ಕೊಲೆ ಪ್ರಕರಣ ಸಾಕ್ಷ ನಾಶ : ಇಬ್ಬರ ಸೆರೆ, ನ್ಯಾಯಾಂಗ ಬಂಧನ, ಸಿಒಡಿ ತನಿಖೆಗೆ ಪ್ರಮೋದ್ ಮನವಿ
ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸರು ಬುಧವಾರ ರಾತ್ರಿ ತಮ್ಮ ವಶದಲ್ಲಿದ್ದ ಆರೋಪಿ ನಿರಂಜನ್ ಭಟ್‌ನ ತಂದೆ ಶ್ರೀನಿವಾಸ ಭಟ್ ಹಾಗೂ ಆತನ ಚಾಲಕ ರಾಘವೇಂದ್ರನನ್ನು ಬಂಧಿಸಿದ್ದು, ಬಂಧಿತರನ್ನು ಗುರುವಾರ ಉಡುಪಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ¨ದಂಡಾಧಿಕಾರಿಯ ಹಾಜರುಪಡಿಸಲಾಗಿದ್ದು, ಇಬ್ಬರನ್ನೂ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವಿಚಾರಣೆ ನಡೆಸಿದ ನ್ಯಾಯಾಧೀಶ ರಾಜೇಶ್ ಕರ್ಣನ್ ಆರೋಪಿಗಳಿಬ್ಬರನ್ನು ಆ.24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು ಭಾಸ್ಕರ ಶೆಟ್ಟಿಯವರ ಪತ್ನಿ ರಾಜೇಶ್ವರಿ ಶೆಟ್ಟಿ ಹಾಗೂ ಪುತ್ರ ನವನೀತ್ ಶೆಟ್ಟಿಯವರನ್ನು ಪೊಲೀಸರು ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಸಾಕ್ಷ ನಾಶದಲ್ಲಿ ನಿರಂಜನ ಭಟ್‌ನ ತಂದೆ, ಅರ್ಚಕ ಶ್ರೀನಿವಾಸ ಭಟ್ ಹಾಗೂ ಕಾರಿನ ಚಾಲಕ ರಾಘವೇಂದ್ರ ಸಹಕರಿಸಿದ್ದರು ಎಂದು ಪೊಲೀಸರು ಆರೋಪಿಸಿ ಇಬ್ಬರನ್ನೂ ಬಂಧಿಸಿದ್ದರು
ಸಿಒಡಿ ತನಿಖೆಗೆ ಗೃಹಸಚಿವರಿಗೆ ಸಚಿವ ಪ್ರಮೋದ್ ಮನವಿ
ಜು.28ರಂದು ನಡೆದ ಭಾಸ್ಕರ್ ಶೆಟ್ಟಿ ನಿಗೂಢ ನಾಪತ್ತೆ ಪ್ರಕರಣದ ತನಿಖೆಯ ಕುರಿತಂತೆ ಶೆಟ್ಟಿಯವರ ಕುಟುಂಬಸ್ಥರು ಹಾಗೂ ಸಾರ್ವಜನಿಕರು ವ್ಯಕ್ತಪಡಿಸಿರುವ ಸಂಶಯ ಹಾಗೂ ಬೇಡಿಕೆಯ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ರಾಜ್ಯ ಗೃಹಸಚಿವ ಡಾ.ಜಿ.ಪರಮೇಶ್ವರ್‌ರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ತನಿಖಾಧಿಕಾರಿಯನ್ನು ಬದಲಾಯಿಸಿ ತನಿಖೆಯನ್ನು ಚುರುಕುಗೊಳಿಸಬೇಕು ಹಾಗೂ ಈ ಬಗ್ಗೆ ಸಿಒಡಿ ತನಿಖೆ ನಡೆಸಬೇಕೆಂಬ ಭಾಸ್ಕರ ಶೆಟ್ಟಿಯವರ ಕುಟುಂಬಸ್ಥರು ಹಾಗೂ ಉಡುಪಿ ಜಿಲ್ಲಾ ಸಮಸ್ತ ಬಂಟ ಸಮುದಾಯದ ಸದಸ್ಯರ ಬೇಡಿಕೆಗೆ ಸಚಿವ ಪ್ರಮೋದ್ ಸ್ಪಂದಿಸಿದ್ದಾರೆ.