ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕೇಕ್ ಮಿಕ್ಸಿಂಗ್
ಉಡುಪಿ: ಕ್ರಿಸ್ಮಸ್ ಹಬ್ಬದ ಪೂರ್ವಬಾವಿಯಾಗಿ ಇದೆ ಮೊದಲ ಬಾರಿಗೆ ಕಿದಿಯೂರು ಹೋಟೆಲ್ನ ಕಿದಿಯೂರು ಬೇಕರಿ ವಿಭಾಗ ವತಿಯಿಂದ ಕೇಕ್ ಮಿಕ್ಸಿಂಗ್ ಹೋಟೆಲ್ನ ಮಹಾಜನ್ ಹಾಲ್ನಲ್ಲಿ ಶುಕ್ರವಾರ ನಡೆಯಿತು.
ಒಣದ್ರಾಕ್ಷಿ, ಗೋಡಂಬಿ, ಕರ್ಜೂರ ಹಾಗೂ ವಿವಿಧ ಬಗೆಯ ಚರಿ ಸೇರಿದಂತೆ ಸುಮಾರು 9 ವಿಧದ ಡ್ರೈಫ್ರೂಟ್ಸ್ಗೆ ವೈನ್, ಬ್ರಾೃಂಡಿ ಮತ್ತು ರಮ್ ಹಾಗೂ ವಿವಿಧ ಹಣ್ಣಿನ ಫ್ಲೇವರ್ಗಳ ರಸವನ್ನು ಸೇರಿಸಿ ಉದ್ಯಮಿ ಜೆರಿ ವಿನ್ಸೆಂಟ್ ಡಯಾಸ್, ಕಿದಿಯೂರು ಹೋಟೆಲ್ ಮಾಲೀಕರಾದ ಭೂವನೇಂದ್ರ ಟಿ. ಕಿದಿಯೂರು, ಜಿತೇಶ್ ಕಿದಿಯೂರು, ಗ್ಲೆನ್ ಕರ್ಕೆಡ ಮೊದಲಾದವರು ಕೇಕ್ ಮಿಕ್ಸ್ ನೆರವೇರಿಸಿದರು.
ಸುಮಾರು 16ನೇ ಶತಮಾನದಲ್ಲಿ ಆರಂಭವಾಗಿರುವ ಕ್ರೀಸ್ಮಸ್ ಪೂರ್ವಭಾವಿ ಕೇಕ್ ಮಿಕ್ಸಿಂಗ್ ಆಚರಣೆ, ಈ ಪ್ರಪಂಚದೆಲ್ಲೇಡೆ ಜನಪ್ರಿಯತೆ ಪಡೆದಿದೆ. ಜಾತಿ, ಮತ, ಧರ್ಮ ಬೇಧವಿಲ್ಲದೇ ಎಲ್ಲರೂ ಆಚರಿಸುತ್ತಾರೆ. ಕಿದಿಯೂರು ಹೋಟೆಲ್ ವತಿಯಿಂದ ಈ ವರ್ಷ ಆರಂಭಿಸಿದ್ದೇವೆ ಎಂದು ಜಿತೇಶ್ ಕಿದಿಯೂರು ಹೇಳಿದರು.
ಕ್ರೀಸ್ಮಸ್ ಹಬ್ಬ ನಮ್ಮ ಸಂತೋಷವನ್ನು ಇಮ್ಮಡಿಗೊಳಿಸುತ್ತದೆ. ಕೇಕ್ ಮೂಲಕವಾಗಿ ಸಂತಸವನ್ನು ಹಂಚಿಕೊಳ್ಳುತ್ತೇವೆ. ಕೃಷ್ಣನನ್ನು ಪೂಜಿಸುಸುವವರು ಏಸುವನ್ನು ಗೌರವಿಸುತ್ತಾರೆ. ಹಾಗೆಯೇ ಏಸುವನ್ನು ಪೂಜಿಸುವವರು ಶ್ರೀ ಕೃಷ್ಣನನ್ನು ಗೌರವಿಸುತ್ತಾರೆ. ಈ ಸಾಮರಸ್ಯ ಹೀಗೆ ಮುಂದುವರಿಯಲಿ ಎಂದು ಉದ್ಯಮಿ ಜೆರಿ ವಿನ್ಸೆಂಟ್ ಡಯಾಸ್ ಹೇಳಿದರು.