ಗಣೇಶೋತ್ಸವಕ್ಕೆ ಕ್ರೈಸ್ತ ಬಾಂಧವರು ಆಗಮಿಸಿ ಗಣಪತಿಗೆ ಉಡುಗೊರೆ  

Spread the love

ಗಣೇಶೋತ್ಸವಕ್ಕೆ ಕ್ರೈಸ್ತ ಬಾಂಧವರು ಆಗಮಿಸಿ ಗಣಪತಿಗೆ ಉಡುಗೊರೆ  

ಮಂಗಳೂರು: ಮಂಗಳೂರು ಅಂದ್ರೆ ಕೋಮು ಸೂಕ್ಷ್ಮ ಪ್ರದೇಶ ಅನ್ನುವವರೇ ಜಾಸ್ತಿ.ಅಲ್ಲಿನ ಹಿಂದು,ಮುಸ್ಲಿಂ,ಕ್ರೈಸ್ತರ ನಡುವೆ ಒಳ್ಳೆಯ ಸಂಬಂಧಗಳಿಲ್ಲ ಅನ್ನುವವರೂ ಇದ್ದಾರೆ.ಆದ್ರೆ ಅಲ್ಲೂ ಸಾಕಷ್ಟು ಕೋಮು‌ ಸಾಮರಸ್ಯ ಇದೆ‌ ಅನ್ನೋದು ಹೆಚ್ಚಿನವರಿಗೆ ತಿಳಿದಿಲ್ಲ.ಸಾಮರಸ್ಯದ ಪ್ರತೀಕ ಎಂಬಂತೆ ಆರ್ ಎಸ್ಎಸ್ ನ ಶಕ್ತಿಕೇಂದ್ರದಲ್ಲಿ ನಡೆಯುವ ಗಣೇಶೋತ್ಸವಕ್ಕೆ ಕ್ರೈಸ್ತ ಬಾಂಧವರು ಆಗಮಿಸಿ ಗಣಪತಿಗೆ ಉಡುಗೊರೆ ನೀಡಿ,ದರ್ಶನ ಪಡೆಯುತ್ತಾರೆ. ಹಾಗಾದ್ರೆ ಏನಿದು ಭಾವೈಕ್ಯತೆಯ ಗಣೇಶೋತ್ಸವ ಅನ್ನೋದನ್ನು ನೀವು ನೋಡಿ.

ಸಾಮಾನ್ಯವಾಗಿ ಮಂಗಳೂರು ಅಂದ್ರೆ ನೆನಪಿಗೆ ಬರೋದು ಕೋಮು ವೈಷಮ್ಯ, ನೈತಿಕ ಪೊಲೀಸ್‌ಗಿರಿಗಳು. ಮಾತ್ರವಲ್ಲ ಇಲ್ಲಿ ನಡೆಯೋ ಧಾರ್ಮಿಕ ಆಚರಣೆಗಳೂ ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗಿರುವುದು ಸಹಜ. ಆದರೆ ಗಣೇಶೋತ್ಸವ ಮಾತ್ರ ಕಡಲ ನಗರಿಯಲ್ಲಿ ಕೋಮು ಸೌಹಾರ್ದತೆಗೆ ಸಾಕ್ಷಿಯಾಗುತ್ತಿದೆ. ಹೌದು ಹಿಂದೂಗಳ ಆರಾಧನಾ ಕೇಂದ್ರದಿಂದ ದೂರವಿರುವ ಕ್ರೈಸ್ತರು ಪ್ರತೀ ವರ್ಷದಂತೆ ಈ ಬಾರಿಯೂ ಗಣೇಶನ ಬಳಿ ಬಂದು ದರ್ಶನ ಪಡೆದ್ರು.ಇಂತಹ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಮಂಗಳೂರಿನ ಸಂಘ ನಿಕೇತನದಲ್ಲಿ ಆರ್‌ಎಸ್‌ಎಸ್ ಆಯೋಜಿಸಿರುವ ಗಣೇಶೋತ್ಸವ.ಹಿಂದೂ ವಿಚಾರೆ ಧಾರೆಯನ್ನು ಹೊಂದಿರೋ ಆರ್‌ಎಸ್‌ಎಸ್ ನ ಈ ಗಣೇಶೋತ್ಸವಕ್ಕೆ ಕಳೆದ ಹತ್ತು ವರ್ಷಗಳಿಂದ ಪ್ರತೀ ವರ್ಷವೂ ಕ್ರೈಸ್ತ ಸಮುದಾಯದ ಗುರುಗಳು ಸೇರಿದಂತೆ ಹಲವರು ಭೇಟಿ ನೀಡಿ ಗಣಪತಿಯ ದರ್ಶನ ಪಡೆಯುತ್ತಾರೆ.ಈ ಬಾರಿಯೂ ಸಂಘನಿಕೇತನಕ್ಕೆ ಬಂದ ಕ್ರೈಸ್ತ ಬಾಂಧವರು ಗಣಪತಿಗೆ ಫಲಪುಷ್ಪಗಳನ್ನು ಅರ್ಪಿಸಿ,ದೇವರ ದರ್ಶನ ಪಡೆದ್ರು.

ಗಣೇಶೋತ್ಸವಕ್ಕೆ ಆಗಮಿಸಿದ ಕ್ರೈಸ್ತ ಸಮುದಾಯದ ಅತಿಥಿಗಳಿಗೆ ಪ್ರಸಾದ ಹಾಗೂ ಉಪಹಾರಗಳನ್ನು ನೀಡೋ ಮೂಲಕ ಆರ್‌ಎಸ್‌ಎಸ್‌ನ ಮುಖಂಡರು ಆತಿಥ್ಯವನ್ನು ನೀಡಿದರು.ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ನೇತೃತ್ವದಲ್ಲಿ ಈ ಗಣೇಶನ ಭೇಟಿ ನಡೆದಿದ್ದು ಸಾಕಷ್ಟು ಜನ ಕ್ರೈಸ್ತ ಮುಖಂಡರು ಭಾಗಿಯಾಗಿದ್ದರು.ಧಾರ್ಮಿಕ ವಿಚಾರವಾಗಿ ಶಾಂತಿ ಸೌಹಾರ್ದತೆ ಕದಡೋ ಈ ಸಮಯದಲ್ಲಿ ಇಂತಹ ಆಚರಣೆ ಹೆಚ್ಚು ಸೂಕ್ತ ಅನ್ನೋದು ಸಂಘದ ಪ್ರಮುಖರ ಮಾತು.

ಆರ್ ಎಸ್ ಎಸ್ ನ ದಕ್ಷಿಣ ಪ್ರಾಂತ ಶಕ್ತಿ ಕೇಂದ್ರ ಸಂಘನಿಕೇತನದಲ್ಲಿ ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ನಡೆಯುವ 77 ನೇ ವರ್ಷದ ಈ ಗಣೇಶೋತ್ಸವ ಸಾಮರಸ್ಯಕ್ಕೂ ಸಾಕ್ಷಿಯಾಗಿದೆ. ಐದು ದಿನಗಳ ಕಾಲ ಪೂಜಿಸಲ್ಪಡುವ ಈ ಗಣೇಶನ ಮೂರ್ತಿಯನ್ನು ಸೆ.11ರಂದು ಬೃಹತ್ ಮೆರವಣಿಗೆಯೊಂದಿಗೆ ಸಾಗಿ ವಿಸರ್ಜನೆ ನಡೆಯಲಿದೆ.ಒಟ್ಟಿನಲ್ಲಿ ಹಿಂದೂ ಹಾಗೂ ಕ್ರೈಸ್ತರ ನಡುವಿನ ಬಾಂಧವ್ಯಕ್ಕೆ ಈ ಗಣೇಶೋತ್ಸವ ಸಾಕ್ಷಿಯಾಗಿದೆ.


Spread the love
Subscribe
Notify of

0 Comments
Inline Feedbacks
View all comments