ಗಣಪತಿ ವಿಸರ್ಜನೆ ಘರ್ಷಣೆಯಲ್ಲಿ ಆಸ್ಪತ್ರೆ ಸೇರಿದ ಪೊಲೀಸರಿಗೆ ಡಾಕ್ಟರ್ ಆಗಿ ಯೋಗಕ್ಷೇಮ ವಿಚಾರಿಸಿದ ಎಸ್ಪಿ ಅಣ್ಣಾಮಲೈ!
ಚಿಕ್ಕಮಗಳೂರು: ಗಣಪತಿ ವಿಸರ್ಜನೆ ವೇಳೆ ಗುಂಪು ಘರ್ಷಣೆಯಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಪೊಲೀಸರ ಯೋಗ ಕ್ಷೇಮ ವಿಚಾರಸಿದ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ, ವೈದ್ಯರಂತೆ ತನ್ನ ಮೊಬೈಲ್ನಲ್ಲಿದ್ದ ಟಾರ್ಚ್ ಮೂಲಕ ಸಿಬ್ಬಂದಿಗಳಿಗೆ ಆದ ಪ್ರತಿಯೊಂದು ಸಣ್ಣ ಗಾಯವನ್ನೂ ನೋಡಿ ಪೊಲೀಸರಿಗೆ ಧೈರ್ಯ ಹೇಳಿದ್ದಾರೆ.
ಮಂಗಳವಾರ ತರೀಕೆರೆಯಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಉಂಟಾದ ಗಲಭೆಯಿಂದ ಪೊಲೀಸರು ಹಾಗೂ ಜನಸಾಮಾನ್ಯರು ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಗಲಭೆ ಜೋರಾಗುತ್ತಿದ್ದಂತೆ ಸ್ಥಳಕ್ಕೆ ಬಂದ ತಹಶೀಲ್ದಾರ್ ಧರ್ಮೋಜಿ ರಾವ್ ನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದರು.
ರಾತ್ರಿ ಸುಮಾರು 9 ಗಂಟೆ ವೇಳೆಗೆ ತರೀಕೆರೆಗೆ ಬಂದ ಎಸ್ಪಿ ಅಣ್ಣಾಮಲೈ ನಗರದಲ್ಲಿ ಗಸ್ತು ತಿರುಗಿ, ಠಾಣೆಯಲ್ಲಿ ಪೊಲೀಸರೊಂದಿಗೆ ಚರ್ಚೆ ನಡೆಸಿ ಘಟನೆ ವಿವರ ತಿಳಿದುಕೊಂಡಿದ್ದಾರೆ. ನಂತರ ಅಲ್ಲಿಂದ ನೇರವಾಗಿ ಆಸ್ಪತ್ರೆಗೆ ಬಂದು ತನ್ನ ಸಿಬ್ಬಂದಿಯ ಯೋಗ ಕ್ಷೇಮ ವಿಚಾರಿಸಿ, ಧೈರ್ಯ ತುಂಬಿದ್ದಾರೆ.
ಮಂಗಳವಾರ ಸಂಜೆ ತರೀಕೆರೆಯ ಹಿಂದೂ ಮಹಾಸಭಾ ಗಣಪತಿಯನ್ನು ವಿಸರ್ಜನೆಗೆಂದು ಕೋಡಿಕ್ಯಾಂಪ್ನಲ್ಲಿ ಮೆರವಣಿಗೆ ಬರುವಾಗ ಎರಡು ಗುಂಪುಗಳ ನಡುವೆ ಉಂಟಾದ ಘರ್ಷಣೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಎರಡು ಗುಂಪುಗಳು ಪರಸ್ಪರ ಕಲ್ಲನ್ನು ತೂರಿಕೊಂಡಿದ್ದರು. ಪರಿಸ್ಥಿತಿ ಕೈಮೀರುವಂತಹ ಸ್ಥಿತಿ ನಿರ್ಮಾಣವಾಗಿದ್ದರಿಂದ ಪೊಲೀಸರು ಎರಡು ಬಾರಿ ಲಾಠಿ ಪ್ರಹಾರ ನಡೆಸಿದ್ದರು. ಈ ವೇಳೆ ಎರಡು ಗುಂಪಿನವರು ಹಾಗೂ ಗುಂಪು ಘರ್ಷಣೆಯಲ್ಲಿ ಪೊಲೀಸರಿಗೂ ಗಾಯಗಳಾಗಿದ್ದವು.
ಸಂಜೆ ವೇಳೆಗೆ ನಗರ ಸೇರಿದಂತೆ ಕೋಡಿಕ್ಯಾಂಪ್ ಸುತ್ತಲೂ ಪೊಲೀಸರು ಸರ್ಪಗಾವಲಿದ್ದು ಯಾವುದೇ ಅಹಿತರಕರ ಘಟನೆ ನಡೆಯದಂತೆ ಬಂದೋಬಸ್ತ್ ಕಲ್ಪಿಸಿದ್ದರು. ಸಂಜೆ 6 ಗಂಟೆಯಿಂದಲೇ ನಗರ ಸಂಪೂರ್ಣ ಸ್ಥಬ್ಧವಾಗಿದ್ದು ಕೋಡಿಕ್ಯಾಂಪ್ನಲ್ಲಿ ಇಡೀ ರಾತ್ರಿ ಪೊಲೀಸರು ಗಸ್ತು ತಿರುಗಿದ್ದು, ಒಬ್ಬರೂ ನಿಲ್ಲದಂತೆ ಕಟ್ಟೆಚ್ಚರ ವಹಿಸಿದ್ದರು. 9 ಗಂಟೆ ಸುಮಾರಿಗೆ ತರೀಕೆರೆಗೆ ಬಂದ ಎಸ್ಪಿ ಅಣ್ಣಾಮಲೈ ಘಟನೆಯ ವಿವರ ತಿಳಿದುಕೊಂಡು, ಪೊಲೀಸರಿಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ, ನಂತರ ಆಸ್ಪತ್ರೆ ಸೇರಿದ್ದ ತನ್ನ ಸಿಬ್ಬಂದಿಗಳಿಗೆ ಸಾಂತ್ವಾನ ಹೇಳಿದ್ದಾರೆ.