ಕ್ರಿಸ್ಮಸ್, ಹೊಸ ವರ್ಷಾಚರಣೆ ಹಿನ್ನೆಲೆ : ಮದ್ಯ,ಬಿಯರ್ ಸರಬರಾಜಿಗೆ ಪರವಾನಿಗೆ ಅಗತ್ಯ
ಉಡುಪಿ: ಕರ್ನಾಟಕ ಅಬಕಾರಿ ಕಾಯಿದೆ 1965 ರ ನಿಯಮ 15ಎ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದನ್ನು ನಿರ್ಬಂಧಿಸಲಾಗಿದ್ದು, ರಾಜ್ಯ ಅಬಕಾರಿ ಇಲಾಖೆಯಿಂದ ಪರವಾನಗಿ ಪಡೆಯದೇ ಹಾಲು ಗಳಲ್ಲಿ, ಹೋಟೇಲುಗಳಲ್ಲಿ, ಗೆಸ್ಟ್ ಹೌಸ್ ಗಳಲ್ಲಿ ಅಥವಾ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದು ಮತ್ತು ಮದ್ಯಪಾನಕ್ಕೆ ಅನುವು ಮಾಡಿಕೊಡುವುದು ಅಬಕಾರಿ ಕಾಯಿದೆಯಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಈ ರೀತಿ ಮದ್ಯಪಾನ ಮಾಡಿದಲ್ಲಿ ಅಥವಾ ಮದ್ಯಪಾನ ಮಾಡಲು ಅವಕಾಶ ನೀಡಿದಲ್ಲಿ ಸದರಿ ಕಾರ್ಯಕ್ರಮದ ಆಯೋಜಕರು/ ಕಟ್ಟಡ/ ಹಾಲ್ ಮಾಲೀಕರನ್ನು ಸಹ ಶಿಕ್ಷೆಗೆ ಒಳಪಡಿಸಲು ಅವಕಾಶವಿರುತ್ತದೆ.
ಡಿಸೆಂಬರ್-19 ರ ತಿಂಗಳಲ್ಲಿ ಕ್ರಿಸ್ಮಸ್ ಆಚರಣೆ ಮತ್ತು 2020 ನೇ ಹೊಸ ವರ್ಷಾಚರಣೆ ಮಾಡುವ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರು ಮದ್ಯ/ ಬಿಯರ್ ಸರಬರಾಜು ಮಾಡಲು ಉದ್ದೇಶಿಸಿದಲ್ಲಿ ಕಡ್ಡಾಯವಾಗಿ ಅಬಕಾರಿ ಇಲಾಖೆಯಿಂದ ನಿಯಮಾನುಸಾರ ಪರವಾನಿಗೆ (ಸಿಎಲ್-5 ಸನ್ನದು) ಪಡೆದುಕೊಂಡು ಮದ್ಯ ಸರಬರಾಜು ಮಾಡುವುದು. ಅಬಕಾರಿ ಇಲಾಖೆಯಿಂದ ಪರವಾನಗಿ ಪಡೆದುಕೊಳ್ಳದೇ, ಯಾವುದೇ ಕಾರ್ಯಕ್ರಮದಲ್ಲಿ ಮದ್ಯ/ ಬಿಯರ್ ವಿತರಿಸುವುದು ಕಂಡುಬಂದಲ್ಲಿ ಅಂತಹ ಕಾರ್ಯಕ್ರಮದ ಆಯೋಜಕರು/ ಕಟ್ಟಡದ ಮಾಲೀಕರ ವಿರುದ್ಧ ಅಬಕಾರಿ ಕಾನೂನಿನ ಉಲ್ಲಂಘನೆ ಸಂಬಂಧ ಮೊಕದ್ದಮೆ ದಾಖಲಿಸಿ, ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತರ ಪ್ರಕಟಣೆ ತಿಳಿಸಿದೆ.