ಕ್ರಿಸ್ ಮಸ್ ಆಚರಣೆಯ ಪ್ರಯುಕ್ತ ಸಂಭ್ರಮದ ‘ಕ್ರಿಸ್ತ ನಮನ’
ಮಂಗಳೂರು: ದೂರದರ್ಶನ ಬೆಂಗಳೂರು (ಚಂದನ) ಮತ್ತು ಮಂಗಳೂರು ಧರ್ಮಪ್ರಾಂತ್ಯದ ಸಹಯೋಗದಲ್ಲಿ ನಡೆದ ಸಂಭ್ರಮದ ‘ಕ್ರಿಸ್ತ ನಮನ’ ಕಾರ್ಯಕ್ರಮ ಭಾನುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡ ಬೆಂಗಳೂರು ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರು ಡಾ. ಬರ್ನಾಡ್ ಮೊರಾಸ್ ಕ್ರಿಸ್ ಮಸ್ ಹಬ್ಬ ಯೇಸು ಸ್ವಾಮಿಯ ಹುಟ್ಟು ಹಬ್ಬ, ದೇವರ ಕುಮಾರ ಮನುಷ್ಯರ ವಿಮೋಚನೆಗಾಗಿ ಮನುಷ್ಯರಾಗಿ ಈ ಭೂಲೋಕಕ್ಕೆ ಬಂದ ಘಟನೆಯನ್ನು ಸ್ಮರಿಸಿ ಸಂಭ್ರಮಿಸುವ ಹಬ್ಬ. ಯೇಸು ಸ್ವಾಮಿ ಈ ಭೂಲೋಕಕ್ಕೆ ಬರುವಾಗ ದೇವರು ಮನುಷ್ಯರನ್ನು ಪ್ರೀತಿಸುತ್ತಾರೆ ಮತ್ತು ಆ ಪ್ರೀತಿಗಾಗಿ ದೇವರು ಮನುಷ್ಯರ ಪಾಪಗಳನ್ನು ಕ್ಷಮಿಸುತ್ತಾರೆ ಎಂಬ ಸುವಾರ್ತೆಯನ್ನು ಜಗತ್ತಿಗೆ ಸಾರಿದ ಹಬ್ಬ ಎಂಬ ಸಂದೇಶವನ್ನು ನೀಡಿದರು.
ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಪರಮಪೂಜ್ಯ ಡಾ.ಎಲೋಶಿಯಸ್ ಪಾವ್ಲ್ ಡಿ’ಸೋಜ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯೇಸು ಸ್ವಾಮಿ ಮಾನವರಾಗಿ ಭೂಲೋಕಕ್ಕೆ ಬಂದಾಗ ಅವರಿಗೆ ಅರಮನೆಯಲ್ಲಿ ಅಥವಾ ಯಾರಾ ಮನೆಯಲ್ಲಿ ಸ್ವಾಗತ ಸಿಗಲಿಲ್ಲ. ಅವರು ದನದ ಕೊಟ್ಟಿಗೆಯಲ್ಲಿ ಜನಿಸಿದರು. ಅನುಕೂಲವಂತರ ಮನೆಯಲ್ಲಿ ಜಾಗ ಇರಲಿಲ್ಲ ಏಕೆಂದರೆ ಅವರ ಹೃದಯದಲ್ಲಿ ಜಾಗ ಇರಲಿಲ್ಲ. ಇವತ್ತು ಏಸು ಸ್ವಾಮಿಯ ಹುಟ್ಟು ಹಬ್ಬ ಆಚರಿಸುತ್ತಿರುವಾಗ ನಾವು ದೇವರನ್ನು ದೀನ ದಲಿತರಲ್ಲಿ, ಬಡವರಲ್ಲಿ, ಹಸಿದವರಲ್ಲಿ ಕಾಣುವ ಅಗತ್ಯ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಮ ಕೃಷ್ಣ ಮಠದ ಸ್ವಾಮಿ ಜೀತಕಾನಂದ, ಶಾಸಕರಾದ ಜೆ. ಆರ್. ಲೋಬೊ, ವಿಧಾನ ಪರಿಷತ್ ಸದಸ್ಯರು ಮತ್ತು ಸಚೇತಕರಾದ ಐವನ್ ಡಿ’ಸೋಜ, ದೂರದರ್ಶನ ಬೆಂಗಳೂರು(ಚಂದನ) ಇದರ ಉಪ ಮಹಾನಿರ್ದೇಶಕರಾದ ಎನ್. ಚಂದ್ರಶೇಕರ್. ಪೋಲಿಸ್ ಕಮಿಷನರ್ ಟಿ. ಆರ್. ಸುರೇಶ್, ಮಂಗಳೂರು ನಗರ ಕಮಿಷನರ್ ನಾಝಿರ್ ಮೊಹಮ್ಮದ್, ಫಾ. ಮುಲ್ಲರ್ ಆಸ್ಪತ್ರೆಯ ನಿರ್ದೇಶಕ ಫಾ. ರಿಚ್ಚರ್ಡ್ ಕುವೆಲ್ಲೊ, ಮಂಗಳೂರು ಧರ್ಮಪ್ರಾಂತ್ಯದ ಪಾಲನಾ ಮಂಡಳಿಯ ಕಾರ್ಯದರ್ಶಿ ಎಮ್. ಪಿ. ನೊರೊನ್ಹಾ ಹಾಜರಿದ್ದರು. ಕಾರ್ಯಕ್ರಮ ಸಂಯೋಜಕರಾದ ಫಾ. ಒನಿಲ್ ಡಿಸೋಜ ಗಣ್ಯರನ್ನು ಮತ್ತು ಸಭಿಕರನ್ನು ಸ್ವಾಗತ ಮಾಡಿದರು. ಕನ್ಸೆಪ್ಟ ಆಳ್ವ, ಗ್ಲ್ಯಾಡ್ಸನ್ ಜತ್ತನ್ನ ಕಾರ್ಯಕ್ರಮ ನಿರೂಪಣೆ ಮಾಡಿದರು.