ಕೋಟ: ಕಂಟೇನರ್ ಲಾರಿಯಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 59 ಕೋಣಗಳ ರಕ್ಷಣೆ, ನಾಲ್ವರ ಬಂಧನ
ಉಡುಪಿ: ಅಕ್ರಮವಾಗಿ ಕೇರಳಕ್ಕೆ ಕಂಟೇನರ್ ಲಾರಿಯಲ್ಲಿ 59 ಕೋಣಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಕೋಟ ಪೊಲೀಸರು ಕಂಟೈನರ್ ಚಾಲಕ ಸೇರಿದಂತೆ ನಾಲ್ವರು ವ್ಯಕ್ತಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.
ಬಂಧಿತರನ್ನು ಕೇರಳದ ವಯನಾಡ್ ನಿವಾಸಿ ಅಬ್ದುಲ್ ಜಬ್ಬಾರ್ (35), ಜೋಮುನ್ (36), ಶಂಶುದ್ದೀನ್ (34) ಮುಖೀಮ್ (18) ಎಂದು ಗುರುತಿಸಲಾಗಿದೆ.
ಜುಲೈ 24 ರಂದು ಕೋಟ ಠಾಣಾ ಕಾನೂನು ಮತ್ತು ಸುವ್ಯವಸ್ಥೆ ಪಿ ಎಸ್ ಐ ಸಂತೋಷ್ ಬಿಪಿ ಅವರು ಸಿಬ್ಬಂದಿಯವರೊಂದಿಗೆ ಮುಂಜಾನೆಯ ವಿಶೇಷ ರೌಂಡ್ಸನಲ್ಲಿರುವಾಗ ಸೈಬರಕಟ್ಟೆ ಚೆಕ್‌ಪೊಸ್ಟ್ ಬಳಿ ಬಂದಿದ್ದು, ರಾತ್ರಿರೌಂಡ್ಸ್ ಕರ್ತವ್ಯದಲ್ಲಿ ಪ್ರೊಬೇಷನರಿ ಪಿಎಸ್ಐ ಅಶೋಕ್ ಹಾಗೂ ಚೆಕ್‌ಪೋಸ್ಟ್ ಕರ್ತವ್ಯದಲ್ಲಿದ್ದ ಸಿಬ್ಬಂದಿ ಪಿ.ಸಿ. 2615 ಜಯರಾಮ ಹಾಗೂ ಹೋ ಗಾರ್ಡ ಸಿಬ್ಬಂದಿ ಅಜಿತ್ ರವರು ವಾಹನ ತಪಾಸಣೆ ಮಾಡುತ್ತಿರುವಾಗ ಶಿರಿಯಾರ ಕಡೆಯಿಂದ ಸೈಬರಕಟ್ಟೆ ಕಡೆಗೆ ಬಂದ ಕೆಎ 55 ಎ 0244 ನೇ ಕಂಟೈನರ್( ಇನ್ಸುಲೇಟರ್ ವಾಹನ)ನ್ನು ತಡೆದು ನಿಲ್ಲಿಸಿ ಕಂಟೈನರ್ ಲಾರಿಯಲ್ಲಿದ್ದ ಆರೋಪಿಗಳನ್ನು ವಿಚಾರಿಸಿದ ವೇಳೆ ಕಂಟೈನರ್‌ನಲ್ಲಿ 59 ಎಮ್ಮೆಯ ಕರುಗಳನ್ನು ಮೇವು ಮತ್ತು ನೀರನ್ನು ನೀಡದೇ ಹಿಂಸಾತ್ಮಕ ರೀತಿಯಲ್ಲಿ ಯಾವುದೇ ದಾಖಲಾತಿಗಳಿಲ್ಲದೇ ಮಾಂಸ ಮಾಡುವ ಉದ್ದೇಶದಿಂದ ಕೇರಳ ರಾಜ್ಯಕ್ಕೆ ಸಾಗಿಸುತ್ತಿರುವುದು ಕಂಡು ಬಂದಿದೆ.
ಈ ಬಗ್ಗೆ ತನಿಖೆ ನಡೆಸಿ ನಾಲ್ಕು ಆರೋಪಿಗಳನ್ನು ಬಂಧಿಸಿದ್ದು, ಉಳಿದ ಇಬ್ಬರು ಆರೋಪಿಗಳಾದ ಎಮ್ಮೆ ಯ ಮಾಲಿಕ ಕೇರಳ ನಿವಾಸಿ ಅಬ್ದುಲ್ ಅಜೀಜ್ ಅಲ್ ಪ್ಪುರಾಯಿಲ್, ಕಂಟೈನರ್ ಮ್ಹಾಲಿಕ ಮೈಸೂರು ನಿವಾಸಿ ರಫೀಕ್ ಎಂಬವರನ್ನು ಬಂಧಿಸಲು ಬಾಕಿ ಇದೆ.
ಬಂಧಿತರಿಂದ ರೂ 8 ಲಕ್ಷ ಮೌಲ್ಯದ ಕಂಟೈನರ್, ರೂ 2 ಲಕ್ಷ ಮೌಲ್ಯದ 59 ಎಮ್ಮೆಕರುಗಳು ಜಾನುವಾರುಗಳನ್ನು ಕಟ್ಟಲು ಉಪಯೋಗಿಸಿದ ನೈಲಾನ್ ಹಗ್ಗ-25 ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿರುತ್ತದೆ.
ಈ ಕಾರ್ಯಾಚರಣೆಯನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ ರವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ್ ಚಂದ್ರ ,ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಟಿ. ಜೈಶಂಕರ್ ಮತ್ತು ಬ್ರಹ್ಮಾವರ ವೃತ್ತದ ಸಿ.ಪಿ.ಐ. ಅನಂತ ಪದ್ಮನಾಭ ರವರ ಮಾರ್ಗದರ್ಶನದಲ್ಲಿ, ಕೋಟ ಪೊಲೀಸ್ ಠಾಣೆಯ ಪಿ.ಎಸ್.ಐ. ಸಂತೋಷ್ ಬಿ ಪಿ(ಕಾ ಮತ್ತು ಸು), ಅಶೋಕ ಪ್ರೋಬೆಷನರಿ ಪಿ.ಎಸ್.ಐ ,ಸಿಬ್ಬಂದಿಯವರಾದ ಜಯರಾಮ, ಗಣೇಶ್ ನಾಯಕ್ ಸುರೇಶ್ ಶೆಟ್ಟಿ, ರಾಜು, ಮಂಜುನಾಥ, ಹೋ ಗಾರ್ಡ ಸಿಬ್ಬಂದಿ ಅಜಿತ್ ಇವರ ತಂಡವು ದಾಳಿಯನ್ನು ನಡೆಸಿರುತ್ತದೆ.