ಕ್ರಿಮಿನಲ್ ಹಿನ್ನಲೆಯು ಪಿಣರಾಯಿರಿಂದ ಕೋಮು ಸೌಹಾರ್ದ ಸಾಧ್ಯವೇ- ಮಟ್ಟಾರ್

Spread the love

ಕ್ರಿಮಿನಲ್ ಹಿನ್ನಲೆಯು ಪಿಣರಾಯಿರಿಂದ ಕೋಮು ಸೌಹಾರ್ದ ಸಾಧ್ಯವೇ- ಮಟ್ಟಾರ್

ಉಡುಪಿ: ಫೆಬ್ರವರಿ 25 ರಂದು ಮಂಗಳೂರಿನಲ್ಲಿ ನಡೆಯುವ ಶಾಂತಿ-ಸೌಹಾರ್ದ ರ್ಯಾಲಿಯಲ್ಲಿ ಭಾಗವಹಿಸಿ ಭಾಷಣ ಮಾಡಲು ಬರುತ್ತಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ನೈತಿಕತೆ ಇದೆಯೇ?. ಅನೇಕ ಕ್ರಿಮಿನಲ್ ಪ್ರಕಟರಣಗಳಲ್ಲಿ ಆರೋಪಿ ಎಂದು ಹೆಸರಿಸಲ್ಪಟ್ಟಿರುವ ಪಿಣರಾಯಿ ವಿಜಯನ್ ಅವರಿಂದ ಕೋಮು-ಸೌಹಾರ್ದ ಸಾಧ್ಯವೇ? ಎಂದು ಪ್ರಶ್ನಿಸಿರುವ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆಯವರು, ದ.ಕ. ಮತ್ತು ಉಡುಪಿ ಜಿಲ್ಲೆ ಭೌಗೋಳಿಕವಾಗಿ ಬೇರೆಯಾದರೂ ಕೂಡ ಭಾವನಾತ್ಮಕವಾಗಿ ಎರಡೂ ಜಿಲ್ಲೆಯವರು ಒಂದೇ ಜಿಲ್ಲೆ ಎಂಬಂತೆ ಇದ್ದೇವೆ. ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಕೋಮು ಸೌಹಾರ್ದತೆ ಹಾಳಾಗಿಲ್ಲ. ಎಲ್ಲಾ ಜಾತಿ ಮತ ಧರ್ಮಗಳು ಒಟ್ಟಾಗಿ ಸೇರಿ ಸಹ ಬಾಳ್ವೆ ನಡೆಸುತ್ತಿದ್ದಾರೆ. ಇದಕ್ಕೆ ಹುಳಿ ಹಿಂಡುವಂತೆ ಕೋಮು-ಸೌಹಾರ್ದತೆ ಎಂಬ ಹೆಸರಲ್ಲಿ ಮಂಗಳೂರಿಗೆ ಬಂದು ಮಾತನಾಡುವುದಾದರೂ ಏನು ಎಂದು ಹೆಗ್ಡೆಯವರು ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.

ಕೇರಳದಲ್ಲಿ ಪಿಣರಾಯಿ ವಿಜಯನ್ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಮತ್ತು ಸಂಘಪರಿವಾರದ ಅನೇಕ ಅಮಾಯಕ ಕಾರ್ಯಕರ್ತರನ್ನು ದಿನಬೆಳಗ್ಗೆ ಎಂಬಂತೆ ಕೊಲೆ ನಡೆಸುತ್ತಿದ್ದು ಇಂತಹ ವ್ಯಕ್ತಿಗಳು ಕೋಮು-ಸೌಹಾರ್ದ ಎಂಬ ಹೆಸರಿನಲ್ಲಿ ನಡೆಸುವ ಸಭೆಯಲ್ಲಿ ಭಾಗವಹಿಸಲು ನೈತಿಕತೆಯಾದರೂ ಏನಿದೆ. ಮಂಗಳೂರಿಗೆ ಬರುವ ಮೊದಲು ಪಿಣರಾಯಿಯವರು ತಮ್ಮನ್ನು ತಾನು ಸರಿ ಮಾಡಿಕೊಳ್ಳಲಿ. ಮೊದಲಾಗಿ ಕೇರಳದಲ್ಲಿ ಅಮಾಯಕರ ಹತ್ಯೆಯನ್ನು ನಿಲ್ಲಿಸಲಿ, ಕೋಮು ಸೌಹಾರ್ದ ಎಂಬುದು ಮೊದಲು ಕೇರಳದಲ್ಲಿ ಆರಂಭವಾಗಲಿ. ಪಿಣರಾಯಿಯವರನ್ನು ಮಂಗಳೂರಿಗೆ ಕರೆಸಿರುವ ಸಂಘಟಕರು ಈ ಸಭೆಯನ್ನು ಮೊದಲು ಕೇರಳದಲ್ಲಿ ನಡೆಸಲಿ. ಯಾವ ಕಾರಣಕ್ಕೂ ಕೇರಳ ಮುಖ್ಯಮಂತ್ರಿಗಳು ಮಂಗಳೂರಿಗೆ ಬರಬಾರದು. ಪರಿಸ್ಥಿತಿಯನ್ನು ಅರಿತು ತಾನಾಗಿ ಪಿಣರಾಯಿಯವರು ಕಾರ್ಯಕ್ರಮವನ್ನು ರದ್ದುಗೊಳಿಸಬೇಕು. ತಕ್ಷಣದಿಂದ ಕೇರಳದಲ್ಲಿ ಹತ್ಯೆಯನ್ನು ಮಾಡಿರುವ ಅಪರಾಧಿಗಳನ್ನು ಬಂಧಿಸಬೇಕು, ಹಿಂದೂ ಸಂಘಟನೆಗಳ ಮೇಲೆ ಹಾಕಿರುವ ಸುಳ್ಳು ಪ್ರಕರಣಗಳನ್ನು ಹಿಂತೆಗೆದುಕೊಂಡು ಕೋಮು ಸೌಹಾರ್ದಕ್ಕೆ ಪ್ರಥಮ ಹೆಜ್ಜೆಯನ್ನು ಕೇರಳದಿಂದಲೇ ಆರಂಭಮಾಡಿ ಮತ್ತೆ ನೆರೆಯ ರಾಜ್ಯಕ್ಕೆ ಬರಲಿ ಎಂದು ಹೆಗ್ಡೆಯವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸಂಘ ಪರಿವಾರದಿದಂದ ನಡೆಯುವ ಪ್ರತಿಭಟನೆಗೆ ಉಡುಪಿ ಜಿಲ್ಲಾ ಬಿಜೆಪಿ ಸಂಪೂರ್ಣ ಬೆಂಬಲ ನೀಡುತ್ತದೆ ಮತ್ತು ಜಿಲ್ಲೆಯಿಂದ ಸಾವಿರಾರು ಕಾರ್ಯಕರ್ತರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿರುವ ಮಟ್ಟಾರ್, ಫೆ. 25 ರಂದು ನಡೆಯುವ ಮಂಗಳೂರು ಹರತಾಳಕ್ಕೂ ಉಡುಪಿ ಜಿಲ್ಲಾ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದ್ದಾರೆ.


Spread the love