ಗತವೈಭವದ ಇತಿಹಾಸವನ್ನು ಬಿಂಬಿಸುವ ‘ಬನ್ನಿ ಬಾರ್ಕೂರಿಗೆ’ ದ್ರಶ್ಯಕಾವ್ಯ ಲೋಕಾರ್ಪಣೆ

Spread the love

ಗತವೈಭವದ ಇತಿಹಾಸವನ್ನು ಬಿಂಬಿಸುವ ‘ಬನ್ನಿ ಬಾರ್ಕೂರಿಗೆ’ ದ್ರಶ್ಯಕಾವ್ಯ ಲೋಕಾರ್ಪಣೆ

ಉಡುಪಿ: ಬಾರ್ಕೂರಿನ ಗತವೈಭವದ ಇತಿಹಾಸವನ್ನು ಬಿಂಬಿಸುವ ರಕ್ಷಿತ್ ಬಾರ್ಕೂರು ಸಾರಥ್ಯದ ಬನ್ನಿ ಬಾರ್ಕೂರಿಗೆ ದ್ರಶ್ಯಕಾವ್ಯ ಬಿಡುಗಡೆಯ ಅದ್ದೂರಿ ಸಮಾರಂಭ ಶನಿವಾರ ಸಂಜೆ ಬಾರ್ಕೂರಿನ ಸಂಕಮ್ಮ ತಾಯಿ ರೆಸಾರ್ಟ್ ಇಲ್ಲಿ ನೆರವೇರಿತು.

ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ದೀಪ ಬೆಳಗಿಸಿ ಉದ್ಘಾಟಿಸಿದರೆ, ಬನ್ನಿ ಬಾರ್ಕೂರಿಗೆ ದ್ರಶ್ಯ ಕಾವ್ಯವನ್ನು ಬಾಳೆಕುದ್ರು ಮಠದ ಶ್ರೀ ನರಸಿಂಹಾಶ್ರಮ ಸ್ವಾಮೀಜಿಯವರು ಕಂಪ್ಯೂಟರ್ ಗುಂಡಿ ಒತ್ತುವುದರ ಮೂಲಕ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬಾರ್ಕೂರು ಸಂತ ಪೀಟರ್ ಚರ್ಚ್ ಇದರ ಧರ್ಮಗುರುಗಳಾದ ವಂ ವಲೆರೀಯನ್ ಮೆಂಡೊನ್ಸಾ ಅವರು ಬಾರ್ಕೂರಿನ ಇತಿಹಾಸವನ್ನು ಕಂಡರೆ ಇಂತಹ ಸಂಪದ್ಭರಿತ ಊರಿನಲ್ಲಿ ನಾವು ಬದುಕುತ್ತಿದ್ದೇವೆ ಎನ್ನಲು ಹೆಮ್ಮೆ ಎನಿಸುತ್ತದೆ. 365 ದೇವಸ್ಥಾನಗಳು, ಒಂದು ಇಗರ್ಜಿ ಹಾಗೂ 2 ಮಸೀದಿಗಳನ್ನು ಹೊಂದಿರುವ ಬಾರ್ಕೂರಿನಲ್ಲಿ ಎಲ್ಲಾ ಸಮುದಾಯದವರು ಸಹೋದರ ಸಹೋದರಿಯರಂತೆ ಸಾಮರಸ್ಯದ ಬಾಳುವೆಯನ್ನು ನಡೆಸುತ್ತಿರುವುದು ಇಲ್ಲಿ ಕಾಣ ಸಿಗುವ ವಿಶೇಷ ಲಕ್ಷಣವಾಗಿದೆ. ಬಾರ್ಕೂರು ಹಲವಾರು ಸಮುದಾಯಗಳಿಗೆ ಮೂಲಸಂಸ್ಥಾನವಾಗಿದೆ ಎಂದರೆ ತಪ್ಪಾಗಲಾರದು. ದೇವರ ಆಲಯಗಳು ದೇವರನ್ನು ನೆನೆಯಲು ಇರುವ ಒಂದು ವ್ಯವಸ್ಥೆಯಾಗಿದ್ದು, ನಾವೇಲ್ಲಾ ದೇವರ ಮಗು ಎಂಬ ಭಾವನೆ ಬಂದಾಗ ಮಾತ್ರ ಪರಸ್ಪರರಲ್ಲಿ ನಾವೆಲ್ಲಾ ಅಣ್ಣ ತಮ್ಮಂದಿರು, ಅಕ್ಕ ತಂಗಿಯರನ್ನು ಕಾಣಲು ಶಕ್ತವಾಗುತ್ತದೆ. ನಿಜವಾದ ದೇವರು ಕೇವಲ ದೇವಾಲಯಗಳಲ್ಲಿ ಕಾಣಸಿಗುವುದಿಲ್ಲ ಬದಲಾಗಿ ಪ್ರತಿಯೊಬ್ಬರ ಹೃದಯದಲ್ಲಿ ಕಾಣಸಿಗಬೇಕಾಗಿದೆ. ಬಾರ್ಕೂರಿನ ಗತವೈಭವದ ಇತಿಹಾಸವನ್ನು ಪರಿಚಯಿಸಲು ಹೊರಟಿರುವ ಯುವಕರ ಕನಸು ನಿಜಕ್ಕೂ ಅಭಿನಂದನಾರ್ಹವಾಗಿದೆ ಇದರಲ್ಲಿ ಯುವಕರು ಬಾರ್ಕೂರು ಮುಂದೆಯೂ ಸರ್ವಧರ್ಮ ಸಮನ್ವತೆಯ ಊರಾಗಿಯೇ ಮುಂದುವರೆಯಬೇಕೆಂಬ ವಿಶಾಲ ಕನಸನ್ನು ಕಂಡಿದ್ದಾರೆ. ಇಂತಹ ಒಳ್ಳೆಯ ಮನಸ್ಸಿನ ಯುವಕರನ್ನು ಹೊಂದಿದ ಬಾರ್ಕೂರು ನಿಜಕ್ಕೂ ಧನ್ಯ ಎಂದರು.

ಮುಖ್ಯ ಅತಿಥಿಯ ನೆಲೆಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಬಾರ್ಕೂರಿಗೆ ವಿಶೇಷ ಇತಿಹಾಸವಿದ್ದು ಅದನ್ನು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ದ್ರಶ್ಯಕಾವ್ಯ ರಚನೆ ಮೂಲಕ ಯುವಕರು ಒಂದು ಹೊಸ ಕೆಲಸಕ್ಕೆ ಮುನ್ನುಡಿ ಹಾಕಿದ್ದಾರೆ. ರಾಜ್ಯ ರಾಷ್ಟ್ರ ಮಟ್ಟದಲ್ಲಿ ಹಲವಾರು ಊರುಗಳ ಉತ್ಸವಗಳು ನಡೆಯುತ್ತವೆ ಅದರಂತೆ ಬಾರ್ಕೂರು ಕೂಡ ಒಂದು ಐತಿಹಾಸಿಕ ನಗರಿ ಇದರ ಉತ್ಸವ ಕೂಡ ನಡೆಸುವ ಅಗತ್ಯತೆ ಇದ್ದು ಇದರ ಮೂಲಕ ಪ್ರವಾಸಿಗರನ್ನು ಹೆಚ್ಚು ಬಾರ್ಕೂರಿಗೆ ಸೆಳೆಯುವಂತೆ ಮಾಡಬೇಕಾಗಿದೆ. ಇದಕ್ಕೆ ಸರ್ಕಾರ ಕೂಡ ಆಸಕ್ತಿವಹಿಸಬೇಕಾದರೆ ಸ್ಥಳೀಯ ಮಟ್ಟದಲ್ಲಿನ ನಾಯಕರು ಕೈಜೋಡಿಸಿದಾಗ ಬಾರ್ಕೂರು ಉತ್ಸವದ ಕನಸು ನನಸಾಗಲು ಸಾಧ್ಯ. ಇದರ ಕುರಿತು ಸದನದಲ್ಲಿ ಕೂಡ ದನಿ ಎತ್ತುವುದಾಗಿ ಅವರು ಹೇಳಿದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ 2004 ನಾನು ಮತ್ತು ಕೋಟ ಶ್ರೀನಿವಾಸ ಪೂಜಾರಿಯವರು ಪರಸ್ಪರ ಎದುರಾಳಿಗಳಾಗಿ ಬ್ರಹ್ಮಾವರ ಕ್ಷೇತ್ರದಲ್ಲಿ ಚುನಾವಣೆಯನ್ನು ಎದುರಿಸಿದ್ದೇವು ಆಗ ಬಾರ್ಕೂರು ಬ್ರಹ್ಮಾವರ ಕ್ಷೇತ್ರದ ಒಂದು ಭಾಗವಾಗಿತ್ತು. ಬಾರ್ಕೂರು ಎಂದಿಗೂ ನನಗೆ ಎರಡು ವಿಷಯಗಳಿಗಾಗಿ ಅತೀ ಹೆಚ್ಚು ಪ್ರೀತಿಯ ಊರಾಗಿದೆ ಮೊದಲನೆಯದಾಗಿ ಬಾರ್ಕೂರಿನ ಬೆಣ್ಣೆಕುದ್ರುವಿನಲ್ಲಿ ಮೋಗವೀರರ ಮೂಲ ದೇವಸ್ಥಾನ ಹೊಂದಿದ್ದರೆ, ಇನ್ನೊಂದು ಅತೀ ಹೆಚ್ಚು ದೇವಸ್ಥಾನಗಳನ್ನು ಹೊಂದಿದ ಇಂತಹ ಊರು ದೇಶದಲ್ಲಿ ಇನ್ನೊಂದಿಲ್ಲ. ಇಂತಹ ಭವ್ಯ ಪರಂಪರೆಯನ್ನು ಹೊಂದಿದ ಊರು ನಿಜವಾಗಿ ವಿದೇಶದಲ್ಲಿ ಇದ್ದಿದ್ದರೆ ಪ್ರವಾಸೋದ್ಯಮದ ಆದಾಯದಿಂದ ಉನ್ನತಿಯಾಗುತ್ತಿತ್ತು ಆದರೆ ಭಾರತದಲ್ಲಿ ಪ್ರವಾಸೋದ್ಯಮ ನೀರಿಕ್ಷತ ಮಟ್ಟದಲ್ಲಿ ಬೆಳೆದಿಲ್ಲ, ಹಲವು ದೇಶಗಳು ಇಂದು ಪ್ರವಾಸೋದ್ಯಮದ ಆದಾಯದಿಂದಲೇ ಬದುಕುತ್ತಿದ್ದರೆ, ಭಾರತದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರವಾಸೋದ್ಯಮವನ್ನು ಬೆಳೆಸುವಲ್ಲಿ, ಪ್ರೋತ್ಸಾಹಿಸುವಲ್ಲಿ ತಮ್ಮ ಇಚ್ಚಾಶಕ್ತಿಯನ್ನು ತೋರಿಸುತ್ತಿಲ್ಲ. ನಮ್ಮ ದೇಶದ ಯುವಕರಲ್ಲಿ ವಿಶೇಷವಾಗ ಶಕ್ತಿ ಜ್ಞಾನ ಇದೆ ಎನ್ನುವುದಕ್ಕೆ ಈ ದೃಶ್ಯ ಕಾವ್ಯ ಸಾಕ್ಷಿಯಾಗಿದೆ. ಬಾರ್ಕೂರನ್ನು ಪ್ರವಾಸೋದ್ಯಮ ದೃಷ್ಟಿಯಲ್ಲಿ ಬೆಳೆಸಲು ಈ ದೃಶ್ಯಕಾವ್ಯ ಮುನ್ನುಡಿಯಾಗಿದೆ. ಬಾರ್ಕೂರಿನಲ್ಲಿ ಪ್ರವಾಸೊದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ದೃಶ್ಯಕಾವ್ಯ ರಚಿಸಲು ಕಾರಣಾದ ಯುವಕರನ್ನು ಸ್ವತಃ ತಾನು ರಾಜ್ಯದ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆಯವರಲ್ಲಿ ಕರೆದುಕೊಂಡು ಹೋಗಿ ಮುಂದೆ ಯಾವ ರೀತಿಯಲ್ಲಿ ಯೋಜನೆಯನ್ನು ಹಾಕಿಕೊಳ್ಳಲು ಸಾಧ್ಯ ಎಂಬ ಕುರಿತು ಚರ್ಚಿಸಲು ಅವಕಾಶ ಕಲ್ಪಿಸುವುದಾಗಿ ಹೇಳಿದರು.

ದೃಶ್ಯಕಾವ್ಯ ಬಿಡುಗಡೆ ಮಾಡಿದ ಬಾಳೆಕುದ್ರು ಮಠದ ಶ್ರೀ ನರಸಿಂಹಾಶ್ರಮ ಸ್ವಾಮೀಜಿ ಮಾತನಾಡಿ ಸಂವಹನಕ್ಕೆ ಭಾಷೆ ಇದ್ದರೆ ಭಾವನೆಗಳನ್ನು ವ್ಯಕ್ತಪಡಿಸಲು ಇಂತಹ ದೃಶ್ಯಕಾವ್ಯ ಸರಳವಿಧಾನವಾಗಿದೆ. ಪ್ರತಿಯೊಂದು ಗ್ರಾಮಕ್ಕೂ ತನ್ನದೇ ಆದ ವೈಶಿಷ್ಯವಿದೆ ಅದರಂತೆ ಭಾರತವೂ ಕೂಡ ವಿಶ್ವಕ್ಕೆ ತನ್ನದೆ ಆದ ಇತಿಹಾಸವನ್ನು ಪರಿಚಯಿಸಿದೆ. ಆದರೆ ಇಂದಿನ ಮಕ್ಕಳಿಗೆ ನಾವು ಕೇವಲ ಇತಿಹಾಸದಲ್ಲಿ ಯುದ್ದವನ್ನು ಮಾತ್ರ ಪರಿಚಯಿಸುತ್ತಿದ್ದೇವೆ ಅದರ ಬದಲು ಊರಿನ ಪರಿಚಯ ಮಾಡುವುದರಲ್ಲಿ ಹಿಂದೆ ಬಿದ್ದಿದ್ದೇವೆ. ಪ್ರಾಣಿ, ಪಕ್ಷಿಗಳು, ಮರಗಿಡಗಳು ಪ್ರತಿಯೊಂದು ತನಗಾಗಿ ಬದುಕದೆ ಪರರಿಗಾಗಿ ಬದುಕುತ್ತವೆ ಅಂತೆಯೇ ಮನುಷ್ಯ ಕೂಡ ಪರರಿಗೆ ಏನಾದರೂ ಒಳಿತನ್ನು ಮಾಡಬೇಕು ಎನ್ನುವ ರೀತಿಯಲ್ಲಿ ಬದುಕಿದಾಗ ಮಾತ್ರ ಅವನ ಜೀವನ ಸಾರ್ಥಕತೆಯನ್ನು ಕಾಣುತ್ತದೆ. ಈ ನಿಟ್ಟಿನಲ್ಲಿ ಬಾರ್ಕೂರಿನ ಇತಿಹಾಸ ತಿಳಿಸುವ ಪ್ರಯತ್ನ ಮಾಡಿದ ಯುವಕರ ಶ್ರಮ ಶ್ಲಾಘನಾರ್ಹವಾಗಿದೆ ಇದರಂತೆಯೇ ಇನ್ನಷ್ಟು ನಮ್ಮ ಸಂಸ್ಕೃತಿಯ ಪರಿಚಯ ಆಗುವಂತಾಗಲಿ ಎಂದು ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ತಜ್ಞ, ಬಾರ್ಕೂರು ಕಾಲೇಜಿನ ಮಾಜಿ ಪ್ರಾಂಶುಪಾಲ ರಾಜಶೇಖರ ಹೆಬ್ಬಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾಧಕ ರಾಜಶೇಖರ ಹೆಬ್ಬಾರ್ ಮತ್ತು ಯುವ ಸಿನಿಮಾಟೋಗ್ರಾಫರ್ ಸಚಿನ್ ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಉದ್ಯಮಿ ಶೌಕತ್ ಆಲಿ, ಸುಧಾಕರ ರಾವ್, ಬನ್ನಿ ಬಾರ್ಕೂರಿಗೆ ತಂಡದ ರಕ್ಷಿತ್ ಬಾರ್ಕೂರು, ದಿನೇಶ್ ಬಾಂಧವ್ಯ, ರಜತ್, ನಿತೇಶ್ ಅಭಿಜಿತ್ ಉಪಸ್ಥಿತರಿದ್ದರು. ಪತ್ರಕರ್ತ ಻ಅರುಣ್ ಶಿರೂರು ಕಾರ್ಯಕ್ರಮ ನಿರೂಪಿಸಿದರು.

ಬನ್ನಿ ಬಾರ್ಕೂರಿಗೆ ದ್ರಶ್ಯ ಕಾವ್ಯಕ್ಕೆ ಮ್ಯಾಂಗಲೋರಿಯನ್ ಡಾಟ್ ಕಾಮ್ ಮಾಧ್ಯಮ ಪ್ರಾಯೋಜಕತ್ವ ವಹಿಸಿತ್ತು.

 

ಬನ್ನಿ ಬಾರ್ಕೂರಿಗೆ ದ್ರಶ್ಯ ಕಾವ್ಯ – ಸಂಪೂರ್ಣ ವೀಡಿಯೊ ವೀಕ್ಷಿಸಿ

 


Spread the love