ಖಾಸಗಿ ವಾಹನಗಳ ಅಕ್ರಮ ಸಂಚಾರ ನಿಯಂತ್ರಿಸಿ- ಕೆ.ಎಸ್.ಆರ್.ಟಿ.ಸಿ.ಅಧ್ಯಕ್ಷ ಗೋಪಾಲ ಪೂಜಾರಿ

Spread the love

ಖಾಸಗಿ ವಾಹನಗಳ ಅಕ್ರಮ ಸಂಚಾರ ನಿಯಂತ್ರಿಸಿ- ಕೆ.ಎಸ್.ಆರ್.ಟಿ.ಸಿ.ಅಧ್ಯಕ್ಷ ಗೋಪಾಲ ಪೂಜಾರಿ

ಹಾಸನ: ಖಾಸಗಿ ಸಾರಿಗೆ ವಾಹನಗಳ ಅನಧಿಕೃತ ಸಂಚಾರ ವ್ಯವಸ್ಥೆಗೆ ಕಡಿವಾಣ ಹಾಕುವ ಮೂಲಕ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಉಂಟಾಗುತ್ತಿರುವ ನಷವನ್ನು ತಡೆಯಬೇಕಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ಶಾಸಕರಾದ ಗೋಪಾಲ ಪೂಜಾರಿಯವರು ಜಿಲ್ಲಾಡಳಿತಕ್ಕೆ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು ಪರವಾನಗಿ ಪಡೆಯದ ಖಾಸಗಿ ವಾಹನಗಳ ಸಂಚಾರದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ನಷ್ಟದಲ್ಲಿ ಓಡಿಸುವಂತಾಗಿದೆ. ಇದರಿಂದ ಸಂಸ್ಥೆಗೆ ಹೊರೆಯಾಗುತ್ತಿದೆ. ಸಿಬ್ಬಂದಿ ವೇತನ, ಸಾರಿಗೆ ವ್ಯವಸ್ಥೆಯ ಆಧುನೀಕರನಕ್ಕೆ ತೊಂದರೆಯಾಗುತ್ತಿದೆ ಹಾಗಾಗಿ ವಿಚಕ್ಷಣಾ ದಳಗಳನ್ನು ರಚಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆದಾಯಕ್ಕೆ ಧಕ್ಕೆ ತರುತ್ತಿರುವ ಖಾಸಗಿ ವ್ಯಾನ್, ಮ್ಯಾಕ್ಸಿ ಕ್ಯಾಬ್‌ಗಳ ಓಡಾಟವನ್ನು ನಿಯಂತ್ರಿಸಲು ಸಹಕರಿಸಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿಯವರು ಮಾತನಾಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ರಾಜ್ಯ ಸರ್ಕಾರದ ಸೊತ್ತು. ಅದರ ನಷ್ಟ ತಡೆಯುವುದು ಎಲ್ಲರ ಜವಾಬ್ದಾರಿ ಈ ಬಗ್ಗೆ ಶೀಘ್ರದಲ್ಲೇ ಅಧಿಕಾರಿಗಳ ಸಭೆ ಕರೆದು ಆದಷ್ಟು ಬೇಗ ವಿಚಕ್ಷಣಾ ತಂಡ ರಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಹಾಸನದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಹೆಚ್ಚಿನ ನಷ್ಟ ಅನುಭವಿಸುತ್ತಿವೆ. ಶಾಲಾ ಮಕ್ಕಳು ಹಾಗೂ ಗ್ರಾಮೀಣ ಪ್ರದೇಶದ ಜನರ ಅನುಕೂಲಕ್ಕಾಗಿ ಜಿಲಲೆಯಲ್ಲಿ 325 ಬಸ್ಸುಗಳ ಓಡಾಟಕ್ಕೆ ಪರವಾನಗಿ ನೀಡಲಾಗಿದೆ. ಪ್ರತಿ ಬಸ್ಸು ಪ್ರತಿ ತಿಂಗಳು ಸರಾಸರಿ 1.5 ಲಕ್ಷದಿಂದ 2.5 ಲಕ್ಷ ರೂ.ವರೆಗೆ ನಷ್ಟ ಅನುಭವಿಸುತ್ತಿವೆ. ಒಟ್ಟಾರೆ ಪ್ರತಿ ತಿಂಗಳು 3 ಕೋಟಿ ರೂ.ಗೂ ಅಧಿಕ ಮೊತ್ತದ ನಷ್ಠ ಉಂಟಾಗುತ್ತಿದೆ. ಇದು ಹೀಗೆ ಮುಂದುವರೆದರೆ ಕೆಲ ಬಸ್ಸುಗಳ ಸಂಚಾರ ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಗೋಪಾಲ ಪೂಜಾರಿಯವರು ತಿಳಿಸಿದರು.

ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ 2500 ಖಾಸಗಿ ಮಾಜಕ್ಸಿ ಕ್ಯಾಬ್, ಟೆಂಪೋ, ಆಪೆ ಆಟೋಗಳು ಸ್ಟೇಜ್ ಕ್ಯಾರಿಯೇಜ್ ರೀತಿಯಲ್ಲಿ ಜನರನ್ನು ಸಾಗಿಸುತ್ತಿವೆ. ಅವುಗಳಿಗೆ ಕೇವಲ ಒಪ್ಪಂದದ ಆಧಾರದ ಮೇಲೆ (ಮದುವೆ ಮತ್ತಿತರ ಸಮಾರಂಭಗಳಿಗೆ ನೇರ ಒಪ್ಪಂದದ ರೂಪದಲ್ಲಿ) ಜನರನ್ನು ಸಾಗಿಸಲು ಪರವಾನಗಿ ನೀಡಲಾಗಿದೆ. ಆದರೆ ಇವುಗಳು ಬೇಕಾಬಿಟ್ಟಿ ಸಂಚರಿಸಿ ಪ್ರತಿದಿನ 2.5 ಲಕ್ಷ ರೂ.ನಷ್ಟು ಆದಾಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ನಷ್ಟವಾಗುತ್ತಿದೆ. ಇದನ್ನು ತಡೆಯಲು ಜಿಲ್ಲಾಡಳಿತ ತಕ್ಷಣ ಮುಂದಾಗಬೇಕು ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಯಶವಂತ್, ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಡಿ.ಟಿ.ಒ.ಕಮಲ್ ಕುಮಾರ್, ಡಿ.ಎಂ.ಇ. ಬ್ರಹ್ಮದೇವ್, ಆಡಳಿತಾಧಿಕಾರಿ ಲೋಕೇಶ್, ಭದ್ರತಾ ಜಾಗೃತಾಧಿಕಾರಿ ಪಾಪಣ್ಣ, ಉಗ್ರಾಣಾಧಿಕಾರಿ ಶಶಿಕುಮಾರ್, ಕಾಮಗಾರಿ ಅಭಿಯಂತರಾದ ಕೃಷ್ಣಪ್ಪ, ಸಹಾಯಕ ಸಂಚಾರ ವ್ಯವಸ್ಥೆ ಅಧಿಕಾರಿ ಸುದೀಪ್ ಮತ್ತಿತರರು ಹಾಜರಿದ್ದರು. ಹೆಚ್ಚುವರಿ ಪೊಲೀಸ್ ರಿಷ್ಠಾಧಿಕಾರಿ ಜ್ಯೋತಿ ವೈಧ್ಯನಾಥ್ ಮತ್ತಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.


Spread the love