ಖಾಕಿ ದರ್ಪ ತೊರೆದು ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಿ – ಐಜಿಪಿ ಹೇಮಂತ್ ನಿಂಬಾಲ್ಕರ್
ಉಡುಪಿ: ಪೊಲೀಸರ ಬಗ್ಗೆ ಜನಸಾಮಾನ್ಯರಿಗೆ ಅಪಾರ ನಿರೀಕ್ಷೆಗಳಿದ್ದು, ಖಾಕಿ ದರ್ಪ ತೊರೆದು ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಬೇಕಿದೆ ಎಂದು ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಲ್ಕರ್ ಹೇಳಿದರು.
ಉಡುಪಿ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯಲ್ಲಿ ನಡೆದ 11ನೇ ತಂಡದ ಸಶಸ್ತ್ರ ಮೀಸಲು ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಗೌರವ ರಕ್ಷೆ ಸ್ವೀಕರಿಸಿ ಅವರು ಮಾತನಾಡಿದರು.
10 ತಿಂಗಳ ತರಬೇತಿ ಸಂದರ್ಭ ವರಟು ವರ್ತನೆಗಳನ್ನು ಕಲಿಸಿಕೊಡಲಾಗುವುದಿಲ್ಲ. ಹೀಗಾಗಿ ಆದನ್ನು ವೃತ್ತಿ ಜೀವನದಲ್ಲಿ ಆಳವಡಿಸಿಕೊಳ್ಳಬೇಡಿ. ಶಾಂತಿಯುತ ಸಮಾಜ ನಿರ್ಮಾಣಕ್ಕಾಗಿ ಕಿಡಿಗೇಡಿಗಳ ವಿರುದ್ಧ ಲಾಠಿ ಉಪಯೋಗಿಸಬೇಕೇ ವಿನಾ ಆಮಾಯಕರು, ರೈತರು, ಮಹಿಳೆಯರು, ದೀನ ದಲಿತರ ಮೇಲೆ ಪ್ರಯೋಗಿಸಬಾರದು. ಉತ್ತಮ ಕವಾಯತು ಪೊಲೀಸರ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಅವರು ಕಿವಿಮಾತು ಹೇಳಿದರು.
ಪೊಲೀಸರು ಸಮಯದ ಮಿತಿಯಿಲ್ಲದೆ ಹಿತಕರ, ನ್ಯಾಯ ಸಮ್ಮತ ಸಾಮಾಜಿಕ ವ್ಯವಸ್ಥೆಗಾಗಿ ದುಡಿಯಬೇಕು. ಇಂದು ಪೊಲೀಸರಿಂದ ಸಮಾಜದಲ್ಲಿ ಒತ್ತಡ ಹೆಚ್ಚಾಗಿದ್ದು, ಸೌಜನ್ಯಯುತ ನಡವಳಿಕೆಯಿಂದ ಇದನ್ನು ಬದಲಾಯಿಸಬಹುದು ಎಂದು ಆವರು ಹೇಳಿದರು.
ಎಸ್ಪಿ ಡಾ. ಸಂಜೀವ ಎಂ. ಪಾಟೀಲ್ ಮಾತನಾಡಿ, ಬೆಳಗಾವಿಯಿಂದ 44 ಮಂದಿ, ಹುಬ್ಬಳ್ಳಿ- ಧಾರವಾಡದಿಂದ 41 ಮಂದಿ, ಬೆಂಗಳೂರು, ತುಮಕೂರಿನಿಂದ ತಲಾ 6 ಮಂದಿ ಸೇರಿದಂತೆ ಒಟ್ಟು 95 ಮಂದಿ 8 ತಿಂಗಳ ಒಳಾಂಗಣ ಮತ್ತು ಹೊರಾಂಗಣ ತರಬೇತಿ ಪಡೆದಿದ್ದಾರೆ ಎಂದರು.
ತರಬೇತಿ ಸಂದರ್ಭ ವಿಶೇಷ ಸಾಧನೆ ತೋರಿದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಎಎಸ್ಪಿ ಕುಮಾರಚಂದ್ರ ಉಪಸ್ಥಿತರಿದ್ದರು. ಡಿವೈಎಸ್ಪಿ ಕುಮಾರಸ್ವಾಮಿ ವರದಿ ವಾಚಿಸಿದರು. ಕಾರ್ಕಳ ಉಪವಿಭಾಗ ಎಎಸ್ಪಿ ಹೃಷೀಕೇಶ್ ಸೋನಾವನೆ ಬಹುಮಾನ ಪಟ್ಟಿ ವಾಚಿಸಿದರು. ಕುಂದಾಪುರ ಡಿವೈಎಸ್ಪಿ ಪ್ರವೀಣ್ ನಾಯಕ್ ವಂದಿಸಿದರು.