Home Mangalorean News Kannada News ಕೊರೋನಾ ಸಂಕಷ್ಟ ಸಮಯದಲ್ಲಿ ಜಿಲ್ಲೆಯನ್ನು ನಿರ್ಲಕ್ಷಿಸಿದ ಉಸ್ತುವಾರಿ ಸಚಿವರು – ವಿಶ್ವಾಸ್ ಅಮಿನ್

ಕೊರೋನಾ ಸಂಕಷ್ಟ ಸಮಯದಲ್ಲಿ ಜಿಲ್ಲೆಯನ್ನು ನಿರ್ಲಕ್ಷಿಸಿದ ಉಸ್ತುವಾರಿ ಸಚಿವರು – ವಿಶ್ವಾಸ್ ಅಮಿನ್

Spread the love

ಕೊರೋನಾ ಸಂಕಷ್ಟ ಸಮಯದಲ್ಲಿ ಜಿಲ್ಲೆಯನ್ನು ನಿರ್ಲಕ್ಷಿಸಿದ ಉಸ್ತುವಾರಿ ಸಚಿವರು – ವಿಶ್ವಾಸ್ ಅಮಿನ್

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಿದ್ದು ಒರ್ವ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಸವರಾಜ ಬೊಮ್ಮಾಯಿಯವರು ಜಿಲ್ಲೆಯ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕೋವಿಡ್ -19 ಲಾಕ್ ಡೌನ್ ಬಳಿಕ ಸತತ 4 ತಿಂಗಳ ಅವಧಿಯಲ್ಲಿ ಕೇವಲ 2 ಬಾರಿ ಜಿಲ್ಲೆಗೆ ಆಗಮಿಸಿರುವುದು ಜಿಲ್ಲಾ ಉಸ್ತುವಾರಿ ಸಚಿವರ ದೊಡ್ಡ ಸಾಧನೆಯಾಗಿದೆ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಚುನಾಯಿತ ಶಾಸಕರಿದ್ದರೂ ಕೂಡ ಹೊರ ಜಿಲ್ಲೆಯವರಿಗೆ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದು ಸರಕಾರದ ಮೊದಲ ತಪ್ಪು. ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರು ಸದ್ಯ ರಾಜ್ಯದ ಗೃಹ ಸಚಿವರೂ ಕೂಡ ಆಗಿರುವುದರಿಂದ ಜಿಲ್ಲೆಯ ಬಗ್ಗೆ ಗಮನ ಹರಿಸುವುದು ಕಷ್ಟ ಸಾಧ್ಯವಾಗುತ್ತದೆ ಎಂದು ಕಾಂಗ್ರೆಸ್ ಪಕ್ಷ ಆರಂಭದಿಂದಲೂ ಹೇಳಿಕೊಂಡು ಬಂದಿತ್ತು. ಅದಕ್ಕೆ ಉತ್ತಮ ಉದಾಹರಣೆ ಎಂಬಂತೆ ಕೊರೋನಾದ ಸಂಕಷ್ಠ ಸಮಯದಲ್ಲಿ ಜಿಲ್ಲೆಯ ಜನರೊಂದಿಗೆ ನಿಲ್ಲಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಜನತೆಯನ್ನು ಅನಾಥರನ್ನಾಗಿಸಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಕೊರೋನಾ ಸೋಂಕಿತರ ಸಂಖ್ಯೆ 3000 ಗಡಿ ದಾಟಿದ್ದು ಇದರ ನಿಯಂತ್ರಣ ಹಾಗೂ ಅದರ ಸಂಬಂಧ ತೆಗೆದುಕೊಂಡ ಮುಂಜಾಗೃತಾ ಕ್ರಮಗಳ ಬಗ್ಗೆ ಒಂದೆರೆಡು ಬಾರಿ ಜಿಲ್ಲೆಗೆ ಆಗಮಿಸಿದ್ದು ಬಿಟ್ಟರೆ ಬೇರೆನೂ ಕೆಲಸ ನಡೆದಿಲ್ಲ.

ಈ ಹಿಂದೆ ಸಮ್ಮಿಶ್ರ ಸರಕಾರವಿದ್ದಾಗ ಸಚಿವೆ ಜಯಮಾಲ ಉಸ್ತುವಾರಿ ಸಚಿವರಾಗಿದ್ದರೂ ಕೂಡ ತಿಂಗಳಿಗೆ ಹಲವಾರು ಬಾರಿ ಜಿಲ್ಲೆಗೆ ಭೇಟಿ ನೀಡಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಆದರೆ ಪ್ರಸ್ತುತ ಉಸ್ತುವಾರಿ ಸಚಿವರು ಜಿಲ್ಲೆಯ ಯಾವುದೇ ಸಮಸ್ಯೆಗಳನ್ನು ಕೂಡ ಗಂಭೀರವಾಗಿ ತೆಗೆದುಕೊಂಡಿಲ್ಲ. ಜಿಲ್ಲೆಯಲ್ಲಿ ಸುವರ್ಣ ತ್ರಿಭುಜ ಬೋಟ್ ಮುಳುಗಿ ವರ್ಷಗಳೇ ಸಂದರೂ ಕೂಡ ಮೀನುಗಾರ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ಉಸ್ತುವಾರಿ ಸಚಿವರ ವಿಫಲರಾಗಿದ್ದಾರೆ. ಬೋಟ್ ನಾಪತ್ತೆ ಪ್ರಕರಣವನ್ನೇ ಪ್ರಮುಖ ವಿಚಾರವನ್ನಾಗಿಸಿ ಕೊಂಡು ಚುನಾವಣೆ ಎದುರಿಸಿದ ಬಿಜೆಪಿ ನಾಯಕರು ಈಗ ಉಸ್ತುವಾರಿ ಸಚಿವರು ಜಿಲ್ಲೆಗೆ ಆಗಮಿಸದೇ ಇದ್ದರೂ ಕೂಡ ಮೌನಕ್ಕೆ ಜಾರಿಕೊಂಡಿರುವುದು ಜಿಲ್ಲೆಯ ಜನರ ಬಗ್ಗೆ ಇರುವ ನೈಜ ಕಾಳಜಿ ತೋರಿಸುತ್ತದೆ.

ಜಿಲ್ಲೆಯಲ್ಲಿ ಒಂದರ ಮೇಲೊಂದು ಹಗರಣಗಳು ನಡೆದರೂ ಕೂಡ ಯಾವುದಕ್ಕೂ ಸಹ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಕ್ರಿಯೆ ತೋರದೆ ನಿರ್ಲಕ್ಷ್ಯತನ ತೋರುತ್ತಿರುವುದು ಖಂಡನೀಯವಾಗಿದೆ. ಕೋವಿಡ್ -19 ವೇಳೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸನ್ನು ಸಂಪೂರ್ಣ ಮರೆತಿದ್ದು ಯಾವುದೇ ಸರ್ವಪಕ್ಷ ಸಭೆ ನಡೆಸದೆ ಎಲ್ಲಾ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಂಡಿರುವುದು ಸರಿಯಲ್ಲ. ಇನ್ನಾದರೂ ಉಸ್ತುವಾರಿ ಸಚಿವರು ಎಚ್ಚೆತ್ತು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಯುವ ಕಾಂಗ್ರೆಸ್ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.


Spread the love

Exit mobile version