ಕೋಮು ಗಲಭೆ ನಡೆಸುವವರಿಗೆ ರೈತರ ನೋವಿನ ಭಾಷೆ ಅರ್ಥವಾಗುತ್ತಿಲ್ಲ; ಪ್ರಕಾಶ್ ರೈ
ಮಂಗಳೂರು: ಯಾರಿಗೆ ರೈತರ ನೋವು ಅರ್ಥ ಮಾಡಿಕೊಳ್ಳುವುದಿಲ್ಲ ಅಂತಹವರು ಕೋಮು ಘರ್ಷಣೆ ಉಂಟುಮಾಡುವ ಕಾಯಕದಲ್ಲಿ ತೊಡಗಿಕೊಳ್ಳುತ್ತಾರೆ ಎಂದು ನಟ ಪ್ರಕಾಶ್ ರೈ ಪ್ರತಿಕ್ರಿಯಿಸಿದ್ದಾರೆ.
ಅವರು ಶುಕ್ರವಾರ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ ಕರಾವಳಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದು ಕೆಲವು ವ್ಯಕ್ತಿಗಳು ಕರಾವಳಿ ಉತ್ಸವ ನಡೆಯಲು ಬಿಡುವುದಿಲ್ಲ ಎಂಬ ಬೆದರಿಕೆ ಹಾಕುತ್ತಿದ್ದು, ತಾನು ಈ ಕಾರ್ಯಕ್ರಮಕ್ಕೆ ಬರದಂತೆ ತಡೆಯಲು ಪ್ರಯತ್ನ ಕೂಡ ಮಾಡಿದ್ದಾರೆ. ನಮಗೆ ಕೋಮು ಘರ್ಷಣೆಗಳ ಅಗತ್ಯಗಳಿಲ್ಲ ಬದಲಾಗಿ ಇಂತಹ ಉತ್ಸವಗಳ ಅಗತ್ಯತೆ ಇದೆ. ಕೋಮು ಘರ್ಷಣೆಗೆ ಅಪೇಕ್ಷೆ ಪಡುವ ವ್ಯಕ್ತಿಗಳಿಗೆ ರೈತರ ಸಮಸ್ಯೆಯಾಗಲಿ ಯುವಜನರ ನಿರುದ್ಯೋಗ ಸಮಸ್ಯೆಯಾಗಲಿ ಕಣ್ಣಿಗೆ ಕಾಣುವುದಿಲ್ಲ. ಯಾವುದೇ ವ್ಯಕ್ತಿಯ ಸಾವಿಗೆ ಕೋಮು ಬಣ್ಣ ಕಟ್ಟಿದರೆ ಘರ್ಷಣೆಗೆ ಕಾರಣವಾಗುತ್ತದೆ ಅದಕ್ಕೆ ಬದಲಾಗಿ ಪೋಲಿಸರೊಂದಿಗೆ ಕುಳಿತು ಪ್ರಕರಣ ಶಾಂತಿಯುತವಾಗಿ ಪರಿಹರಿಸುವುದು ಉತ್ತಮ. ನಾವು ಮೊದಲು ಮಾನವರಾಗಬೇಕು. ನಮ್ಮ ಮಕ್ಕಳ ಮುಂದಿನ ಭವಿಷ್ಯವಿರುವುದು ನಮ್ಮ ಕೈಯಲ್ಲಿ ಅದನ್ನು ಚಿವುಟುವ ಕೆಲಸ ಮಾಡಬಾರದು ಬದಲಾಗಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದರು.
ಕೆಲವರಿಗೆ ಅರ್ಥ ಆಗುವ ನಾನು, ಕೆಲವರಿಗೆ ಖಳನಟ. ಕರಾವಳಿಯ ಕೂಸು ನಾನು ಪ್ರಕಾಶ್ ರೈ ಅಥವಾ ಪ್ರಕಾಶ್ ರಾಜ್. ನಾನು ಯಾರು ಎಂದು ಪ್ರತಾಪ ಸಿಂಹ ಪ್ರಶ್ನಿಸಿದ್ದಾರೆ. ನನ್ನ ತವರಿನ ಈ ವೇದಿಕೆಯಿಂದಲೇ ಅವರಿಗೆ ಉತ್ತರ ನೀಡುತ್ತಿದ್ದೇನೆ ಎಂದ ಅವರು, ನಾನು ಪ್ರಕಾಶ್ ರೈ ಆಗಿರಲಿ, ಪ್ರಕಾಶ್ ರಾಜ್ ಆಗಿರಲಿ. ಇದರಿಂದ ನಿಮಗೇನು ಸಮಸ್ಯೆ ಎಂದು ಪ್ರಶ್ನಿಸಿದರು.
ಪ್ರಕಾಶ್ ರೈ ನನ್ನ ನಿಜವಾದ ಹೆಸರು. ಪ್ರಕಾಶ್ ರಾಜ್ ಸಿನಿಮಾ ಹೆಸರು. ನನ್ನನ್ನು ಪ್ರಶ್ನಿಸುವ ನೀವು, ರಜನೀಕಾಂತ್, ರಾಜ್‌ಕುಮಾರ್, ವಿಷ್ಣುವರ್ಧನ್ ಅವರನ್ನು ಪ್ರಶ್ನಿಸುತ್ತೀರಾ ಎಂದು ಕೇಳಿದರು.
ನೀವು ಆ ರೀತಿ ಕೇಳಿದರೆ, ನಾವೂ ನಿಮ್ಮನ್ನು ಕೇಳಬೇಕಾಗುತ್ತದೆ. ನಿಮ್ಮ ಹೆಸರಿನಲ್ಲಿಯೇ ಸಿಂಹವಿದೆ. ನೀವು ಮನುಷ್ಯರೋ, ಪ್ರಾಣಿಯೋ? ನೀವು ಮಾತನಾಡುತ್ತೀರೋ ಇಲ್ಲ ಗರ್ಜಿಸುತ್ತೀರೊ? ಊಟ ಮಾಡುತ್ತೀರಾ ಇಲ್ಲ ಬೇಟೆ ಆಡುತ್ತೀರಾ ಎಂದು ಕೇಳಬೇಕಾಗುತ್ತದೆ. ಆದರೆ, ನಾನು ನಿಮ್ಮ ರೀತಿ ಮಾತನಾಡುವುದಿಲ್ಲ ಎಂದರು. ನನಗಿಂತ ಕನ್ನಡಿಗರು ನೀವಲ್ಲ. ನಿಮಗೆ ಅವಾಚ್ಯ ಭಾಷೆ ಗೊತ್ತು. ನಮಗೆ ಅದು ಬರುವುದಿಲ್ಲ ಎಂದರು.
ನಾವೆಲ್ಲ ಒಂದೇ ಎಂದು ಸಾರುವ ಕರಾವಳಿ ಉತ್ಸವಕ್ಕೆ ಬಂದಿರುವ ನನ್ನನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅದು ಅವರ ಭಾಷೆ. ನಾವು ಮಾತ್ರ ನಮ್ಮಸಭ್ಯ ಭಾಷೆಯಲ್ಲಿ ಮಾತನಾಡೋಣ ಎಂದು ಹೇಳಿದರು.
ಒಂದು ಸಾವಿಗೆ ಕಂಬನಿ ಮಿಡಿಯುತ್ತಿದ್ದ ನಾಡಿನಲ್ಲಿ, ಸಾವಿನಲ್ಲಿ ರಾಜಕೀಯ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಾಜ ನಿರ್ಮಾಣ ಆಗದ ರೀತಿಯಲ್ಲಿ ನಾವು ಎಚ್ಚರಿಕೆ ವಹಿಸಬೇಕಾಗಿದೆ. ಭಯವಿಲ್ಲದ, ಪ್ರಶ್ನೆ ಮಾಡುವ ವಾತಾವರಣ ನಿರ್ಮಾಣ ಆಗಬೇಕು. ಮಾನವೀಯ ಮೌಲ್ಯ ಎತ್ತಿ ಹಿಡಿಯುವಂತಾಗಬೇಕು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು ಟಿ ಖಾದರ್, ಶಾಸಕರಾದ ಮೊಯ್ದಿನ್ ಬಾವಾ, ಜೆ ಆರ್ ಲೋಬೊ, ಜಿಲ್ಲಾಧಿಕಾರಿ ಸಶಿಕಾಂತ್ ಸೆಂಥಿಲ್, ಪೋಲಿಸ್ ಕಮೀಷನರ್ ಟಿ ಆರ್ ಸುರೇಶ್, ಪಾಲಿಕೆ ಆಯುಕ್ತ ಮಹಮ್ಮದ್ ನಝೀರ್, ಜಿಪಂ ಸಿಇಒ ರವಿ, ಅಪರ ಜಿಲ್ಲಾಧಿಕಾರಿ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.