ಗಂಗೊಳ್ಳಿ: ಸಮುದ್ರ ರಾಜನಿಗೆ ಪೂಜೆ ಸಲ್ಲಿಸಿ ಕಡಲಿಗಿಳಿದ ಮೀನುಗಾರರು

Spread the love

ಗಂಗೊಳ್ಳಿ: ಸಮುದ್ರ ರಾಜನಿಗೆ ಪೂಜೆ ಸಲ್ಲಿಸಿ ಕಡಲಿಗಿಳಿದ ಮೀನುಗಾರರು

ಕುಂದಾಪುರ: ಹೊಸಋತುವಿನ ಮೀನುಗಾರಿಕೆಗೆ ತೆರಳುವ ಮನ್ನ ಮೀನುಗಾರಿಕೆ ನಡೆಸುವಾಗ ಯಾವುದೇ ತೊಂದರೆಗಳಾಗದಂತೆ ಪ್ರಾರ್ಥಿಸಿ ಮೀನುಗಾರರು ಗಂಗೊಳ್ಳಿ ಕಡಲಕಿನಾರೆಯಲ್ಲಿ ಹಾಲನ್ನು ಅರ್ಪಿಸಿ ಸಮುದ್ರರಾಜನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಅರ್ಚಕ ವೇ| ಮೂ| ವಿಠ್ಠಲ್ದಾಸ್ ಭಟ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನ ನಡೆಯಿತು. ಬಳಿಕ ಪರ್ಸಿನ್ ಬೋಟ್, ಫಿಶಿಂಗ್ ಬೋಟ್ ಹಾಗೂ ಟ್ರಾಲರ್ ಬೋಟ್ಗಳ ಸಂಘದ ಸದಸ್ಯರೆಲ್ಲ ಹಾಲು, ಸೀಯಾಳ, ಫಲಪುಷ್ಪವನ್ನು ಸಮುದ್ರರಾಜನಿಗೆ ಅರ್ಪಿಸಿದರು.

ಈ ಋತುವಿನಲ್ಲಿ ಮತ್ಸ್ಯ ಸಮೃದ್ಧಿ, ಮೀನುಗಾರಿಕೆಗೆ ತೆರಳಿದಾಗ ಯಾವುದೇ ಅಡ್ಡಿ ಆತಂಕಗಳು ಇಲ್ಲದೆ, ಯಾವುದೇ ಅವಘಡಗಳು, ಪ್ರಾಕೃತಿಕ ವಿಕೋಪಗಳು ಸಂಭವಿಸದಿರಲಿ, ಮೀನುಗಾರರ ಪರಸ್ಪರ ಏಕತೆ, ಸೌಹಾರ್ದತೆ ಇರುವಂತೆ ಗಂಗಾಮಾತೆ ಅನುಗ್ರಹಿಸಲಿ ಎಂದು ಪ್ರಾರ್ಥಿಸಿ ಗಂಗೊಳ್ಳಿಯಲ್ಲಿ ಮೀನುಗಾರರು ನೂಲುಹುಣ್ಣಿಮೆ ದಿನವಾದ ಸೋಮವಾರ ಸಮುದ್ರಪೂಜೆ ನೆರವೇರಿಸಿದರು.

ಪರ್ಸಿನ್ ಮೀನುಗಾರರ ಸ್ವ-ಸಹಾಯ ಸಂಘ ಗಂಗೊಳ್ಳಿಯ ಅಧ್ಯಕ್ಷ ರಮೇಶ್ ಕುಂದರ್ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಶ್ರಾವಣ ಹುಣ್ಣಿಮೆಯಂದು ಸಮುದ್ರ ಪೂಜೆಯನ್ನು ಮೀನುಗಾರರೆಲ್ಲ ಸೇರಿ ನೆರವೇರಿಸಿದ್ದೇವೆ. ಆದರೆ ಈ ಸಲ ಮೀನುಗಾರಿಕೆ ಚಟುವಟಿಕೆ ಮಾತ್ರ ಇನ್ನೂ ಆರಂಭಗೊಂಡಿಲ್ಲ. ಕೊರೋನಾ, ಕಾರ್ಮಿಕರ ಸಮಸ್ಯೆ, ಸಮುದ್ರ ಪ್ರಕ್ಷುಬ್ಧ ಪ್ರಕ್ರಿಯೆ ವಿಳಂಬ ಸಹಿತ ಅನೇಕ ಸವಾಲುಗಳಿರುವುದರಿಂದ ಮೀನುಗಾರಿಕೆ ಆರಂಭ ಇನ್ನೂ ಕೆಲ ದಿನಗಳಾಗಬಹುದು ಎಂದವರು ಹೇಳಿದರು.

ಈ ಸಂದರ್ಭದಲ್ಲಿ ತ್ರಿಸೆವೆಂಟಿ ಬೋಟುಗಳ ಮೀನುಗಾರರ ಸಂಘದ ಅಧ್ಯಕ್ಷ ಬಸವ ಖಾರ್ವಿ, ಫಿಶಿಂಗ್ ಬೋಟ್ಗಳ ಸಂಘದ ಪ್ರಮುಖರಾದ ಗಣೇಶ್ ಖಾರ್ವಿ, ಮೀನುಗಾರ ಮುಖಂಡರಾದ ಚಂದ್ರ ಖಾರ್ವಿ, ನಾರಾಯಣ ಖಾರ್ವಿ, ಪ್ರಭಾಕರ ಕುಂದರ್, ಮತ್ತಿತರರು ಉಪಸ್ಥಿತರಿದ್ದರು.


Spread the love