ಕೋವಿಡ್ ಸಂಕಷ್ಟ ನಿವಾರಣೆಗೆ ಕೇಂದ್ರ ಸರಕಾರ ಘೋಷಿಸಿದ 20 ಕೋಟಿ ಪ್ಯಾಕೇಜ್ ಯಾರಿಗೆ ತಲುಪಿದೆ – ಬಿಕೆ ಹರಿಪ್ರಸಾದ್

Spread the love

ಕೋವಿಡ್ ಸಂಕಷ್ಟ ನಿವಾರಣೆಗೆ ಕೇಂದ್ರ ಸರಕಾರ ಘೋಷಿಸಿದ 20 ಕೋಟಿ ಪ್ಯಾಕೇಜ್ ಯಾರಿಗೆ ತಲುಪಿದೆ – ಬಿಕೆ ಹರಿಪ್ರಸಾದ್

ಉಡುಪಿ: ಶಿರಾ ವಿಧಾನಸಭೆ ಕ್ಷೇತ್ರ ಉಪಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅದು ಇರುವುದು ಬಿಜೆಪಿಯಲ್ಲಿ ಎಂದು ವಿಧಾನ ಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಶಿರಾದಲ್ಲಿ ಬಿಜೆಪಿಗೆ ಅಭ್ಯರ್ಥಿಗಳೇ ಇರಲಿಲ್ಲ. ಕಾಂಗ್ರೆಸ್ ಗೆ ಅರ್ಜಿ ಸಲ್ಲಿಸಿದವರನ್ನು ಬಿಜೆಪಿಯವರು ಎತ್ತಿಕೊಂಡು ಹೋಗಿದ್ದಾರೆ ಎಂದು ಟೀಕಿಸಿದರು.

ಬಿಜೆಪಿಯವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಶರಶಯ್ಯೆಯಲ್ಲಿ ಮಲಗಿಸಿದ್ದಾರೆ ಎಂದು ಕುಹಕವಾಡಿದ ಹರಿಪ್ರಸಾದ್, ಯಡಿಯೂರಪ್ಪ ಅವರು ಭೀಷ್ಮಾಚಾರ್ಯರಂತಿದ್ದಾರೆ. ಅವರು ಯಾವತ್ತು ಬೇಕಾದರೂ ಅಧಿಕಾರದಿಂದ ಹೋಗಬಹುದು. ಆದರೆ, ಚುನಾವಣೆ ಮುಗಿದ ಬಳಿಕ ಯಡಿಯೂರಪ್ಪ ಅಧಿಕಾರದಿಂದ ಕೆಳಗೆ ಬೀಳುತ್ತಾರೆ ಎಂದು ಬಿ.ಕೆ. ಹರಿಪ್ರಸಾದ್ ಭವಿಷ್ಯ ನುಡಿದರು

ಜಿಲ್ಲೆಯಲ್ಲಿ ಮತದಾರರ ಪಟ್ಟಿಯಲ್ಲಿ ಅನೇಕ ಪ್ರಮಾದಗಳು ಕಂಡುಬಂದಿದ್ದು, ಒಂದು ಕುಟುಂಬದ ಸದಸ್ಯರಿಗೆ ಬೇರೆ ಬೇರೆ ಬೂತ್ಗಳಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದು ಬಿಜೆಪಿಯ ಷಡ್ಯಂತ್ರವಾಗಿದ್ದು, ಇದಕ್ಕೆ ಜಿಲ್ಲಾಡಳಿತ ಸಾಥ್ ನೀಡಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಮತದಾರರನ್ನು ಗುರುತಿಸಿ 2 ಕಿಮೀ ದೂರದ ಮತಗಟ್ಟೆಗೆ ಹೋಗಿ ಮತದಾನ ಮಾಡುವಂತೆ ಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಸ್ಥಳೀಯ ಮಟ್ಟದಲ್ಲಿ ಒಂದು ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಕಾರ್ಯಕ್ಕೆ ಜಿಲ್ಲಾಡಳಿತ ಸಹಕಾರ ನೀಡುತ್ತಿರುವುದು ಖಂಡನೀಯ. ಹೀಗಾಗಿ ಮತದಾರರ ಪಟ್ಟಿಯ ತಪ್ಪುಗಳನ್ನು ಸರಿಪಡಿಸಲು ಬೂತ್ಮಟ್ಟದಲ್ಲಿ ಬಿಎಲ್ಎ 1 ಮತ್ತು ಬಿಎಲ್ಎ 2 ಕಾರ್ಯಕರ್ತರನ್ನು ನೇಮಕ ಮಾಡಲಾಗುತ್ತಿದೆ ಎಂದರು.

ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರು ಸಭಾತ್ಯಾಗ ಮಾಡಿದ ಬಳಿಕ ಕೇಂದ್ರ ಸರ್ಕಾರ ಭೂ ಸುಧಾರಣಾ ಕಾಯ್ದೆಯನ್ನು ಪಾಸ್ ಮಾಡಿಸಿಕೊಂಡಿದೆ. ಇದರ ವಿರುದ್ಧ ಕಾಂಗ್ರೆಸ್ ಪ್ರಭಾರ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚನೆಯಂತೆ ರಾಷ್ಟ್ರಮಟ್ಟದಲ್ಲಿ 5 ಕೋಟಿ ರೈತರ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕಾಯ್ದೆಯಿಂದ ಅವಿಭಜಿತ ದ.ಕ. ಜಿಲ್ಲೆಯಲ್ಲಿ 45 ವರ್ಷದ ಹಿಂದೆ ಒಕ್ಕಲು ಮಸೂದೆಯಲ್ಲಿ ಭೂಮಿ ಪಡೆದವರ ಜಾಗಗಳು ಮತ್ತೆ ಬಂಡವಾಳಶಾಹಿಗಳ ಪಾಲಾಗುವ ಸಂಭವವಿದೆ ಎಂದರು.

ಕೇಂದ್ರ ಸರ್ಕಾರ ಕೋವಿಡ್ ಸಂಕಷ್ಟ ನಿವಾರಣೆಗೆ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಪ್ರಕಟಿಸಿದೆ. ಆದರೆ ಹಣ ಯಾರಿಗೆ ತಲುಪುತ್ತಿದೆ ಎಂಬ ಮಾಹಿತಿಯಿಲ್ಲ. ಮೀನುಗಾರರಿಗೆ ಕೋವಿಡ್ ನಷ್ಟ ಭರಿಸಿಕೊಡಬೇಕು. ಇತ್ತೀಚಿನವರೆಗೆ 70 ವರ್ಷದಲ್ಲಿ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದವರು ಈಗ ದೇವರ ಆಟ ಎಂದು ದೇವರ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಕೆಪಿಸಿಸಿ ಪ್ರ.ಕಾ. ಎಂ.ಎ. ಗಫೂರ್ ಉಪಸ್ಥಿತರಿದ್ದರು.


Spread the love