ಕ್ರಿಸ್ಮಸ್ ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ಕರುಣಿಸುವ ಹಬ್ಬ – ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ

Spread the love

ಕ್ರಿಸ್ಮಸ್ ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ಕರುಣಿಸುವ ಹಬ್ಬ – ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ

ಕ್ರಿಸ್ಮಸ್ ಹಬ್ಬ ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ಕರುಣಿಸುವುದಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ತಮ್ಮ ಕ್ರಿಸ್ಮಸ್ ಸಂದೇಶದಲ್ಲಿ ತಿಳಿಸಿದ್ದಾರೆ.

ಕ್ರಿಸ್ತ ಜಯಂತಿಯ ಆಚರಣೆಯಲ್ಲಿ ನಾವು ಬೆಳಕಿಗೆ, ದೀಪಾಲಂಕಾರಕ್ಕೆ ಮಹತ್ವ ಕೊಡುತ್ತೇವೆ. ಗೋದಲಿ, ಕ್ರಿಸ್ಮಸ್ ಟ್ರೀ, ನಕ್ಷತ್ರದಲ್ಲಿ ಬೆಳಗಿದ ಬೆಳಕು ಕತ್ತಲೆಯನ್ನು ಹೋಗಲಾಡಿಸಿ ನಮ್ಮ ಮನಸ್ಸಿಗೆ ಮುದವನ್ನು ನೀಡುತ್ತದೆ. ಈ ಬೆಳಕಿನ ಹಬ್ಬ ದೀಪಾವಳಿಯಂತೆ ಕೆಲವೇ ದಿನಗಳಿಗೆ ಸೀಮಿತವಾಗಿದ್ದು ಆನಂತರ ಪುನಃ ಕತ್ತಲು ಆವರಿಸುತ್ತದೆ. ಬೆಳಕು ಬೇಕು ಎಂದಾಗಲೆಲ್ಲ ನಾವು ದೀಪವನ್ನು ಹೋತ್ತಿಸಿ ಕತ್ತಲೆಯನ್ನು ಹೋಗಲಾಡಿಸ ಬೇಕಾಗಿದೆ.

ದೇವರಿಂದ ಹೊರಹೊಮ್ಮಿದ ನಿಜ ಬೆಳಕು ಮಾತ್ರ ಈ ಕತ್ತಲೆಯನ್ನು ಹೋಗಲಾಡಿಸಬಲ್ಲದು. ಇದು ಆಧ್ಯಾತ್ಮಿಕ ಜ್ಯೋತಿ. “ಕತ್ತಲಿನಲ್ಲಿ ಸಂಚರಿಸುತ್ತಿದ್ದ ಜನರಿಗೆ ಒಂದು ಮಹಾಜ್ಯೋತಿ ಕಾಣಿಸಿತು. ಮರಣದ ನೆರಳಿನಲ್ಲಿ ನೆಲೆಸಿದ ನಾಡಿನಲ್ಲಿ ಆ ಜ್ಯೋತಿ ಪ್ರಜ್ವಲಿಸಿತು” (ಯೆಶಾಯಾ ೯:೨). ಈ ದೀರ್ಘ ದರ್ಶನ ದೇಹಾಂಬರವಾಗಿ ಈ ಲೋಕದಲ್ಲಿ ಜನ್ಮತಳೆದು ಪ್ರಭು ಕ್ರಿಸ್ತರಲ್ಲಿ ಪ್ರತ್ಯಕ್ಷವಾಯಿತು. “ನಾನೇ ಜಗಜ್ಯೋತಿ, ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ. ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ” (ಯೋವಾ ೮:೧೨) “ಜಗತ್ತನಲ್ಲಿ ನಾನಿರುವಾಗ ಜಗದ ಜ್ಯೋತಿ ನಾನೇ” ಎಂದರು ಪ್ರಭು ಯೇಸು.

ಮಾನವರೆಲ್ಲರನ್ನು ಬೆಳಗಿಸಲು ಈ ಲೋಕಕ್ಕೆ ಆಗಮಿಸಿದ ಬೆತ್ಲೇಮಿನ ಬಾಲ ಯೇಸು ನಮ್ಮ ಮಾನಸಿಕ ಮತ್ತು ಆತ್ಮಿಕ ಅಂಧಕಾರವನ್ನು ನೀಗಿಸಿ ನಮ್ಮನ್ನು ಸತ್ಯಮಾರ್ಗದಲ್ಲಿ ನಡೆಸಲಿ. ಇದೇ ಕ್ರಿಸ್ತ ಜಯಂತಿಯ ಶುಭಾಷಯಗಳು ಮತ್ತು ಹೊಸ ವರ್ಷದ ಹಾರೈಕೆಗಳು ಎಂದು ಅವರು ಶುಭಾಶಯ ಕೋರಿದ್ದಾರೆ.


Spread the love