Home Mangalorean News Kannada News ಖಾಸಗಿ ಆಸ್ಪತ್ರೆಗಳು ಶೇ. 50 ಹಾಸಿಗೆ ನೀಡಲೇಬೇಕು: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಖಾಸಗಿ ಆಸ್ಪತ್ರೆಗಳು ಶೇ. 50 ಹಾಸಿಗೆ ನೀಡಲೇಬೇಕು: ಸಚಿವ ಕೋಟ ಶ್ರೀನಿವಾಸ ಪೂಜಾರಿ

Spread the love

ಖಾಸಗಿ ಆಸ್ಪತ್ರೆಗಳು ಶೇ. 50 ಹಾಸಿಗೆ ನೀಡಲೇಬೇಕು: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು: ಕೋವಿಡ್ ನಿರ್ವಹಣೆಗೆ ಖಾಸಗೀ ಆಸ್ಪತ್ರೆಗಳು ಹಾಗೂ ಮೆಡಿಕಲ್ ಕಾಲೇಜುಗಳು ತಮ್ಮ ಹಾಸಿಗೆ ಸಾಮಥ್ಯ೯ದ ಶೇಕಡಾ 50 ರಷ್ಟನ್ನು ಸರಕಾರಕ್ಕೆ ಬಿಟ್ಟು ಕೊಡಲೇಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಅವರು ಗುರುವಾರ ಕೋವಿಡ್ ನಿರ್ವಹಣೆ ಸಂಬಂಧ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರ ಮನವಿ ಮೇರೆಗೆ ಎ.ಜೆ ಆಸ್ಪತ್ರೆ ಹಾಗೂ ಶ್ರೀನಿವಾಸ ವೈದ್ಯಕೀಯ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಸಾರ್ವಜನಿಕ ಆರೋಗ್ಯ ರಕ್ಷಣೆ ಸರಕಾರದ ಆದ್ಯತೆಯಾಗಿದೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋರೋನಾ ಸೋಂಕಿತರ ಚಿಕಿತ್ಸೆಗೆ ಖಾಸಗೀ ಆಸ್ಪತ್ರೆಗಳು ಸರಕಾರದೊಂದಿಗೆ ಸಹಕರಿಸಬೇಕು. ರಾಜ್ಯ ಸರಕಾರವು ಆಯುಷ್ಮಾನ್ ಯೋಜನೆಯಡಿ ಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ಉದ್ದೇಶಿಸಿದೆ. ಅಲ್ಲದೆ ಖಾಸಗಿಯಾಗಿ ಚಿಕಿತ್ಸೆ ಪಡೆಯುವ ಸೋಂಕಿತರಿಗೆ ಸರಕಾರ ನಿಗದಿಪಡಿಸಿದ ದರದಲ್ಲಿ ಚಿಕಿತ್ಸೆ ನೀಡಬೇಕು ಎಂದು ಸಚಿವರು ತಿಳಿಸಿದರು.

ಖಾಸಗೀ ಆಸ್ಪತ್ರೆಗಳಿಗೆ ಸರಕಾರದಿಂದ ರ್ಯಾಪಿಡ್ ಕಿಟ್ ಗಳನ್ನು ಸರಬರಾಜು ಮಾಡಲಾಗುತ್ತಿದ್ದು, ಉಚಿತವಾಗಿ ಕೋವಿಡ್ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಈಗಾಗಲೇ ಈ ಪರೀಕ್ಷೆ ನಡೆಯುತ್ತಿದೆ ಎಂದು ಸಚಿವರು ತಿಳಿಸಿದರು. ಜಿಲ್ಲೆಗೆ ರಾಜ್ಯ ಸರಕಾರವು 50 ವೆಂಟಿಲೇಟರ್ ಗಳನ್ನು ಸರಬರಾಜು ಮಾಡಲಿದೆ ಎಂದರು.

ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಮಾತನಾಡಿ, ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ವಿವರ, ಶುಲ್ಕ ಮಾಹಿತಿ, ಆಯುಷ್ಮಾನ್ ಯೋಜನೆಯ ಸಮರ್ಪಕ ಮಾಹಿತಿಯನ್ನು ರೋಗಿಗಳು ದಾಖಲಾಗುವಾಗಲೇ ನೀಡಬೇಕು. ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ದೊಡ್ಡ ಬೋಡ್೯ ಹಾಕಿ ವಿವರ ನಮೂದಿಸಬೇಕು ಎಂದು ಸೂಚಿಸಿದರು.

ಎಲ್ಲಾ ಮೆಡಿಕಲ್ ಕಾಲೇಜುಗಳು ಪ್ರತೀ ದಿನ 100 ಮಂದಿಯ ರ್ಯಾಪಿಡ್ ಆಂಟಿಜನ್ ಪರೀಕ್ಷೆಯನ್ನು ಉಚಿತವಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಾರ್ವಜನಿಕರಿಗೆ ಆಯುಷ್ಮಾನ್ ಸೌಲಭ್ಯದ ಮಾಹಿತಿ ನೀಡಲು ಆರೋಗ್ಯ ಇಲಾಖೆ ವತಿಯಿಂದ ಪ್ರತೀ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಆರೋಗ್ಯ ಮಿತ್ರ ಕಾರ್ಯಕರ್ತರನ್ನು ನೇಮಿಸಲಾಗಿದ್ದು, ಇವರು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ನಿರ್ಲಕ್ಷ್ಯ ತೋರುವವರ ವಿರುದ್ಧ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಸಿದರು.

ಸಭೆಯಲ್ಲಿ ಶಾಸಕ ಡಾ. ಭರತ್ ಶೆಟ್ಟಿ, ಜಿ.ಪಂ.ಸಿಇಒ ಡಾ. ಸೆಲ್ವಮಣಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯಾರಿ, ವೆನ್ ಲಾಕ್ ಅಧೀಕ್ಷಕ ಡಾ. ಸದಾಶಿವ, ಎ.ಜೆ. ಆಸ್ಪತ್ರೆ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ, ಶ್ರೀನಿವಾಸ ಮೆಡಿಕಲ್ ಕಾಲೇಜಿನ ಡೀನ್ ಡಾ. ಉದಯಕುಮಾರ್ ಮತ್ತಿತರರು ಇದ್ದರು.


Spread the love

Exit mobile version