ಕೊರೋನಾ ಸೋಂಕಿಗೆ ದಕ ಜಿಲ್ಲೆಯಲ್ಲಿ 12 ನೇ ಬಲಿ
ಮಂಗಳೂರು : ಕೊರೋನ ವೈರಸ್ ಸೋಂಕಿಗೆ ಶನಿವಾರ ರಾತ್ರಿ ಸುರತ್ಕಲ್ ನ 31ವರ್ಷದ ಯುವಕ ಬಲಿಯಾದ ಬೆನ್ನಲ್ಲೆ ಭಾನುವಾರ ಬಂಟ್ವಾಳದ 58 ವರ್ಷ ಪ್ರಾಯದ ಮತ್ತೋರ್ವ ಮಹಿಳೆ ಮೃತಪಟ್ಟಿದ್ದಾರೆ. ದ.ಕ. ಜಿಲ್ಲೆಯಲ್ಲಿ ಕೊರೋನ ವೈರಸ್ ಗೆ ಬಲಿಯಾದವರ ಸಂಖ್ಯೆ 12ಕ್ಕೇರಿದೆ.
ಬಂಟ್ವಾಳದ ಈ ಮಹಿಳೆ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ತಿಂಗಳಿಗೆ ಒಂದು ಬಾರಿ ಮಂಗಳೂರು ಆಸ್ಪತ್ರೆಯೊಂದರಲ್ಲಿ ಆರೋಗ್ಯ ತಪಾಸಣೆ ನಡೆಸುತ್ತಿದ್ದರು. ಅದರಂತೆ ವಾರದ ಹಿಂದೆ ಮಂಗಳೂರಿನಲ್ಲಿ ಆರೋಗ್ಯ ತಪಾಸಣೆ ನಡೆಸಿ ಮನೆಗೆ ಬಂದಿದ್ದು ಆ ಬಳಿಕ ಅವರ ಆರೋಗ್ಯ ತೀವ್ರ ಏರುಪೇರಾಗಿತ್ತು ಎಂದು ತಿಳಿದು ಬಂದಿದೆ.
ಮೂರು ದಿನದ ಹಿಂದೆ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ಶನಿವಾರ ರಾತ್ರಿ ಅವರು ಮೃತಪಟ್ಟಿದ್ದಾರೆ. ಅವರ ಗಂಟಲ ದ್ರವದ ವರದಿಯಲ್ಲಿ ಕೊರೋನ ದೃಢಪಟ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.