Home Mangalorean News Kannada News ಕ್ರೈಸ್ತ ಯುವಜನರು ನಾಗರಿಕ ಸೇವೆಯತ್ತ ಆಸಕ್ತಿ ತೋರಿಸಿ : ಜೆ. ಆರ್. ಲೋಬೊ

ಕ್ರೈಸ್ತ ಯುವಜನರು ನಾಗರಿಕ ಸೇವೆಯತ್ತ ಆಸಕ್ತಿ ತೋರಿಸಿ : ಜೆ. ಆರ್. ಲೋಬೊ

Spread the love

ಕ್ರೈಸ್ತ ಯುವಜನರು ನಾಗರಿಕ ಸೇವೆಯತ್ತ ಆಸಕ್ತಿ ತೋರಿಸಿ : ಜೆ. ಆರ್. ಲೋಬೊ

ಉಡುಪಿ: ನಾಗರಿಕ ಸೇವೆಗಳಲ್ಲಿ ಹೆಚ್ಚು ಹೆಚ್ಚು ಯುವಕರನ್ನು ತೊಡಗಿಸಿಕೊಳ್ಳುವ ನಿಟ್ಟನಲ್ಲಿ ಅವರ ತರಬೇತಿಗಾಗಿ ಸೂಕ್ತವಾದ ಹಾಗೂ ಸುಸಜ್ಜಿತವಾಗ ತರಬೇತಿ ಕೇಂದ್ರದ ಅಗತ್ಯತೆ ಇದೆ ಎಂದು ಮಂಗಳೂರು ಶಾಸಕ ಜೆ. ಆರ್. ಲೋಬೊ ಅಭಿಪ್ರಾಯಪಟ್ಟರು.

ಅವರು ಭಾನುವಾರ ಉಡುಪಿ ಶೋಕ ಮಾತಾ ಇಗರ್ಜಿ ಸಭಾಂಗಣಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ವಾರ್ಷಿಕ ಮಹಾಸಭೆ ಹಾಗೂ ದಾಂತಿ ಸ್ಮಾರಕ ಸಾಹಿತ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಕೆಥೊಲಿಕ್ ಸಭಾದ 2017-18 ಸಾಲಿನ ನೂತನ ಟೆಲಿಫೋನ್ ಡೈರಕ್ಟರಿ ಬಿಡುಗಡೆಗೊಳಿಸಿ ಮಾತನಾಡಿದರು.

ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಯಲ್ಲಿ ಕೆಥೊಲಿಕ್ ಸಭಾ ಸಂಘಟನೆ ತನ್ನ ನಿಸ್ವಾರ್ಥ ಸೇವೆಯ ಮೂಲಕ ಜನಮನ್ನಣೆ ಗಳಿಸಿದ್ದು, ಕ್ರೈಸ್ತ ಸಮುದಾಯದ ನಾಯಕರು ಹೆಚ್ಚು ಹೆಚ್ಚು ರಾಜಕೀಯ ಕ್ಷೇತ್ರಕ್ಕೆ ಬರುವಂತೆ ಮಾಡಲು ಕೆಥೊಲಿಕ್ ಸಭಾದ ಪ್ರಯತ್ನ ಬಹಳ ಮಹತ್ವದ್ದಾಗಿದೆ. ಕ್ರೈಸ್ತ ಸಮುದಾಯ ಇಂದು ಎಲ್ಲಾ ಕ್ಷೇತ್ರಗಳನ್ನೂ ವ್ಯಾಪಿಸಿದೆ ಆದರೆ ಉನ್ನತ ಹುದ್ದೆಗಳಾದ ನಾಗರಿಕ ಸೇವೆಯಲ್ಲಿ ಕ್ರೈಸ್ತ ಸಮುದಾಯ ಬಹಳ ಹಿಂದೆ ಇದ್ದು ಈ ನಿಟ್ಟಿನಲ್ಲಿ ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯಗಳು ಗಂಭೀರ ಚಿಂತನೆಯನ್ನು ನಡೆಸಬೇಕಾಗಿದೆ. ಸಮುದಾಯದ ಯುವಜನರಿಗೆ ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಲು ಸುಸಜ್ಜಿತವಾದ ತರಬೇತಿ ಅಕಾಡೆಮಿಯ ಅಗತ್ಯತೆ ಬಹಳ ಇದ್ದು ಈ ನಿಟ್ಟಿನಲ್ಲಿ ಎರಡೂ ಧರ್ಮಪ್ರಾಂತ್ಯಗಳು ಮುಂದಾಳತ್ವ ವಹಿಸಬೇಕು. ನಮ್ಮ ಸಮುದಾಯದ ಮಕ್ಕಳು ಹೆಚ್ಚು ಹೆಚ್ಚು ನಾಗರಿಕ ಸೇವೆಗಳತ್ತ ಒಲವು ತೋರುವಂತೆ ಪೋಷಕರೂ ಕೂಡ ಮಕ್ಕಳಿಗೆ ತಿಳಿಹೇಳಬೇಕು, ಅಲ್ಲದೆ ಯುವಜನರು ಕೂಡ ಇದರತ್ತ ಒಲವು ತೋರಿಸಬೇಕು. ದಿನದಿಂದ ದಿನಕ್ಕೆ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚುತ್ತಲಿದ್ದು ಸಾರ್ವಜನಿಕ ಉದ್ದಿಮೆಗಳತ್ತ ಒಲವು ತೋರಬೇಕಾದ ಪರಿಸ್ಥಿತಿ ಮುಂದೆ ಬರಲಿದ್ದು ಈಗಲೇ ಅದಕ್ಕೆ ತಯಾರಿ ಮಾಡಿಕೊಳ್ಳುವುದು ಉತ್ತಮ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂ ಮೊನ್ಸಿಂಜ್ಞೊರ್ ಬ್ಯಾಪ್ಟಿಸ್ ಮಿನೇಜಸ್ ಅವರು ನೋವಿನಲ್ಲಿ ಇರುವವರಿಗೆ ಸಾಂತ್ವಾನದ ಕೈಯಾಗಬೇಕಾಗಿದ್ದು ಈ ನಿಟ್ಟಿನಲ್ಲಿ ಕೆಥೊಲಿಕ್ ಸಭಾ ನಡೆಸುತ್ತಿರುವ ಕಾರ್ಯಕ್ರಮಗಳು ಪ್ರಶಂಸಿನೀಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನೂತನವಾಗಿ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಮೆಲ್ವಿನ್ ಡಿಸೋಜ, ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಡಿ’ಆಲ್ಮೇಡಾ, ಕ್ರಿಶ್ಚಿಯನ್ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರಶಾಂತ್ ಜತ್ತನ್ನ ಹಾಗೂ ರೋಬರ್ಟ್ ಮಿನೇಜಸ್ ಇವರುಗಳನ್ನು ಗುರುತಿಸಿ ಗೌರವಿಸಲಾಯಿತು.

ಬರಹಗಾರ ಸ್ಟೀವನ್ ಕ್ವಾಡ್ರಸ್ ಇವರಿಗೆ ದಿ. ಪ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರವನ್ನು ಪ್ರಧಾನ ಮಾಡಲಾಯಿತು. ದಿ. ಡೆನಿಸ್ ಡಿ’ಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯ ವಿಜೇತರಿಗೂ ಈ ಸಂದರ್ಭದಲ್ಲಿ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಉಪಾಧ್ಯಕ್ಷೆ ಲೀನಾ ಮಿನೇಜಸ್ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಜಸಿಂತಾ ಕೊಲಾಸೊ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಸೊಲೊಮನ್ ಅಲ್ವಾರಿಸ್ ವಾರ್ಷಿಕ ಲೆಕ್ಕಪರಿಶೋಧನ ವರದಿಯನ್ನು ಮಂಡಿಸಿದರು.

ವೇದಿಕೆಯಲ್ಲಿ ಕೆಎಸ್‍ಡಿಎಲ್ ಇದರ ಮಾಜಿ ಅಧ್ಯಕ್ಷೆ ವೆರೋನಿಕಾ ಕರ್ನೆಲಿಯೋ, ಎಐಸಿಯು ಇದರ ರಾಜ್ಯಾಧ್ಯಕ್ಷ ವಾಲ್ಟರ್ ಸಿರಿಲ್ ಪಿಂಟೊ, ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಾತ್ಮಿಕ ನಿರ್ದೇಶಕ ವಂ ಫರ್ಡಿನಾಂಡ್ ಗೊನ್ಸಾಲ್ವಿಸ್, ಉಡುಪಿ ಧರ್ಮಪ್ರಾಂತ್ಯದ ಚಾನ್ಸಲರ್ ವಂ ವಲೇರಿಯನ್ ಮೆಂಡೊನ್ಸಾ, ನಿಕಟಪೂರ್ವ ಅಧ್ಯಕ್ಷ ವಿಲಿಯಂ ಮಚಾದೊ, ವಲಯಾಧ್ಯಕ್ಷರುಗಳಾದ ಸ್ಟೀವನ್ ಪ್ರಕಾಶ್ ಲೂವಿಸ್, ಲಿಯೋ ಸಿಕ್ವೇರಾ, ಉಡುಪಿ ಘಟಕಾಧ್ಯಕ್ಷೆ ಬೆನಡಿಕ್ಟಾ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಉಡುಪಿ ವಲಯಾಧ್ಯಕ್ಷೆ ಮೇರಿ ಡಿಸೋಜಾ ಸ್ವಾಗತಿಸಿದರು. ಫ್ಲಾವೈನ್ ಡಿಸೋಜಾ ಹಾಗೂ ಮೇಬಲ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version