ದಕ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನಾ – ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವಿಚಾರದಲ್ಲಿ ಡಿಸಿಎಮ್ ಅಶ್ವಥ್ ನಾರಾಯಣ ಜೊತೆ ಸಚಿವ ಕೋಟ ಚರ್ಚೆ
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣ ಕುರಿತು, ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುವ ಸಲುವಾಗಿ ವಿಕಾಸಸೌಧದಲ್ಲಿ ಇಂದು ಉಪ ಮುಖ್ಯ ಮಂತ್ರಿಗಳಾದ ಡಾ. ಅಶ್ವತ್ ನಾರಾಯಣರವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರು ತುರ್ತು ಸಭೆ ನಡೆಸಿದರು.
ಅಲ್ಲದೆ ಕೋವಿಡ್-19 ಸೋಂಕಿತರು, ತಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿದ ಕೂಡಲೇ, ಅಗತ್ಯವಿದ್ದಲ್ಲಿ ಹತ್ತಿರದ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ವೆಚ್ಚದಲ್ಲಿ ಉಚಿತ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗುವುದು ಹಾಗೂ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲು ಆದೇಶ ನೀಡುವುದಾಗಿ ತಿಳಿಸಿದರು.
ಇನ್ನು ಮುಂದೆ ಕೋವಿಡ್ -19 ಚಿಕಿತ್ಸೆಗೆ ಒಳಪಡುವವರು ಮತ್ತು ಕೋವಿಡ್-19 ಟೆಸ್ಟ್ ಮಾಡಿಕೊಳ್ಳಬೇಕಾದವರು ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ ಎಂದು ಭರವಸೆ ನೀಡಿದ ಉಪ ಮುಖ್ಯಮಂತ್ರಿಗಳು, ಈ ನಿಟ್ಟಿನಲ್ಲಿ ಕೂಡಲೇ ಕಾರ್ಯ ಪ್ರವೃತ್ತರಾಗಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದರು.
ಈ ಮಹತ್ವದ ಸಭೆಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಕೋವಿಡ್-19 ಪೀಡಿತರ ಸಮಸೈಗಳು ಪರಿಹಾರ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಪ್ರತಿಕ್ರಿಯಿಸಿ, ಜಿಲ್ಲೆಯ ನೆರವಿಗೆ ಬಂದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ನವರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಾll ಅಶ್ವತ್ ನಾರಾಯಣ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.