಿಸಲಾಗಿದ್ದು, ಹಕ್ಕಿಜ್ವರ ಮತ್ತು ಮಂಗನ ಕಾಯಿಲೆಗಳ ತಡೆಗೂ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲು ನಿರ್ಧಾರ ಕೈಗೊಳ್ಳಲಾಗಿದೆ.

ಕೊರೋನ ನಿರ್ವಹಣೆಗೆ 200 ಕೋಟಿ ರೂ ತುರ್ತು ನಿಧಿ ಮೀಸಲು: ಇದೇ ವೇಳೆ ಕೊರೋನಾ ವೈರಸ್ ಸೋಂಕು ನಿರ್ವಹಣೆಗೆ 200 ಕೋಟಿ ರೂ ತುರ್ತು ನಿಧಿ ಮೀಸಲು ಇಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.


Spread the love

Exit mobile version