ಗಂಗೊಳ್ಳಿ: ಆರೋಗ್ಯ ಸಮೀಕ್ಷೆಗೆ ಬಂದ ಕರೋನಾ ವಾರಿಯರ್ಸ್ ಗೆ ಜಾತಿನಿಂದನೆ, ಸರಕಾರಿ ಕರ್ತವ್ಯಕ್ಕೆ ಅಡ್ಡಿ – ಪ್ರಕರಣ ದಾಖಲು
ಕುಂದಾಪುರ: ಕೋವಿಡ್ -19 ಸಮೀಕ್ಷೆ ಮಾಡುತ್ತಿದ್ದ ಬಿ.ಎಲ್.ಓ ಒರ್ವರಿಗೆ ಆರೋಗ್ಯ ಸಮೀಕ್ಷೆ ಹೆಸರಿನಲ್ಲಿ ಸಿ.ಎ.ಎ, ಎನ್.ಆರ್.ಸಿ ಬಗ್ಗೆ ಸಮೀಕ್ಷೆ ಮಾಡುತ್ತಿದ್ದೀರಿ ಎಂದು ಹೇಳಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಜಾತಿ ನಿಂದನ ಮಾಡಿದ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಿ.ಎಲ್.ಓ ಉದಯ್ ಕುಮಾರ್ ಎಂಬವರು ಏಪ್ರಿಲ್ 29ರಂದು ಬೆಳಿಗ್ಗೆ 10:45 ಗಂಟೆಗೆ ಗಂಗೊಳ್ಳಿ ಗ್ರಾಮದ ಬಾಬಾಷಾ ಮೊಹಲ್ಲಾ ಎಂಬಲ್ಲಿ ಅಬ್ದುಲ್ ಅಜೀಜ್ ರವರ ಮನೆಯ ಸಮೀಪ ಕೋವಿಡ್-19 ಗೆ ಸಂಬಂಧಿಸಿದಂತೆ ಸರಕಾರಿ ಕರ್ತವ್ಯ ನಿರ್ವಹಿಸಿಕೊಂಡಿರುವಾಗ ಅಬ್ದುಲ್ ಅಜೀಜ್ ರವರು ಉದಯ ಕುಮಾರ್ ರವರ ಬಳಿ ಬಂದು ಆರೋಗ್ಯ ಸಮೀಕ್ಷೆ ಹೆಸರಿನಲ್ಲಿ ಸಿ.ಎ.ಎ, ಎನ್.ಆರ್.ಸಿ ಬಗ್ಗೆ ಸಮೀಕ್ಷೆ ಮಾಡುತ್ತಿದ್ದೀರಿ ಎಂದು ಹೇಳಿ ಸಮೀಕ್ಷೆ ಮಾಡುತ್ತಿರುವ ದಾಖಲಾತಿಗಳನ್ನು ಉದಯ ಕುಮಾರ್ ರವರ ಕೈಯಿಂದ ಹಿಡಿದು ಎಳೆದಿರುತ್ತಾರೆ
“ನಾವು ಯಾವುದೇ ರೀತಿಯ ಮಾಹಿತಿ ನೀಡುವುದಿಲ್ಲ ಎಂಬುದಾಗಿ ಹೇಳಿ, ತನ್ನ ಮೊಬೈಲ್ ನಲ್ಲಿರುವ ವಿಡಿಯೋ ಚಿತ್ರೀಕರಣವನ್ನು ಅಕ್ಕಪಕ್ಕದ ಮನೆಯವರಿಗೆ ತೋರಿಸಿ, ಕೋವಿಡ್-19 ಆರೋಗ್ಯ ಸಮೀಕ್ಷೆ ವಿರುದ್ಧ ಅಪಪ್ರಚಾರ ಮಾಡಿರುವುದಲ್ಲದೇ ಪರಿಶಿಷ್ಠ ಜಾತಿಗೆ ಸೇರಿದ ಉದಯ್ ಕುಮಾರ್ ರವರಿಗೆ ಅವಾಚ್ಛ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ, ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿರುತ್ತಾರೆ ಎಂದು ಕುಂದಾಪುರ ತಹಶೀಲ್ದಾರ್ ತಿಪ್ಪೇಸ್ವಾಮಿಯವರು ಗಂಗೊಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕುಂದಾಪುರ ತಹಶೀಲ್ದಾರ್ ಅವರ ದೂರಿನಂತೆ ಗಂಗೊಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.