ಗಂಗೊಳ್ಳಿ-ಕುಂದಾಪುರ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಬೈಂದೂರು ಶಾಸಕರಿಗೆ ಮನವಿ ಸಲ್ಲಿಕೆ
ಕುಂದಾಪುರ : ಗಂಗೊಳ್ಳಿ-ಕುಂದಾಪುರ ಸಂಪರ್ಕ ಸೇತುವೆ ಹೋರಾಟ ಸಮಿತಿ ವತಿಯಿಂದ ಗಂಗೊಳ್ಳಿ-ಕುಂದಾಪುರ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಸುಕುಮಾರ್ ಶೆಟ್ಟಿ, ಗಂಗೊಳ್ಳಿ-ಕುಂದಾಪುರ ಸಂಪರ್ಕ ಸೇತುವೆ ನಿರ್ಮಿಸುವುದು ಸವಾಲು. ಈ ಸಂಪರ್ಕ ಸೇತುವೆ ನಿರ್ಮಿಸಬೇಕೆಂದು ಅನೇಕ ವರ್ಷಗಳಿಂದ ಸಾರ್ವಜನಿಕರು ಆಗ್ರಹಿಸುತ್ತಲೇ ಬಂದಿದ್ದಾರೆ. ಸೇತುವೆ ನಿರ್ಮಾಣದಿಂದ ಗಂಗೊಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. ವ್ಯಾಪಾರ, ವಹಿವಾಟುಗಳಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ. ಹೀಗಾಗಿ ಗಂಗೊಳ್ಳಿ-ಕುಂದಾಪುರ ಸಂಪರ್ಕ ಸೇತುವೆ ನಿರ್ಮಿಸುವ ಸಂಬಂಧ ಸಂಸದ ಬಿ.ವೈ.ರಾಘವೇಂದ್ರ ಅವರು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೂಲಕ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಇರುವುದರಿಂದ ಮುಂದಿನ ದಿನಗಳಲ್ಲಿ ಸಂಪರ್ಕ ಸೇತುವೆ ಮಂಜೂರಾಗುವ ನಿರೀಕ್ಷೆ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಂಸದರ ಮೇಲೆ ನಿರಂತರ ಒತ್ತಡ ಹೇರುವ ಕಾರ್ಯ ಮಾಡುವುದಾಗಿ ಅವರು ಭರವಸೆ ನೀಡಿದರು.
ಸಮಿತಿ ಅಧ್ಯಕ್ಷ ಬಿ.ಸದಾನಂದ ಶೆಣೈ ಅವರು ಶಾಸಕರಿಗೆ ಮನವಿ ಸಲ್ಲಿಸಿ ಗಂಗೊಳ್ಳಿ-ಕುಂದಾಪುರ ಸಂಪರ್ಕ ಸೇತುವೆ ನಿರ್ಮಾಣದ ಅಗತ್ಯತೆ ಬಗ್ಗೆ ಶಾಸಕರ ಗಮನ ಸೆಳೆದು ಮುಂದಿನ ಸಾಲಿನ ಬಜೆಟ್ನಲ್ಲಿ ಗಂಗೊಳ್ಳಿ-ಕುಂದಾಪುರ ಸಂಪರ್ಕ ಸೇತುವೆ ನಿರ್ಮಾಣವನ್ನು ಸೇರಿಸಬೇಕೆಂದು ಒತ್ತಾಯಿಸಿದರು.
ಗಂಗೊಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ತಾಪಂ ಸದಸ್ಯ ಸುರೇಂದ್ರ ಖಾರ್ವಿ, ಸಮಿತಿ ಕಾರ್ಯದರ್ಶಿ ನವೀನ್ ಗಂಗೊಳ್ಳಿ, ಉಪಾದ್ಯಕ್ಷರಾದ ಹರೀಶ ಮೇಸ್ತ, ಶಿವಾನಂದ ಪೂಜಾರಿ, ಸದಾಶಿವ ಖಾರ್ವಿ, ಸಮಿತಿ ಪದಾದಿಕಾರಿಗಳು, ಸದಸ್ಯರು, ಗ್ರಾಪಂ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.