ಕೋಮುವಾದಿಗಳ ಅಜೆಂಡಗಳಿಗೆ ಬಲಿಯಾಗದಿರಿ; ಜಮಾಅತೆ ಇಸ್ಲಾಮಿ ಹಿಂದ್
ಹೊಸದಿಲ್ಲಿ: ದೇಶದಲ್ಲಿ ಹೆಚ್ಚುತ್ತಿರುವ ಜನರ ಗುಂಪಿನ ದಾಳಿ, ಕೊಲೆ ಪಾತಕಗಳನ್ನು ಎದುರಿಸುವುದಕ್ಕಾಗಿ ಸಹ ಜೀವಿಗಳ ನಡುವೆ ಸೇತುವೆ ನಿರ್ಮಿಸಬೇಕಾಗಿದೆ. ದ್ವೇಷ ಪ್ರಚಾರದಿಂದ ದೂರ ನಿಲ್ಲಬೇಕೆಂದು ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷರಾದ ಸಯ್ಯಿದ್ ಜಲಾಲುದ್ದೀನ್ ಉಮರಿ ಮುಸ್ಲಿಮ್ ಯುವಕರಿಗೆ ಕರೆ ನೀಡಿದ್ದಾರೆ. ಹೊಸ ದಿಲ್ಲಿಯಲ್ಲಿ ಜಮಾಅತೆ ಇಸ್ಲಾಮಿಯ ಕೇಂದ್ರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತಾಡುತ್ತಿದ್ದರು.
ಮುಸ್ಲಿಂ ಯುವಕರು ನಿರಾಶರಾಗಬೇಡಿರಿ. ದುಃಖಿಸಬೇಡಿರಿ. ಅವರು ಅಪಪ್ರಚಾರಕ್ಕೆ ಮರುಳಾಗದೆ ಭಾವನಾತ್ಮಕ ಪ್ರತಿಕ್ರಿಯೆಯಿಂದ ದೂರ ಇರಬೇಕು. ಮುಸ್ಲಿಮರು ನಿರಾಶರಾಗಲಿ, ಮುಖ್ಯವಾಹಿನಿಂದ ದೂರವಾಗಲಿ ಎಂದು ಕೋಮು ಶಕ್ತಿಗಳು ಬಯಸುತ್ತಿವೆ. ಭಯ ಮತ್ತು ನಿರಾಶೆಯ ಭಾಷೆಯನ್ನು ನಾವು ಉಪಯೋಗಿಸಬಾರದು. ಅದರಂತೆ ನಾವು ಘರ್ಷಣಾತ್ಮಕ ಮತ್ತು ಕೋಮುವಾದಿ ಭಾಷೆಯನ್ನು ಕೂಡಾ ಬಳಸಬಾರದು. ನಮ್ಮ ಭಾವನಾತ್ಮಕ ಪ್ರತಿಕ್ರಿಯೆಗಳು ಅಸಮತೋಲನದ ಹೇಳಿಕೆಗಳು ಕೋಮುವಾದಿಗಳ ಒಡಕು ಮೂಡಿಸುವ ಅಜೆಂಡಕ್ಕೆ ಸಹಕಾರಿಯಾಗಿ ಪರಿವರ್ತನೆಯಾಗುತ್ತದೆ. ಈಗಿನ ಪರಿಸ್ಥಿತಿಯು ಕೋಮು ಗಲಭೆಯಾಗಿ ಪರಿವರ್ತನೆಯಾಗದಿರಲು ಎಲ್ಲ ಪ್ರಯತ್ನಗಳನ್ನು ಮಾಡಬೇಕಾಗಿದೆ. ಇಂತಹ ಸಂದರ್ಭದಲ್ಲಿ ಮುಸ್ಲಿಮೇತರ ಸಹೋದರರೊಂದಿಗೆ ಸಂಬಂಧ ಬಲಪಡಿಸಬೇಕು. ಆಶಯ ವಿನಿಮಯವನ್ನು ಹೆಚ್ಚು ಗಟ್ಟಿಗೊಳಿಸಬೇಕು. ಇದಕ್ಕಾಗಿ ಅಭಿಯಾನ ನಡೆಸಬೇಕು. ಇಸ್ಲಾಮಿನ ಸರಿಯಾದ ಶಿಕ್ಷಣಗಳನ್ನು ಕೊಟ್ಟು ಅವರಲ್ಲಿರುವ ತಪ್ಪಾಭಿಪ್ರಾಯ ಮತ್ತು ಪೂರ್ವಗ್ರಹಗಳನ್ನು ನಾವು ನಿವಾರಿಸಬೇಕು. ಜೊತೆಗೆ ದೇಶದ ಮುಸ್ಲಿಮೇತರ ಸಹೋದರ ಜೊತೆಗೆ ನಿಂತು ದಮನ ಮತ್ತು ಅನ್ಯಾಯಗಳ ವಿರುದ್ಧ ಧ್ವನಿಯೆತ್ತಬೇಕು ಎಂದು ಜಮಾಅತ್ ಅಧ್ಯಕ್ಷರು ಮುಸ್ಲಿಮರೊಂದಿಗೆ ವಿನಂತಿಸಿದ್ದಾರೆ.