Home Mangalorean News Kannada News ಗಣೇಶೊತ್ಸವಕ್ಕೆ 10 ಲಕ್ಷ ರೂ ಬಾಂಡ್ ಇಡಲು ಷರತ್ತು ವಿಧಿಸಿಲ್ಲ; ವದಂತಿಗಳನ್ನು ನಂಬಬೇಡಿ: ಡಿಜಿಪಿ

ಗಣೇಶೊತ್ಸವಕ್ಕೆ 10 ಲಕ್ಷ ರೂ ಬಾಂಡ್ ಇಡಲು ಷರತ್ತು ವಿಧಿಸಿಲ್ಲ; ವದಂತಿಗಳನ್ನು ನಂಬಬೇಡಿ: ಡಿಜಿಪಿ

Spread the love

ಗಣೇಶೊತ್ಸವಕ್ಕೆ 10 ಲಕ್ಷ ರೂ ಬಾಂಡ್ ಇಡಲು ಷರತ್ತು ವಿಧಿಸಿಲ್ಲ; ವದಂತಿಗಳನ್ನು ನಂಬಬೇಡಿ: ಡಿಜಿಪಿ

ಬೆಂಗಳೂರು: ಗಣೇಶೋತ್ಸವಗಳಿಗೆ ರಾಜ್ಯ ಸರ್ಕಾರವಾಗಲೀ ಅಥವಾ ಪೊಲೀಸ್ ಇಲಾಖೆಯಾಗಲೀ ಯಾವುದೇ ನಿಬಂಧನೆ ವಿಧಿಸಿಲ್ಲ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ರೂಪಕ್ ಕುಮಾರ್ ದತ್ತಾ ಸ್ಪಷ್ಟಪಡಿಸಿದರು.

ನಗರದ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ದಿನಗಳಿಂದ ಸಾರ್ವಜನಿಕ ವಲಯದಲ್ಲಿ ಗಣೇಶ ಹಬ್ಬದ ಆಚರಣೆಗೆ ಅನುಮತಿ ನೀಡಲು 10 ಲಕ್ಷ ರು. ಬಾಂಡ್ ಪಡೆಯಲು ಪೊಲೀಸರು ಷರತ್ತು ವಿಧಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಇವೆಲ್ಲವೂ ಸುಳ್ಳು ವದಂತಿಗಳು ಎಂದರು.

ಭಾರತವು ಜಾತ್ಯತೀತ ರಾಷ್ಟ್ರವಾಗಿದೆ. ಇಲ್ಲಿ ಎಲ್ಲ ಧರ್ಮೀಯರ ಧಾರ್ಮಿಕ ಆಚರಣೆಗೆ ಸಮಾನ ಅವಕಾಶವಿದೆ. ಅವುಗಳಿಗೆ ಗೌರವವಿದೆ. ಹೀಗಾಗಿ ಗಣೇಶೋತ್ಸವ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಿಗೆ ಪೊಲೀಸ್ ಇಲಾಖೆಯು ನಿರ್ಬಂಧ ಹೇರಿಲ್ಲ. ಈ ರೀತಿಯ ಊಹಾಪೋಹಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಡಿಜಿಪಿ ಮನವಿ ಮಾಡಿದರು.

ಸಾರ್ವಜನಿಕವಾಗಿ ಗಣೇಶೋತ್ಸವಗಳಿಗೆ ಅನುಮತಿ ನೀಡುವ ಅಧಿಕಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಆಯುಕ್ತರ ವ್ಯಾಪ್ತಿಗೆ ಬಿಡಲಾಗಿದೆ. ಆದರೆ ಕಾರ್ಯಕ್ರಮಗಳ ರೂಪರೇಷೆಗಳ ಮಾಹಿತಿ ಸೇರಿದಂತೆ ಮುಂಜಾಗ್ರತೆ ಕ್ರಮ ವಹಿಸುವಂತೆ ಸಂಘಟಕರಿಗೆ ಸೂಚಿಸಲು ಅಧಿಕಾರಿಗಳಿಗೆ ಸುತ್ತೋಲೆ ಕಳುಹಿಸಲಾಗಿದೆ. ಇದರ ಹೊರತಾಗಿ ಬೇರೆ ಯಾವುದೇ ನಿರ್ಬಂಧ ಹಾಕಿಲ್ಲ ಎಂದು ಹೇಳಿದರು.

ಗಣೇಶ ಹಬ್ಬ, ಸ್ವಾತಂತ್ರ್ಯೋತ್ಸವ ಹಾಗೂ ಬಕ್ರೀದ್ ಹಬ್ಬಗಳ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತೆ ವಹಿಸಲಾಗಿದೆ. ಈವರೆಗೆ ಕೇದ್ರ ಸರ್ಕಾರದಿಂದ ಸ್ವಾತಂತ್ರ್ಯ ದಿನಾಚರಣೆಗೆ ನಿರ್ದಿಷ್ಟ ಎಚ್ಚರಿಕೆ ಬಂದಿಲ್ಲ ಎಂದು ಡಿಜಿಪಿ ಹೇಳಿದರು.


Spread the love

Exit mobile version