Home Mangalorean News Kannada News ಗಲ್ಫ್ ಉದ್ಯೋಗ ನಂಬಿ ಮೋಸ ಹೋದ ಮಹಿಳೆಯ ದುರಂತ ಕಥೆ

ಗಲ್ಫ್ ಉದ್ಯೋಗ ನಂಬಿ ಮೋಸ ಹೋದ ಮಹಿಳೆಯ ದುರಂತ ಕಥೆ

Spread the love

ಗಲ್ಫ್ ಉದ್ಯೋಗ ನಂಬಿ ಮೋಸ ಹೋದ ಮಹಿಳೆಯ ದುರಂತ ಕಥೆ

ಉಡುಪಿ : ಕಾರ್ಕಳದ ಮುದರಂಗಡಿ ನಿವಾಸಿ ಜೆಸಿಂತ ಎಂಬ ಮಹಿಳೆಗೆ ಕತಾರ್ ನಲ್ಲಿ ಕೆಲಸ ಕೊಡುವುದಾಗಿ ನಂಬಿಸಿ, ಸೌದಿ ಅರೇಬಿಯಾಗೆ ಕಳುಹಿಸಿಕೊಟ್ಟು ಆಕೆ ಕಳೆದ ಹಲವು ತಿಂಗಳಿನಿಂದ ಅಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಈಗ ಆಕೆಯನ್ನು ವಾಪಸ್ ಭಾರತಕ್ಕೆ ಕರೆ ತರುವ ಬಗ್ಗೆ ಪ್ರಯತ್ನವನ್ನು ನಡೆಸಲಾಗುತ್ತಿದೆ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ್ ಶ್ಯಾನ್ ಬೋಗ್ ತಿಳಿಸಿದರು.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಸಿಂತ ಪತಿ ಕಳೆದ ವರ್ಷ ತೀರಿಕೊಂಡಿದ್ದರು. ತನ್ನ ಮೂರು ಮಕ್ಕಳ ಪಾಲನೆ ಹಾಗೂ ವಿದ್ಯಾಭ್ಯಾಸಕ್ಕಾಗಿ ಆಕೆ ಉದ್ಯೋಗ ದಾರಿ ಹಿಡಿಯಲು ಯೋಚಿಸಿದ್ದರು. ಈ ಸಂದರ್ಭದಲ್ಲಿ ಕತಾರ್ ನಲ್ಲಿರುವ ಭಾರತೀಯ ಕುಟುಂಬವೊಂದಕ್ಕೆ ಮಕ್ಕಳ ಪಾಲನೆಗಾಗಿ ಮಹಿಳೆಯೋರ್ವಳ ಅಗತ್ಯವಿದೆ ಎಂದು ಮಂಗಳೂರಿನ ಸಬ್ ಏಜೆಂಟ್ ಜೇಮ್ಸ್ ಎನ್ನುವಾತ ತಿಂಗಳಿಗೆ 25000 ಕೊಡಿಸುವುದಾಗಿ ಜೆಸಿಂತಾಗೆ ಆಮಿಷವೊಡ್ಡಿದ್ದ. ಯಾವುದೇ ಖರ್ಚುಗಳನ್ನು ತೆಗೆದುಕೊಳ್ಳದೆ ಪ್ರಯಾಣಕ್ಕೆ ಬೇಕಾಗಿರುವ ಪಾಸ್ಪೋರ್ಟ್ ಹಾಗೂ ವೀಸಾಗಳನ್ನು ನಾವೇ ಕೊಡುವುದಾಗಿ ಭರವಸೆ ನೀಡಿದ್ದ. ಇದರಿಂದ ಇವನನ್ನು ನಂಬಿದ್ದ ಜೆಸಿಂತ ಕತಾರ್‌ಗೆ ಹೊರಡಲು ಸಿದ್ದರಾಗಿದ್ದರು.
ಕತಾರ್ ಬದಲು ಸೌದಿಗೆ ಪ್ರಯಾಣ:
ಆತನ ಮಾತಿನಂತೆ ಮುಂಬಯಿಗೆ ತೆರಳಿದ ಜೆಸಿಂತ ಜೂನ್ 19 ರಂದು ಮಧ್ಯಪ್ರಾಚ್ಯದ ವಿಮಾನವೇರಿ ಮರುದಿನ ವಿಮಾನ ಇಳಿದಾಗ ತಾನು ಬಂದಿದ್ದು, ಕತಾರ್ ದೇಶಕ್ಕಲ್ಲ, ಸೌದಿ ಅರೇಬಿಯಾಕ್ಕೆ ಎಂದು ತಿಳಿದ ಜೆಸಿಂತ ಗಾಬರಿಗೊಳಗಾದರು. ಸೌದಿ ಅರೇಬಿಯಾದ ಯಂಬುವಿನಲ್ಲಿ ಮೂವರು ಮಡದಿಯರು ಹತ್ತಾರು ಮಕ್ಕಳಿದ್ದ ಉದ್ಯೋಗದಾತನ ಬೃಹತ್ ಬಂಗ್ಲೆಯಲ್ಲಿ ದಿನಕ್ಕೆ 16 ಗಂಟೆಗೂ ಅಧಿಕ ಕಾಲ ದುಡಿಸಿಕೊಳ್ಳುತ್ತಿದ್ದರು.
ಇದರಿಂದ ಜೆಸಿಂತ ಅನಾರೋಗ್ಯಕ್ಕೆ ತುತ್ತಾಗಿದ್ದು, ತನ್ನನ್ನು ಹಿಂದಕ್ಕೆ ಕಳುಹಿಸಿ ಎಂಬ ಆಕೆಯ ಮನವಿಯನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಆಕೆಗೆ ದೈಹಿಕ ಮತ್ತು ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಭಾರತೀಯ ಕಾರು ಚಾಲಕನೊಬ್ಬನ ಸಹಾಯದಿಂದ ಜೆಸಿಂತ ತಮ್ಮ ಮಕ್ಕಳನ್ನು ಸಂಪರ್ಕಿಸಿ ತಾನು ಮೋಸ ಹೋಗಿರುವ ಕುರಿತು ಮಾಹಿತಿ ನೀಡಿದ್ದಾರೆ. ಈ ವೇಳೆ ಜೆಸಿಂತರ ಮನೆಯಲ್ಲಿ ದಾಖಲೆಗಳನ್ನು ಹುಡುಕಿದಾಗ ಸಬ್ ಏಜೆಂಟ್ ಜೇಮ್ಸ್‌ನ ಮೊಬೈಲ್ ನಂಬರ್ ಸಿಕ್ಕಿತು. ಅವನ ಮೂಲಕ ಮುಂಬೈಯ ಏಜೆಂಟ್ ಶಾಭಾಖಾನ್ ನ ಮೊಬೈಲ್ ನಂಬರ್ ಸಿಕ್ಕಿದರೂ ಆತನ ಏಜೆನ್ಸಿ ಬಗ್ಗೆ ಎಲ್ಲಿಯೂ ಅಧಿಕೃತ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ಗೆ ದೂರು
ಕೊನೆಯ ಪ್ರಯತ್ನವಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರನ್ನು ನೇರವಾಗಿ ಸಂಪರ್ಕಿಸಲಾಗಿದೆ. ಇದೀಗ ಸಚಿವಾಲಯದ ಹಿರಿಯ ಅಧಿಕಾರಿ ಎಂ. ಸಿ. ಲೂಥರ್ ನಿರಂತರವಾಗಿ ಪ್ರತಿಷ್ಠಾನದ ಸಂಪರ್ಕದಲ್ಲಿದ್ದು, ಜೆಸಿಂತರ ಉದ್ಯೋಗದಾರರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಸಹಾಯಕ್ಕಾಗಿ ಇ-ಮೇಲ್ ಕಳುಹಿಸಿದರೂ ಗಮನಿಸದ ಸುಷ್ಮಾ ಸ್ವರಾಜ್ ಕೊನೆಯದಾಗಿ ಟ್ವಿಟರ್ ನಲ್ಲಿ ಮಾಹಿತಿ ಹಾಕಿದ ಬಳಿಕ ಎಚ್ಚೆತ್ತು ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿರುವ ಅನಿವಾಸಿ ಭಾರತೀಯರ ವೇದಿಕೆ ರಿಯಾದ್ ನ ಭಾರತೀಯ ದೂತಾವಾಸವನ್ನು ಸಂಪರ್ಕಿಸಿ ಜೆಸಿಂತರ ಉದ್ಯೋಗದಾತನ ವಿಳಾಸ ಹಾಗೂ ವಿವರಗಳು ದೊರೆತವು. ಜೆಸಿಂತರ ಉದ್ಯೋಗದಾತ ಅಬ್ದುಲ್ಲಾ ಅಲ್ಮುತೈರಿಯನ್ನು ವಿಚಾರಿಸಿದಾಗ ಎರಡು ವರ್ಷಗಳ ಕಾಲ ತನ್ನ ಮನೆಯಲ್ಲಿ ಕೆಲಸ ಮಾಡಲು ಜೆಸಿಂತ ಒಪ್ಪಂದ ಮಾಡಿಕೊಂಡಿದ್ದು, ಇದಕ್ಕಾಗಿ ಭಾರತೀಯ ಏಜೆಂಟ್ ನನ್ನಿಂದ 24000 ಸೌದಿ ರಿಯಲ್ (5 ಲಕ್ಷ ರೂ.) ಗಳನ್ನು ಪಡೆದುಕೊಂಡಿದ್ದಾರೆ. ಅದನ್ನು ಹಿಂತಿರುಗಿಸಿದ್ದಲ್ಲಿ ಜೆಸಿಂತಳನ್ನು ಭಾರತಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾಗಿ ರವೀಂದ್ರನಾಥ್ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಮಾನವ ಕಳ್ಳ ಸಾಗಣೆಯ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ಗಂಭೀರವಾಗಿದ್ದರೂ ಪೊಲೀಸ್ ಇಲಾಖೆ ನಿರ್ಲಕ್ಷ್ಯ ತಾಳಿದೆ ಎನ್ನುವ ಆರೋಪ ಕೇಳಿ ಬಂದಿದೆ.


Spread the love

Exit mobile version