ಕೊರೋನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಗಂಗೊಳ್ಳಿ ಪೊಲೀಸರಿಂದ ವಿಶಿಷ್ಟ ಮುಂಜಾಗ್ರತಾ ಕ್ರಮ
ಕುಂದಾಪುರ: ಮುಂಬೈನಲ್ಲಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ತಗುಲಿರುವುದರಿಂದ ಎಚ್ಚೆತ್ತುಕೊಂಡಿರುವ ಗಂಗೊಳ್ಳಿ ಪೊಲೀಸರು, ಪೊಲೀಸ್ ಸಿಬ್ಬಂದಿಗಳನ್ನು ಕೊರೋನಾ ವೈರಸ್ನಿಂದ ರಕ್ಷಿಸಲು ಮುಂಜಾಗ್ರತಾ ಕ್ರಮ ಕೈಗೊಂಡು ಗಮನ ಸೆಳೆದಿದ್ದಾರೆ.
ಕೊರೊನಾ ಸೋಂಕಿತರು ಅಥವಾ ಸೋಂಕಿತರ ಸಂಪರ್ಕದಲ್ಲಿದ್ದವರು ಠಾಣೆಯ ಒಳಗಡೆ ಬಂದು ಸಿಬ್ಬಂದಿಗಳೊಂದಿಗೆ ವ್ಯವಹರಿಸಿದರೆ ಪೊಲೀಸ್ ಸಿಬ್ಬಂದಿಗಳಿಗೂ ಸೋಂಕು ಹರಡುವ ಭೀತಿ ಇದೆ. ಮುಂಬೈನಲ್ಲೂ ಇಂತಹ ಘಟನೆ ನಡೆದಿರುವುದರಿಂದ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಠಾಣೆಗೆ ಭೇಟಿ ನೀಡುವ ಸಾರ್ವಜನಿಕರು ಮತ್ತು ದೂರುದಾರರನ್ನು ಠಾಣೆಯ ಒಳಗೆ ಕರೆಯದೆ, ಠಾಣೆಯ ಹೊರಗಡೆ ದೂರು ಸ್ವೀಕರಿಸಲು, ಸಮಸ್ಯೆಗಳಿಗೆ ಸ್ಪಂದಿಸಲು ಬೇಕಾದ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಯಾರೂ ಕೂಡ ಅನ್ಯತಾ ಭಾವಿಸಬಾರದು. ಸಿಬ್ಬಂದಿಗಳ ಆರೋಗ್ಯದ ಸುರಕ್ಷತೆ ದೃಷ್ಟಿಯಿಂದ ವ್ಯವಸ್ಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಭೀಮಾಶಂಕರ ಎಸ್. ತಿಳಿಸಿದ್ದಾರೆ.
ಒಟ್ಟಿನಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ಕೊರೊನಾ ವೈರಸ್ನಿಂದ ರಕ್ಷಿಸಲು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಮಾಡಲಾದ ನೂತನ ವ್ಯವಸ್ಥೆ ಎಲ್ಲರ ಗಮನ ಸೆಳೆದಿದ್ದು, ಸಾರ್ವಜನಿಕರಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಸುತ್ತಿದೆ.