ಗಡಿಯಿಂದ ಬೇರ್ಪಟ್ಟಿದ್ದರೂ ನಾನು ಕನ್ನಡಿಗ: ಕಾಸರಗೋಡು ಚಿನ್ನ
ಮೂಡಬಿದಿರೆ: “ಕಾಸರಗೋಡಿನಲ್ಲಿದ್ದರೂ ನಾನು ಸಾಂಸ್ಕøತಿಕವಾಗಿ ಕರ್ನಾಟಕದವನು. ಮುಂದೊಂದು ದಿನ ನಮ್ಮ ತಾಯಿಯನ್ನು ಸೇರುವ ನಂಬಿಕೆ ಇದೆ” ಎಂದು ಹೆಮ್ಮೆಯಿಂದ ಹೇಳಿಕೊಂಡರು ಹಿರಿಯ ರಂಗಕಲಾವಿದ, ಚಿತ್ರನಟ, ನಿರ್ದೇಶಕ ಕಾಸರಗೋಡು ಚಿನ್ನ. ಆಳ್ವಾಸ್ ನುಡಿಸಿರಿಯ ಭಾಗವಾಗಿ ನಡೆದ “ನನ್ನ ಕಥೆ, ನಿಮ್ಮ ಜೊತೆ”ಯಲ್ಲಿ ಅವರ ಕಥೆಯನ್ನು ಅವರೇ ಹಂಚಿಕೊಂಡಿದ್ದಾರೆ.
“ಕಾಸರಗೋಡು ಕೇರಳದ ಪಾಲಾದರೂ, ಪರೋಕ್ಷವಾಗಿ ಅದು ಕನ್ನಡ ನೆಲವೇ ಆಗಿದೆ. ನನ್ನ ನೆಲದಲ್ಲಿ ಕನ್ನಡವನ್ನು ಉಳಿಸಿ ಬೆಳಿಸಬೇಕೆಂಬ ಉದ್ದೇಶದಿಂದ ನನ್ನ 25 ಸಿನಿಮಾಕ್ಕೆ ಪೂರ್ಣವಿರಾಮ ಇಟ್ಟು ಇಲ್ಲಿ ಕನ್ನಡ, ತುಳು ಹಾಗೂ ಕೊಂಕಣಿ ನಾಟಕಗಳನ್ನು ಪ್ರಚುರಪಡಿಸುವಲ್ಲಿ ತೊಡಗಿಕೊಂಡಿದ್ದೇನೆ. ಈ ಸಲುವಾಗಿ ನಾನು ನನ್ನ ತಂದೆಗೆ ಆಭಾರಿಯಾಗಿದ್ದೇನೆ. ಕಾಸರಗೋಡಿನ ಹೋರಾಟದ ಸಂದರ್ಭದಲ್ಲಿ ಜೈಲು ಸೇರಿದ ನನ್ನ ತಂದೆ, ನನ್ನಲ್ಲಿ ದೇಶಪ್ರೇಮ, ಕನ್ನಡಾಭಿಮಾನ ಬಿತ್ತಿದರು. ಅವರು ಕಲಿಸಿದ ಪಾಠಗಳೇ ನನ್ನ ವೃತ್ತಿ ಹಾಗೂ ಪ್ರವೃತ್ತಿ ಬದುಕಿನ ಯಶಸ್ಸಿಗೆ ಕಾರಣ” ಎಂದವರು ತಮ್ಮ ಅನುಭವವನ್ನು ಉಣಬಡಿಸಿದರು.
“ಗೆಳೆಯರ ಉತ್ತೇಜನದ ಮಾತುಗಳು ಮತ್ತು ಕೆಲವರು ಬೆನ್ನ ಹಿಂದಾಡಿದ ಕೊಂಕು ನುಡಿಗಳೇ ನನ್ನ ಸಾಧನೆಗೆ ಕಾರಣ. ತಾಳ್ಮೆ, ಶ್ರದ್ಧೆ ಇದ್ದರೆ ಯಾವ ಕಾರ್ಯವೂ ಅಸಾಧ್ಯವಲ್ಲವೆಂಬುದಕ್ಕೆ ನಾನೇ ಸಾಕ್ಷಿ. ನನ್ನ ಕಳೆದ ದಿನಗಳತ್ತ ಚಿತ್ತ ಹರಿಸಿದಾಗ ಖುಷಿ ಮತ್ತು ದುಃಖ ಎರಡೂ ಉಂಟಾಗುತ್ತದೆ. ಬಾಲ್ಯದ ಬಡತನ-ನೋವುಗಳ ನಡುವೆಯೂ ನನ್ನ ಗುರಿಯನ್ನು ತಲುಪಿದ್ದೇನೆಂಬ ಸಾರ್ಥಕ ಭಾವ. ಜೊತೆಗೆ ಎಲ್ಲಾ ಮುಗಿದು ಹೋಯಿತೇನೋ ಎಂಬ ಅಂಜಿಕೆ. ಆದರೆ ಇಂತಹ ಸಂದರ್ಭಗಳಲ್ಲಿ ನನ್ನನ್ನು ಮತ್ತೆ ಕಾರ್ಯಪ್ರವೃತ್ತನನ್ನಾಗಿ ಮಾಡುವುದು ಮತ್ತದೇ ನನ್ನ ಕನ್ನಡ. ಹಾಗಾಗಿ ಕನ್ನಡಕ್ಕೆ ನಾನೆಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು” ಎಂದು ಜೀವನಾನುಭವದ ಪುಟಗಳನ್ನು ತೆರೆದಿಟ್ಟರು.
ಕಾರ್ಯಕ್ರಮದಲ್ಲಿ ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ್, ಆಳ್ವಾಸ್ ನುಡಿಸಿರಿಯ ಸ್ವಾಗತ ಸಮಿತಿಯಲ್ಲೊಬ್ಬರಾದ ಹಿರಿಯ ಸಾಹಿತಿ ನಾ.ದಾ.ಶೆಟ್ಟಿ ಉಪಸ್ಥಿತರಿದ್ದರು. ಆಳ್ವಾಸ್ ಕಾಲೇಜಿನ ಕನ್ನಡ ಅಧ್ಯಾಪಕರಾದ ರಮೇಶ್ ಎಂ ಕಾರ್ಯಕ್ರಮವನ್ನು ನಿರೂಪಿಸಿದರು.