ಗಂಗೊಳ್ಳಿ: ಅಂಗಡಿಗಳಲ್ಲಿ ಕಳವು ಪ್ರಕರಣ- ಮೂವರು ಆರೋಪಿಗಳ ಬಂಧನ
ಕುಂದಾಪುರ: ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಡೆದ ಮೆಡಿಕಲ್ ಶಾಪ್, ಅಂಗಡಿ, ಬಾರ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಗಂಗೊಳ್ಳಿ ಪೊಲೀಸರು ಮಾ.29ರಂದು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಂಗಳೂರು ನಂತೂರಿನ ಅರ್ಷಿತ್ ಅವಿನಾಶ್ ದೋಡ್ರೆ(23), ಬೈಂದೂರು ಪಡುವರಿ ಗ್ರಾಮದ ರಿಲ್ವಾನ್ ರಿಝ್ವಾನ್(24), ಬೈಂದೂರು ಯಡ್ತರೆ ಗ್ರಾಮದ ಅರ್ಬಾಝ್(23) ಎಂದು ಗುರುತಿಸಲಾಗಿದೆ
ಜಿಲ್ಲೆಯ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡಾ ಗುಡ್ಡೆಯಂಗಡಿ ಗ್ರಾಮದ ಶಾನ್ ಮೆಡಿಕಲ್ ಶಾಪ್, ಬೈಂದೂರು ಠಾಣಾ ವ್ಯಾಪ್ತಿಯ ನಾಗೂರು ಎಂಬಲ್ಲಿ ಶ್ರೇಷ್ಠ ಮೆಡಿಕಲ್ ಶಾಪ್ ಹಾಗೂ ಕುಂದಾಪುರ ಠಾಣಾ ವ್ಯಾಪ್ತಿಯ ಖಾರ್ವಿಕೇರಿ ರಸ್ತೆಯಲ್ಲಿರುವ ಮಹಾಂಕಾಳಿ ಜನರಲ್ ಸ್ಟೋರ್ ಹಾಗೂ ಕೋಟಾ ಠಾಣಾ ವ್ಯಾಪ್ತಿಯ ಕೋಟ ಮೂರುಕೈಯಲ್ಲಿರುವ ವಿವೇಕ ಮೆಡಿಕಲ್ ಶಾಪ್, ಹಳ್ಳಾಡಿಯಲ್ಲಿರುವ ತಲ್ಲೂರು ಬಾರ್ ರೆಸ್ಟೋರೆಂಟ್, ಅಯ್ಯಂಗಾರ್ ಬೇಕರಿ, ಸಾಯಿಬ್ರಕಟ್ಟೆ ಯಲ್ಲಿರುವ ನಂದಿಕೇಶ್ವರ ಹೊಟೇಲಿನಲ್ಲಿ ನಡೆದ ಕಳವು ಪ್ರಕರಣದಲ್ಲಿ ಇವರು ಭಾಗಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಒಟ್ಟು 36,000ರೂ. ಮೊತ್ತದ ನಗದು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಬೈಕ್ ಹಾಗೂ 3 ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಗಂಗೊಳ್ಳಿ ಎಸ್ಸೈಗಳಾದ ಹರೀಶ್ ಆರ್., ಬಸವರಾಜ ಕನಶೆಟ್ಟಿ ಹಾಗೂ ಸಿಬ್ಬಂದಿ ಮೋಹನ, ನಾಗರಾಜ, ಚಂದ್ರಶೇಖರ, ಸಂದೀಪ್, ನಾಗರಾಜ, ದಿನೇಶ್ ಹಾಗೂ ನಿತಿನ್ ಭಾಗವಹಿಸಿದ್ದಾರೆ.