ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಆದ್ಯತೆ- ಪ್ರಮೋದ್ ಮದ್ವರಾಜ್
ಉಡುಪಿ: ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಅಗ್ನಿಶಾಮಕ ಮುಂತಾದ ಇಲಾಖೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡುವಾಗ ಕ್ರೀಡಾಪಟುಗಳಿಗೆ ಆದ್ಯತೆ ನೀಡಲಾಗುವುದು ಎಂದು ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮದ್ವರಾಜ್ ಹೇಳಿದರು.
ಅವರು ಶನಿವಾರ, ಪದವಿಪೂರ್ವ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ ಹಾಗೂ ಸಂತ ಸಿಸಿಲಿ ಸಂಯುಕ್ತ ಪದವಿ ಪೂರ್ವ ಕಾಲೇಜು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಕೂಟದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಿದರೆ, ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಲಾಭವಿದೆ ಎಂಬುವುದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಅದಕ್ಕಾಗಿ ರಾಜ್ಯ ಸರಕಾರ ಹೊಸ ಕ್ರೀಡಾ ನೀತಿಯೊಂದನ್ನು ಜಾರಿಗೆ ತರುತ್ತಿದೆ. ಈ ನೀತಿಯನ್ವಯ ಕ್ರೀಡಾ ವಿದ್ಯಾರ್ಥಿಗಳಿಗೆ ಹಾಜರಾತಿ, ಹೆಚ್ಚುವರಿ ಅಂಕ ನೀಡಲಾಗುತ್ತದೆ ಮತ್ತು ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಅಗ್ನಿಶಾಮಕ ಇಲಾಖೆಗಳಿಗೆ ಅಧಿಕಾರಿಗಳನ್ನು ಆಯ್ಕೆ ಮಾಡುವಾಗ ಕ್ರೀಡಾಪಟುಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಂ ವಹಿಸಿದ್ದ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ವಿನಯಕುಮಾರ್ ಸೊರಕೆ ಮಾತನಾಡಿ, ವಿದ್ಯಾಭ್ಯಾಸದಲ್ಲಿ ಪ್ರಥಮ ಸ್ಥಾನವನ್ನು ಹೊಂದಿರುವ ಉಡುಪಿ ಜಿಲ್ಲೆ, ಕ್ರೀಡಾ ಕ್ಷೇತ್ರದಲ್ಲಿ ಕೂಡ ಪ್ರಥಮ ಸ್ಥಾನ ಪಡೆಯಬೇಕಾಗಿದೆ. ಕ್ರೀಡೆಯಲ್ಲಿ ಸಾಧನೆ ಮಾಡಲು ನಿರಂತರವಾದ ಕಠಿಣ ಪರಿಶ್ರಮ ವಹಿಸಬೇಕು. ನಿರಂತರ ಶ್ರಮಕ್ಕೆ ಮೂಲಭೂತ ಅನುಕೂಲತೆ ಹಾಗೂ ಯುವಸಮುದಾಯಕ್ಕೆ ಪ್ರೋತ್ಸಾಹದಾಯಕವಾದ ಕಾರ್ಯಕ್ರಮಗಳು ಬೇಕು ಎಂದರು.
ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಎಸ್..ಎಂ.ಎಸ್ ಕಾಲೇಜು ನಿಟ್ಟೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.
ರಾಷ್ಟ್ರಮಟ್ಟದ ಎತ್ತರ ಜಿಗಿತದ ಕ್ರೀಡಾಪಟು ಹಾಗೂ ಸಂತ ಸಿಸಿಲಿಯ ಹಳೆ ವಿದ್ಯಾರ್ಥಿನಿಯಾದ ಅನಿತಾ ಕರ್ಕಡ ಕ್ರೀಡಾಜ್ಯೋತಿ ಸ್ತಂಭನ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‍ನ ಶಾಸಕರಾದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಕಾಂಗ್ರೆಸ್ ಬ್ಲಾಕ್‍ನ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ, ಅಂಬಲಪಾಡಿ ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ.ನಿ.ಬಿ.ವಿಜಯ ಬಲ್ಲಾಳ್, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಚಂದ್ರ, ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ವಿಜಯಲಕ್ಷ್ಮೀ ಬಿ.ನಾಯಕ್, ಕ್ರೀಡಾಪಟು ಹಾಗೂ ಸಂತ ಸಿಸಿಲಿಯ ಹಳೆ ವಿದ್ಯಾರ್ಥಿನಿ ರೀಟಾ ಲೋಬೋ, ಉಡುಪಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಇದರ ಸಹಾಯಕ ನಿರ್ದೇಶಕರಾದ ರೋಶನ್ ಕುಮಾರ್ ಶೆಟ್ಟಿ, ಸಂತ ಸಿಸಿಲಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಪ್ರೇಮ್ ಕುಮಾರ್, ಸಂತ ಸಿಸಿಲಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ವಿಜಯ್ ಕುಮಾರ್, ಸಂತ ಸಿಸಿಲಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಮಾಜಿ ಅಧ್ಯಕ್ಷರಾದ ಡೋನಾಲ್ಡ್ ಸಲ್ಡಾನಾ ಮೊದಲಾದವರು ಉಪಸ್ಥಿತರಿದ್ದರು.
ಸಂತ ಸಿಸಿಲಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿ.ಮರಿಯಾ ಗ್ರೇಸಿ ಎ.ಸಿ ಸ್ವಾಗತಿದರು. ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಕ್ರೀಡಾ ಸಂಯೋಜಕರಾದ ದಿನೇಶ್ ಕುಮಾರ್ ಎ ವಂದಿಸಿದರು. ಸತೀಶ್‍ಚಂದ್ರ ಕಾರ್ಯಕ್ರಮ ನಿರೂಪಿಸಿದರು.