ಕೋಟ ಜೋಡಿ ಕೊಲೆ ಪ್ರಕರಣ; ಮತ್ತೆ ಇಬ್ಬರು ಆರೋಪಿಗಳ ಬಂಧನ
ಉಡುಪಿ : ಕೋಟದ ಮಣೂರು ಗ್ರಾಮದ ಚಿಕ್ಕನಕೆರೆಯಲ್ಲಿ ಇತ್ತೀಚೆಗೆ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಪೊಲೀಸರು ಗುರುವಾರ ಇನ್ನೂ 2 ಮಂದಿಯನ್ನು ಬಂಧಿಸಿರುವುದಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಬಂಧಿತರನ್ನು ಮಣೂರು ಚಿಕ್ಕನಕೆರೆ ನಿವಾಸಿ ಚಂದ್ರಶೇಖರ ರೆಡ್ಡಿ (48) ಮತ್ತು ಬ್ರಹ್ಮಗಿರಿ ನಿವಾಸಿ ರತೀಶ್ ಎಮ್ ಕರ್ಕೇರಾ (34) ಎಂದು ಗುರುತಿಸಲಾಗಿದೆ.
ಆರೋಪಿ ಚಂದ್ರಶೇಖರ ರೆಡ್ಡಿ ಪಿಕಪ್ ಹೊಂದಿದ್ದು ಚಾಲಕ ವೃತ್ತಿ ಮಾಡಿಕೊಂಡಿದ್ದು, ಈತನು ಕೊಲೆ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದು, ಫೆಬ್ರವರಿ 14 ರಂದು ಬಂಧಿಸಿದರೆ, ರತೀಶ್ ಕರ್ಕೇರಾ ವ್ಯವಹಾರ ಮಾಡಿಕೊಂಡಿದ್ದು, ಆರೋಪಿಗಳಿಗೆ ತಲೆ ಮರೆಸಿಕೊಳ್ಳಲು ಸಹಕರಿಸಿದ್ದಾನೆ, ಈತನನ್ನು ಫೆಬ್ರವರಿ 12 ರಂದು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಸಿಟಿ ಆಸ್ಪತ್ರೆಯ ಬಳಿ ದಸ್ತಗಿರಿ ಮಾಡಿದ್ದು ಆಪಾದಿತನು ನ್ಯಾಯಾಂಗ ಬಂಧನಲ್ಲಿರುತ್ತಾನೆ. ಇದರೊಂದಿಗೆ ಯುವಕರಿಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ಹದಿನೈದಕ್ಕೇರಿದೆ.
ಕೊಲೆ ಆರೋಪಿಗಳಿಗೆ ಸಹಕರಿಸಿದ ಆರೋಪದಲ್ಲಿ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯಾದ ಪವನ್ ಅಮಿನ್ ಮತ್ತು ವೀರೇಂದ್ರ ಆಚಾರ್ಯ ಎಂಬವರನ್ನು ಬಂಧಿಸಿದ್ದರೆ ಆರೋಪಿಗಳಿಗೆ ಸಹಕರಿಸಿದ ಆರೋಪದ ಮೇಲೆ ಉಡುಪಿ ಪುತ್ತೂರು ಸುಬ್ರಹ್ಮಣ್ಯ ನಗರದ ಅಭಿಷೇಕ @ ಅಭಿ ಪಾಲನ್ (23), ಬಾರ್ಕೂರು ಹನೆಹಳ್ಳಿ ಗ್ರಾಮದ ಸಂತೋಷ್ ಕುಂದರ್ (35) ಬ್ರಹ್ಮಾವರ ನಿವಾಸಿ ನಾಗರಾಜ @ ರೊಟ್ಟಿ ನಾಗರಾಜ(44), ಭದ್ರಾವತಿ ನಿವಾಸಿ ಪ್ರಣವ್ ರಾವ್ (20) ಮತ್ತು ಅಂಜಾರು ನಿವಾಸಿ ಶಂಕರ ಮೊಗವೀರ(41) ಬಂಧಿಸಲಾಗಿತ್ತು.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಫೆ.15ರ ತನಕ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ತಿಳಿಸಿದ್ದಾರೆ.
ಮಣೂರು ಗ್ರಾಮದ ಚಿಕ್ಕನಕೆರೆಯಲ್ಲಿ ಶೌಚಾಲಯ ಹೊಂಡದ ವಿವಾದಕ್ಕೆ ಸಂಬಂಧಿಸಿ ಭರತ್ ಕುಮಾರ್ ಮತ್ತು ಯತೀಶ್ ಎಂಬವರನ್ನು ತಂಡವೊಂದು ಜ.26ರಂದು ಕೊಲೆಗೈದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಪಂ ಬಿಜೆಪಿ ಸದಸ್ಯ ರಾಘವೇಂದ್ರ ಕಾಂಚನ್, ರೌಡಿಶೀಟರ್ ರಾಜಶೇಖರ ರೆಡ್ಡಿ, ಮೆಡಿಕಲ್ ರವಿ, ಹರೀಶ್ ರೆಡ್ಡಿ, ಮಹೇಶ್ ಗಾಣಿಗ, ರವಿಚಂದ್ರ ಪೂಜಾರಿ, ಪವನ್ ಅಮಿನ್ ಮತ್ತು ವೀರೇಂದ್ರ ಆಚಾರ್ಯ ಆರೋಪಿಗಳಿಗೆ ಸಹಕರಿಸಿದ ಆರೋಪದ ಮೇಲೆ ಉಡುಪಿ ಪುತ್ತೂರು ಸುಬ್ರಹ್ಮಣ್ಯ ನಗರದ ಅಭಿಷೇಕ @ ಅಭಿ ಪಾಲನ್, ಬಾರ್ಕೂರು ಹನೆಹಳ್ಳಿ ಗ್ರಾಮದ ಸಂತೋಷ್ ಕುಂದರ್ , ಬ್ರಹ್ಮಾವರ ನಿವಾಸಿ ನಾಗರಾಜ @ ರೊಟ್ಟಿ ನಾಗರಾಜ, ಭದ್ರಾವತಿ ನಿವಾಸಿ ಪ್ರಣವ್ ರಾವ್ , ಮತ್ತು ಅಂಜಾರು ನಿವಾಸಿ ಶಂಕರ ಮೊಗವೀರ ಎಂಬವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇದೀಗ ಎರಡು ಮಂದಿಯ ಬಂಧನದೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ಒಟ್ಟು ಹದಿನೈದಕ್ಕೇರಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಎಸ್ಪಿ ಲಕ್ಷ್ಮಣ್ ನಿಂಬರಗಿ ಮತ್ತು ಹೆಚ್ಚುವರಿ ಎಸ್ಪಿ ಕುಮಾರ್ ಚಂದ್ರ ಅವರ ಮಾರ್ಗದರ್ಶನದಲ್ಲಿ ಉಡುಪಿ ಡಿವೈಎಸ್ಪಿ ಜೈಶಂಕರ್ ನೇತೃತ್ವದಲ್ಲಿ ಐದು ಪೊಲೀಸ್ ತಂಡಗಳು ಉಡುಪಿ ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ, ಕಾಪು ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್, ಬ್ರಹ್ಮಾವರ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಕಾಂತ್, ಡಿಸಿಐಬಿ ಇನ್ಸ್ಪೆಕ್ಟರ್ ಕಿರಣ್, ಮಹಿಳಾ ಠಾಣೆಯ ಇನ್ಸ್ಪೆಕ್ಟರ್ ಸಂಪತ್ ಕುಮಾರ್ ನೇತೃತ್ವದ ತಂಡಗಳು ಕ್ಷೀಪ್ರವಾಗಿ ಕಾರ್ಯಚರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.