Home Mangalorean News Kannada News ಕೋವಿಡ್ ತಪಾಸಣೆ ವೇಳೆ ಮೈಸೂರು ಡಿಸಿ ನಂಬರ್ ಕೊಟ್ಟ ಸೋಂಕಿತ – ಕರೆ ಸ್ವೀಕರಿಸಿ ದಂಗಾದ...

ಕೋವಿಡ್ ತಪಾಸಣೆ ವೇಳೆ ಮೈಸೂರು ಡಿಸಿ ನಂಬರ್ ಕೊಟ್ಟ ಸೋಂಕಿತ – ಕರೆ ಸ್ವೀಕರಿಸಿ ದಂಗಾದ ಜಿಲ್ಲಾಧಿಕಾರಿ

Spread the love

ಕೋವಿಡ್ ತಪಾಸಣೆ ವೇಳೆ ಮೈಸೂರು ಡಿಸಿ ನಂಬರ್ ಕೊಟ್ಟ ಸೋಂಕಿತ – ಕರೆ ಸ್ವೀಕರಿಸಿ ದಂಗಾದ ಜಿಲ್ಲಾಧಿಕಾರಿ

ಮೈಸೂರು: ತಪಾಸಣೆ ವೇಳೆ ಮೈಸೂರು ಜಿಲ್ಲಾಧಿಕಾರಿ ನಂಬರ್ ಕೊಟ್ಟು ಕೊರೊನಾ ಸೋಂಕಿತನೊಬ್ಬ ಕಿತಾಪತಿ ಮಾಡಿರುವ ಘಟನೆ ಮೈಸೂರಿನ ಹೆಬ್ಬಾಳ ಬಡಾವಣೆಯಲ್ಲಿ ನಡೆದಿದೆ.

ಕೊರೊನಾ ತಪಾಸಣೆಗೆ ಬಂದ ವ್ಯಕ್ತಿಯೋರ್ವ ಪರೀಕ್ಷೆ ವೇಳೆ ತನ್ನ ನಂಬರ್ ಬದಲಿಗೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಅವರ ನಂಬರ್ ಅನ್ನು ಜಿಲ್ಲಾಡಳಿತಕ್ಕೆ ಕೊಟ್ಟು ಯಾಮಾರಿಸಿದ್ದಾನೆ. ಇದಾದ ಬಳಿಕ ಆ ವ್ಯಕ್ತಿಯ ಕೊರೊನಾ ವರದಿ ಬಂದಿದ್ದು, ಆತನಿಗೆ ಕೊರೊನಾ ಇರುವುದು ದೃಢಪಟ್ಟಿದೆ.

ಆತನಿಗೆ ಕೊರೋನಾ ದೃಢಪಟ್ಟ ಹಿನ್ನಲೆಯಲ್ಲಿ ಮೈಸೂರು ಜಿಲ್ಲಾಡಳಿತದ ಕೊರೋನಾ ಕಂಟ್ರೋಲ್ ರೂಂ ನಿಂದ ಕರೆ ಮಾಡಿ ನಿಮಗೆ ಪಾಸಿಟಿವ್ ಬಂದಿದೆ ಎಲ್ಲಿದ್ದೀರಾ ಎಂದು ಕೇಳಿದ್ದು, ಕಂಟ್ರೋಲ್ ರೂಮಿನ ಮಾತುಗಳನ್ನು ಕೇಳಿ ಒಮ್ಮೆ ಗಾಬರಿಯಾದ ಡಿಸಿಯವರು, ನನಗೆ ಕೊರೊನಾ ಇದ್ಯಾ ಎಂದು ಭಾವಿಸಿ ನಾನ್ ರೀ ಜಿಲ್ಲಾಧಿಕಾರಿ ಮಾತಾನಾಡುತ್ತಿದ್ದೇನೆ ಎಂದು ಡಿಸಿ ಅಭಿರಾಮ್ ಅವರು ಹೇಳಿದ್ದಾರೆ.

ಆಗ ಜಿಲ್ಲಾಡಳಿತದವರು ನಂಬರ್ ನೋಡಿ ಚೆಕ್ ಮಾಡಿದಾಗ ಕೊರೊನಾ ಸೋಂಕಿತ ಪರೀಕ್ಷೆ ವೇಳೆ ಆತನ ನಂಬರ್ ಬದಲು ಡಿಸಿ ಅವರ ನಂಬರ್ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಸದ್ಯ ತಪ್ಪು ನಂಬರ್ ಕೊಟ್ಟು ಕೊರೊನಾ ಸೋಂಕಿತ ಎಸ್ಕೇಪ್ ಆಗಿದ್ದು, ಸೋಂಕಿತನಿಗಾಗಿ ಅಧಿಕಾರಿಗಳು ಹುಡುಕಾಟ ಶುರು ಮಾಡಿದ್ದಾರೆ.

ಈ ವಿಚಾರವಾಗಿ ಬೇಸರದಿಂದ ಈ ರೀತಿ ಕಿತಾಪತಿ ಕೆಲಸ ಮಾಡಿದ ವ್ಯಕ್ತಿಗೆ ಸಲಹೆ ನೀಡಿರುವ ಜಿಲ್ಲಾಧಿಕಾರಿ ಅಭಿರಾಮ್ ಅವರು, ಈ ರೀತಿ ಮಾಡಿದರೆ ಕೊರೊನಾ ಸಮಸ್ಯೆ ಜಿಲ್ಲೆಯಲ್ಲಿ ಮತ್ತಷ್ಟು ಉಲ್ಬಣ ಆಗಲಿದೆ. ಸಾರ್ವಜನಿಕರು ಕೊರೊನಾ ಕಂಟ್ರೋಲ್ ರೂಂಗೆ ಸರಿಯಾಗಿ ಸಹಕರಿಸುವಂತೆ ಮನವಿ ಮಾಡಿದ್ದಾರೆ.


Spread the love

Exit mobile version