ಕೋಟ: ಇಂದು ಅಧಿಕಾರಿಗಳು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕಡತ ವಿಲೇವಾರಿ ಮಾಡುತ್ತಿರುವುದನ್ನು ಕಡಿಮೆಗೊಳಿಸಿ, ನೇರವಾಗಿ ಜನರೊಂದಿಗೆ ಬೆರೆತು ನೇರವಾಗಿ ಅವರ ಸಮಸ್ಯೆಗಳ ಪರಿಹಾರದ ನೀಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಭೇಟಿ ಕಾರ್ಯಕ್ರಮವನ್ನು ನಿರಂತರವಾಗಿ ಕೈಗೊಂಡಿದ್ದೇನೆ. ಇದರಿಂದ ಸ್ಥಳೀಯವಾದ ಸಾಕಷ್ಟು ಸಮಸ್ಯೆಗಳಿಗೆ ತ್ವರಿತ ವಿಲೇವಾರಿ ಸಾಧ್ಯವಾಗಿದೆ ಎಂದು ರಾಜ್ಯ ನಗರಾಭಿವೃದ್ಧಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಅವರು ಶನಿವಾರದಂದು ಐರೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಧೂಳಂಗಡಿ ಪ್ರಾಥಮಿಕ ಶಾಲೆಯಲ್ಲಿ ಉಡುಪಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸಹಭಾಗಿತ್ವದಲ್ಲಿ ಐರೋಡಿ ಗ್ರಾಮ ಪಂಚಾಯಿತಿ ವಿವಿಧ ಸವಲತ್ತು ವಿತರಣೆ ಮತ್ತು ಗ್ರಾಮ ಪಂಚಾಯಿತಿ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿನ 73000 ಎಪಿಎಲ್ ಪಡಿತರ ಕಾರ್ಡ್‍ದಾರರು ಬಿಪಿಎಲ್ ಪಡಿತರ ಕಾರ್ಡ್‍ಗಾಗಿ ಅರ್ಜಿ ಸಲ್ಲಿಸಿದ್ದಾರೆ, ಅದರಲ್ಲಿ 68000 ಬಿಪಿಎಲ್‍ಗಳನ್ನು ಈಗಾಗಲೇ ಹಂಚಿಯಾಗಿದೆ, ಉಳಿದವುಗಳನ್ನು ಶೀಘ್ರದಲ್ಲಿ ಪರಿಶೀಲಿಸಿ ನೀಡಲಾಗುವುದು. ಇಂದು ರಾಜ್ಯ 1 ಕೋಟಿ 8 ಲಕ್ಷ ಜನ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಕಳೆದ ಬಜೆಟ್‍ನಲ್ಲಿ ತಿಳಿಸುವುವಂತೆ ಇಂದು ಉಚಿತವಾಗಿ ಅನ್ನಭಾಗ್ಯದ ಅಕ್ಕಿಯನ್ನು ನ್ಯಾಯ ಬೆಲೆ ಅಂಗಡಿಯಲ್ಲಿ ವಿತರಿಸಲಾಗುತ್ತಿದೆ, ಇದರ ಜೊತೆಗೆ ತಾಳೆ ಎಣ್ಣೆ, ಆಯೋಡಿನ್‍ಯುಕ್ತ ಉಪ್ಪನ್ನು ಕೂಡ ಸರಕಾರ ನೀಡುತ್ತಿದೆ. ಅಲ್ಲದೇ ಎಪಿಎಲ್ ಕಾರ್ಡ್‍ದಾರರಿಗೂ 5 ಕೆಜಿ ಅಕ್ಕಿ, 5ಕೆಜಿ ಗೋಧಿ ನೀಡುವ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗಿದೆ ಎಂದರು.
ಹಂಗಾರಕಟ್ಟೆ ಮೀನುಗಾರಿಕಾ ರಸ್ತೆ ಅರ್ಧ ಭಾಗವು ಪಿಡಬ್ಲೂಡಿ ಮತ್ತು ಇನ್ನರ್ಧ ಭಾಗ ಮೀನುಗಾರಿಕಾ ಇಲಾಖೆ ಸಂಬಂಧಪಟ್ಟದಾಗಿದೆ. ಈ ರಸ್ತೆಯ ಸಂಪೂರ್ಣ ಅಭಿವೃದ್ಧಿಯ ಕುರಿತು ಮೀನಗಾರಿಕಾ ಸಚಿವರಲ್ಲಿ ಹಾಗೂ ಸಂಬಂಧಪಟ್ಟ ಇಲಾಖೆಯಲ್ಲಿ ಅನುಮೋದನೆ ಇಡುತ್ತೇನೆ. ಐರೋಡಿ ಗ್ರಾಮಪಂಚಾಯಿತಿಯ ಬಾಳ್ಕುದ್ರು ಗ್ರಾಮವು ಗ್ರಾಮ ವಿಕಾಸ ಯೋಜನೆಯಲ್ಲಿ ಸೇರಿಸಲಾಗಿದೆ. ಇಲ್ಲಿನ ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 24 ಕೋಟಿ ವೆಚ್ಚದಲ್ಲಿ ಆರಂಭವಾಗಲಿರುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ಸೇರಿಸಲಾಗುವುದು ಇದರಿಂದ ಇಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ರೋಶನಿ ಒಲಿವರ, ಐರೋಡಿ ಪಂಚಾಯಿತಿ ಅಧ್ಯಕ್ಷೆ ಕಸ್ತೂರಿ ಹೆಬ್ಬಾರ್, ಉಪಾಧ್ಯಕ್ಷ ಶೇಖರ ಪೂಜಾರಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಶಂಕರ ಕುಂದರ್, ಬ್ರಹ್ಮಾವರ ತಹಶೀಲ್ದಾರ್ ತಿಪ್ಪೆಸ್ವಾಮಿ, ಕಂದಾಯ ಇಲಾಖೆಯ ಸುಧಾಕರ್ ಶೆಟ್ಟಿ ಮತ್ತು ವಿವಿಧ ಇಲಾಖೆಯ ಪ್ರಮುಖರು ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭ ಸಚಿವರು ವಿವಿಧ ಇಲಾಖೆಯಿಂದ ಸಿಗುವ ಸಂಧ್ಯಾ ಸುರಕ್ಷೆ, ವಿಧವಾ ವೇತನ, ಸಾಲಮನ್ನ ಪತ್ರ, ಬಿಪಿಎಲ್ ಪಡಿತರ ಚೀಟಿಗಳನ್ನು ವಿತರಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯರಾಮ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿದರು.