ಕೋವಿಡ್ -19 ; ಮಂಗಳೂರು ಧರ್ಮಪ್ರಾಂತ್ಯದಲ್ಲಿ ಮಾ. 31ರ ವರೆಗೆ ಚರ್ಚ್ ಗಳಲ್ಲಿ ಬಲಿಪೂಜೆಗಳು ರದ್ದು
ಮಂಗಳೂರು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳೂರು ಪ್ರಾಂತ್ಯದ ಎಲ್ಲಾ ಚರ್ಚುಗಳಲ್ಲಿ ನಿಗದಿತ ಸಮಯದಲ್ಲಿ ನಡೆಯುವ ಎಲ್ಲಾ ಬಲಿಪೂಜೆಗಳನ್ನು ರದ್ದುಗೊಳಿಸಿ ಧರ್ಮಾಧ್ಯಕ್ಷರಾದ ಅತೀ ವಂದನೀಯ ಪೀಟರ್ ಪಾವ್ಲ್ ಸಲ್ದಾನ್ಹಾರವರು ಆದೇಶ ನೀಡಿದ್ದಾರೆ.
ಕೊರೊನಾ ವೈರಸ್ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಧಿಕಾರಿಯವರು ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೆಗೊಳಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನಸೇರುವುದನ್ನು ತಡೆಗಟ್ಟಲು ಜಿಲ್ಲಾಧಿಕಾರಿಯವರು ಈ ಆದೇಶ ನೀಡಿದ್ದಾರೆ. ಆದ್ದರಿಂದ ಈ ಹಿನ್ನೆಲೆಯಲ್ಲಿ ಮಂಗಳೂರು ಧರ್ಮ ಪ್ರಾಂತ್ಯಕ್ಕೆ ಒಳಪಡುವ ಎಲ್ಲಾ ಚರ್ಚ್ ಗಳಲ್ಲಿ ಬಲಿಪೂಜೆಗಳನ್ನು ರದ್ದುಗೊಳಿಸಿ ಬಿಷಪ್ ಆದೇಶ ನೀಡಿದ್ದಾರೆ.
ವಿಶ್ವಾದ್ಯಂತ ಆತಂಕ ಸೃಷ್ಟಿಸಿರುವ ಕೊರೋನ ಸೋಂಕು ಮಂಗಳೂರಿನಲ್ಲಿ ಭೀತಿ ಹುಟ್ಟಿಸಿದೆ. ಮುಂಜಾಗ್ರತಾ ಕ್ರಮವಾಗಿ ಧಾರ್ಮಿಕ ಕಾರ್ಯ ಕ್ರಮಗಳನ್ನು ರದ್ದುಪಡಿಸಲು ಜಿಲ್ಲಾಡಳಿತವು ಆದೇಶ ನೀಡಿದ್ದು, ಚರ್ಚ್ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿನ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸ ಲಾಗಿದೆ. ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಬಿಷಪ್ ಸ್ಪಷ್ಟಪಡಿಸಿದ್ದಾರೆ.
ಪ್ರಸಕ್ತ ಪರಿಸ್ಥಿತಿಯಲ್ಲಿ ನಮ್ಮ ಧಾರ್ಮಿಕ ಕಾರ್ಯಕ್ರಮ, ಆರಾಧನೆ, ನಂಬಿಕೆಯ ಆಚರಣೆಗಳಲ್ಲಿ ಕೆಲವನ್ನು ಬದಲಾವಣೆ ಮಾಡುವ ಅಗತ್ಯವಿದೆ. ಎಂದಿನಂತೆಯೇ ಸಮುದಾಯದೊಂದಿಗೆ ಪ್ರಾರ್ಥನೆ ಸಲ್ಲಿಸಲು ಸಾಧ್ಯವಾಗದಿರಬಹುದು. ಆದರೆ ನಾವು ಖಂಡಿತವಾಗಿ ಜನರಿಗಾಗಿ ಪ್ರಾರ್ಥನೆ ಮಾಡುವುದಾಗಿ ವಾಗ್ದಾನ ನೀಡುತ್ತಿದ್ದೇವೆ ಎಂದು ಹೇಳಿದರು.
ಚರ್ಚ್‌ಗಳು ವೈಯಕ್ತಿಕ ಆರಾಧನೆ, ಧ್ಯಾನ ಮಾಡಲು ಮುಕ್ತ ಅವಕಾಶ ನೀಡಲಾಗಿದೆ. ಈ ಸಂದರ್ಭ ಧಾರಾಳವಾಗಿ ಪ್ರಾರ್ಥನೆ ಸಲ್ಲಿಸಬಹುದು. ಖಾಸಗಿಯಾಗಿ ಪ್ರಾರ್ಥಿಸಲು ಹಾಗೂ ಆಧ್ಯಾತ್ಮಿಕವಾಗಿ ಭಗವಂತನೊಂದಿಗೆ ಒಡನಾಟ ಇಟ್ಟು ಕೊಳ್ಳಲು ಸಂಪೂರ್ಣವಾಗಿ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.
ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಚರ್ಚ್‌ನಲ್ಲಿ ಗುಂಪು ಗುಂಪಾಗಿ ಪ್ರಾರ್ಥನೆ ಸಲ್ಲಿಸಲು, ಸಭೆ ಸೇರುವುದನ್ನು ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ. ವೈಯಕ್ತಿಕವಾಗಿ ಪ್ರಾರ್ಥನೆ ಸಲ್ಲಿಸುವಾಗ ಮತ್ತೊಬ್ಬರಿಂದ ಸಾಕಷ್ಟು ಅಂತರ ಕಾಯ್ದು ಕೊಳ್ಳಬೇಕು. ಚರ್ಚ್‌ನಲ್ಲಿ ಹೆಚ್ಚು ಜನರು ಗುಂಪುಗೂಡದಂತೆ ನೋಡಿಕೊಳ್ಳುವುದು ಪ್ಯಾರಿಷ್ ಪ್ರೀಸ್ಟ್ ಅವರ ಜವಾಬ್ದಾರಿಯಾಗಿದೆ.
ಮಾ.31ರವರೆಗಿನ ಎಲ್ಲ ರವಿವಾರದ ವಿಶೇಷ ಪ್ರಾರ್ಥನೆಗಳಿಗೆ ವಿನಾಯಿತಿ ನೀಡಲಾಗಿದೆ. ಚರ್ಚ್‌ನ ಫಾದರ್‌ಗಳು ಸಾರ್ವಜನಿಕರ ಅನುಪಸ್ಥಿತಿಯಲ್ಲಿ ಪ್ರಾರ್ಥನೆ ಸಲ್ಲಿಸುವುದು ಕಡ್ಡಾಯವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದವರು ಚರ್ಚ್‌ಗಳಿಗೆ ಭೇಟಿ ನೀಡುವುದನ್ನು ತಡೆಗಟ್ಟಬೇಕು. ಆಧ್ಯಾತ್ಮಿಕ ಕಾರ್ಯಕ್ರಮಗಳಾದ ಸಾಮಾನ್ಯ ಪ್ರಾಯಶ್ಚಿತ ಸೇವೆ ಸಹಿತ ಮತ್ತಿತರ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಸಮ್ಮೇಳನ, ಸೆಮಿನಾರ್, ಸಣ್ಣ ಕೂಟಗಳು, ಚರ್ಚ್ ಶಾಲಾ ಕಾರ್ಯಕ್ರಮ, ಮೆರವಣಿಗೆಗಳನ್ನು ನಿಷಿದ್ಧಗೊಳಿಸಲಾಗಿದೆ ಎಂದು ಬಿಷಪ್ ಹೇಳಿದ್ದಾರೆ.