Home Mangalorean News Kannada News ಗಣೇಶೋತ್ಸವ ಸಂಬಂಧ ಉಡುಪಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ಮುಂಜಾಗ್ರತಾ ಕ್ರಮ

ಗಣೇಶೋತ್ಸವ ಸಂಬಂಧ ಉಡುಪಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ಮುಂಜಾಗ್ರತಾ ಕ್ರಮ

Spread the love

ಗಣೇಶೋತ್ಸವ ಸಂಬಂಧ ಉಡುಪಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ಮುಂಜಾಗ್ರತಾ ಕ್ರಮ

ಉಡುಪಿ : ಸಪ್ಟೆಂಬರ್ 2ರಂದು ಆಚರಿಸುವ ಗಣೇಶ ಚತುರ್ಥಿ ಹಾಗೂ ಅದೇ ದಿನ ಮತ್ತು ನಂತರದ ದಿನಗಳಲ್ಲಿ ಗಣೇಶ ವಿಗ್ರಹಗಳ ವಿಸರ್ಜನೆ ಸಂಬಂಧ ಜಿಲ್ಲೆಯಲ್ಲಿ ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ವ್ಯಾಪಕ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿರುತ್ತದೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು 453 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ. ಅವುಗಳಲ್ಲಿ ಸಪ್ಟೆಂಬರ್ 2ರಂದು 165, ಸಪ್ಟೆಂಬರ್ 3ರಂದು 103, ಸಪ್ಟೆಂಬರ್ 4ರಂದು 127, ಸಪ್ಟೆಂಬರ್ 5ರಂದು 16, ಸಪ್ಟೆಂಬರ್ 6ರಂದು 33, ಸಪ್ಟೆಂಬರ್ 7ರಂದು 02, ಸಪ್ಟೆಂಬರ್ 8ರಂದು 03, ಸಪ್ಟೆಂಬರ್ 10, 12, 14, ದಿನಾಂಕ 08/10/2019ರಂದು ತಲಾ 01 ಮೂರ್ತಿ ವಿಸರ್ಜನೆಗೊಳ್ಳಲಿದೆ.

ಗಣೇಶೋತ್ಸವ, ಪೆಂಡಾಲ್, ಹಾಗೂ ವಿಗ್ರಹ ವಿಸರ್ಜನಾ ಬಂದೋಬಸ್ತ್ ನಿಮಿತ್ತ ಒಟ್ಟು 406 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ಬಳಸಿಕೊಳ್ಳಲಾಗಿದೆ. 03 ಪೊಲೀಸ್ ಉಪವಿಭಾಗಾಧಿಕಾರಿಯವರು, 09 ಪೊಲೀಸ್ ನಿರೀಕ್ಷಕರು, 23 ಪೊಲೀಸ್ ಉಪನಿರೀಕ್ಷಕರು, 51 ಸಹಾಯಕ ಪೊಲೀಸ್ ಉಪನಿರೀಕ್ಷಕರು, 320 ಪೊಲೀಸ್ ಸಿಬ್ಬಂದಿ ಜೊತೆಗೆ ಪೊಲೀಸ್ ಉಪವಿಭಾಗಕ್ಕೆ ತಲಾ 100ರಂತೆ ಒಟ್ಟು 300 ಗೃಹರಕ್ಷಕ ದಳದ ಸಿಬ್ಬಂದಿಯವರನ್ನು ಬಳಸಿಕೊಳ್ಳಲಾಗುವುದು. 07 ಡಿ.ಎ.ಆರ್. ತುಕಡಿ ಹಾಗೂ 03 ಕೆ.ಎಸ್.ಆರ್.ಪಿ. ತುಕಡಿಗಳನ್ನು ಬಳಸಿಕೊಳ್ಳಲಾಗುವುದು. ಹೊಯ್ಸಳ ಹಾಗೂ ಮೋಟಾರು ಸೈಕಲ್ ಪೆಟ್ರೋಲ್ ವ್ಯವಸ್ಥೆಯನ್ನು ಎಲ್ಲಾ ಠಾಣಾ ಮಟ್ಟದಲ್ಲಿ ಜಾರಿಗೊಳಿಸಲಾಗಿದೆ. ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಸಿಬ್ಬಂದಿಯವರನ್ನು ನಿಯೋಜಿಸಲಾಗಿದೆ. ಅಂತರ್‌ಜಿಲ್ಲಾ ಗಡಿಪ್ರದೇಶದಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಆಯ್ದ ಸ್ಥಳಗಳ ವಿಸರ್ಜನಾ ಮೆರವಣಿಗೆ ಸಮಯದಲ್ಲಿ ವೀಡಿಯೋಗೃಫಿ ನಡೆಸಲಾಗುವುದು.

ಆಯೋಜಕರ ಸಭೆಯನ್ನು ಠಾಣಾ ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ನಡೆಸಿ, ಆಯೋಜಕರು ಸಂಬಂಧಪಟ್ಟ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ನಗರಸಭೆ, ಅಗ್ನಿಶಾಮಕ, ಮೆಸ್ಕಾಂ, ಪೊಲೀಸ್ ಇಲಾಖೆಗಳಿಂದ ಪರವಾನಿಗೆ / ಅನುಮತಿಯನ್ನು ಕಡ್ಡಾಯವಾಗಿ ಪಡೆಯಲು ಸೂಚಿಸಲಾಗಿದೆ. ಪ್ರತಿಷ್ಟಾಪನೆ ಮಾಡಿರುವ ಗಣೇಶಮೂರ್ತಿಯ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಸದ್ರಿ ಸ್ಥಳದಲ್ಲಿ ಸಿಸಿ ಕ್ಯಾಮರಾವನ್ನು ಅಳವಡಿಸಿ ಸಿಸಿ ಕ್ಯಾಮರಾದಲ್ಲಿ ಸಂಗ್ರಹಣೆಯಾದ ದೃಶ್ಯಾವಳಿಯನ್ನು ಸಂಗ್ರಹಿಸಿ ಇಡುವಂತೆ ಸಂಘಟಕರಿಗೆ ಸೂಚಿಸಲಾಗಿದೆ. ಪೆಂಡಾಲ್ ಮತ್ತು ವಿಸರ್ಜನಾ ಸ್ಥಳಗಳಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆಯನ್ನು ಮಾಡಲು ಸೂಚಿಸಲಾಗಿದೆ. ಧ್ವನಿವರ್ಧಕಗಳನ್ನು ಪೂರ್ವಾಹ್ನ 06:00 ಘಂಟೆಯಿಂದ ರಾತ್ರಿ 10:00 ಘಂಟೆಯವರೆಗೆ ಮಾತ್ರ ಬಳಸಲು ಸೂಚಿಸಲಾಗಿದೆ. ಮೆಸ್ಕಾಂ ಮತ್ತು ಅಗ್ನಿಶಾಮಕ ಅಧಿಕಾರಿ / ಸಿಬ್ಬಂದಿಗಳಿಂದ ಗಣೇಶ ಮೂರ್ತಿ ಸ್ಥಾಪಿಸುವ ಜಾಗದ ಸುರಕ್ಷತೆಯ ಬಗ್ಗೆ ಪರಿಶೀಲಿಸಲು ಕೋರಿಕೊಳ್ಳಲಾಗಿದೆ. ಗಣೇಶಮೂರ್ತಿಯ ಸುರಕ್ಷತೆ ಹಾಗೂ ಜನರ ನೂಕುನುಗ್ಗಲು ಉಂಟಾಗದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಸೇವಕರನ್ನು ನೇಮಿಸಿಕೊಳ್ಳುವಂತೆ ಮತ್ತು ಕಡ್ಡಾಯವಾಗಿ 05 ಸ್ವಯಂಸೇವಕರನ್ನು ಗಣೇಶ ಪೆಂಡಾಲ್ ಬಳಿ ದಿನದ 24 ಗಂಟೆಯೂ ಸರದಿಯಂತೆ ಭದ್ರತೆಗಾಗಿ ಮತ್ತು ವಿಸರ್ಜನಾ ಮೆರವಣಿಗೆ ಸಮಯ ಹೆಚ್ದಿನ ಸ್ವಯಂ ಸೇವಕರನ್ನು ನಿಯೋಜಿಸಲು ಸಂಘಟಕರಿಗೆ ಸೂಚಿಸಲಾಗಿದೆ. ಮೆರವಣಿಗೆ ಸಾಗುವ ಮಾರ್ಗದಲ್ಲಿ ವಿದ್ಯುತ್ ತಂತಿಗಳಿದ್ದಲ್ಲಿ, ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಂಘಟಕರಿಗೆ ಸೂಚಿಸಲಾಗಿದೆ. ಮೆರವಣಿಗೆ ರಸ್ತೆಯ ಎಡಬದಿಯಲ್ಲಿಯೇ ಸಾಗಿ, ವಾಹನಗಳನ್ನು ಬಲಬದಿಯಲ್ಲಿ ಬಿಡಲು ಅನುವು ಮಾಡಿಕೊಡಲು ಸ್ವಯಂಸೇವಕರಿಗೆ ತಿಳಿಸಲು ಸಂಘಟಕರಿಗೆ ಸೂಚಿಸಲಾಗಿದೆ. ಮೂರ್ತಿ ವಿಸರ್ಜನೆ ಮಾಡುವಂತಹ ಪ್ರದೇಶದಲ್ಲಿ ನುರಿತ ಈಜುಗಾರರು, ಜೀವ ರಕ್ಷಕ, ಮುಳುಗು ತಜ್ಞರು ಇರುವಂತೆ ನೋಡಿಕೊಳ್ಳಲು ಸಂಘಟಕರಿಗೆ ಸೂಚಿಸಲಾಗಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉತ್ಸವ / ಮೆರವಣಿಗೆಯು ಮುಗಿಯುವವರೆಗೂ ಅಧಿಕಾರಿ/ಸಿಬ್ಬಂದಿಗಳು ಲಭ್ಯವಿರುವಂತೆ ಸಹಕರಿಸಲು ಕೋರಿಕೊಳ್ಳಲಾಗಿದೆ. ಅಲ್ಲದೇ ಮೆಸ್ಕಾಂ ಮತ್ತು ಅಗ್ನಿಶಾಮಕ ಸೇವೆಯ ಅಧಿಕಾರಿಯವರಿಗೂ ಸಹ ಅವಘಡ ಸಂಭವಿಸಿದಲ್ಲಿ, ಕೂಡಲೇ ಸ್ಪಂದಿಸಲು ಸಜ್ಜಾಗಿರುವಂತೆ ಕೋರಿಕೊಳ್ಳಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪ್ರಚೋದನಕಾರಿ / ಅವಹೇಳನಕಾರಿ ವಿಷಯಗಳು, ಚಿತ್ರಗಳು ಹರಿದಾಡಿದಲ್ಲಿ ಸೂಕ್ತ ಕಾನೂನು ಕ್ರಮಜರುಗಿಸಲಾಗುವುದು. ಸಾಮಾಜಿಕ ಜಾಲತಾಣಗಳ ಬಗ್ಗೆ ಇಲಾಖೆಯು ನಿಗಾ ಇಟ್ಟಿರುತ್ತದೆ.

ಎಲ್ಲಾ ಧರ್ಮದ ಮುಖಂಡರನ್ನು ಕರೆಯಿಸಿ ಶಾಂತಿ ಸಭೆಯನ್ನು ಪೊಲೀಸ್ ಠಾಣಾ ಮಟ್ಟ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರ ಮಟ್ಟದಲ್ಲಿ ನಡೆಸಿದ್ದು, ಗಣೇಶೋತ್ಸವ ಸಮಯದಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡಲು ಧಾರ್ಮಿಕ ಮುಖಂಡರೊಂದಿಗೆ ಚರ್ಚಿಸಲಾಗಿದ್ದು, ಎಲ್ಲರೂ ಇದಕ್ಕೆ ಸಹಮತ ವ್ಯಕ್ತಪಡಿಸಿರುತ್ತಾರೆ ಎಂದು ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.


Spread the love

Exit mobile version