Home Mangalorean News Kannada News ಗಾಂಜಾ ನಿಯಂತ್ರಣ: ಇನ್ನಷ್ಟು ಬಿಗಿಗೊಳಿಸಲು ಜಿಲ್ಲಾಧಿಕಾರಿ ಸೂಚನೆ

ಗಾಂಜಾ ನಿಯಂತ್ರಣ: ಇನ್ನಷ್ಟು ಬಿಗಿಗೊಳಿಸಲು ಜಿಲ್ಲಾಧಿಕಾರಿ ಸೂಚನೆ

Spread the love

ಗಾಂಜಾ ನಿಯಂತ್ರಣ: ಇನ್ನಷ್ಟು ಬಿಗಿಗೊಳಿಸಲು ಜಿಲ್ಲಾಧಿಕಾರಿ ಸೂಚನೆ

ಮ0ಗಳೂರು: ಗಾಂಜಾ ಸೇರಿದಂತೆ ಮಾದಕವಸ್ತುಗಳಿಗೆ ಯುವಜನರು ಆಕರ್ಷಿತರಾಗುವುದನ್ನು ನಿಯಂತ್ರಿಸಲು ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ತೀವ್ರ ನಿಗಾ ವಹಿಸಲು ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ ಸೂಚಿಸಿದ್ದಾರೆ.

ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶೈಕ್ಷಣಿಕ ಸಂಸ್ಥೆಗಳ ಸುತ್ತಮುತ್ತ ಮಾದಕ ವಸ್ತುಗಳ ಚಟುವಟಿಕೆ ಮೇಲೆ ನಿಗಾ ಇಡಲು ಮತ್ತು ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಲು ಈಗಾಗಲೇ ಪ್ರತೀ ಶಾಲಾ ಕಾಲೇಜುಗಳಲ್ಲಿ ನೋಡೆಲ್ ಶಿಕ್ಷಕರನ್ನು ನೇಮಿಸಲಾಗಿದೆ. ಈ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಿ, ಅವರು ಇನ್ನಷ್ಟು ಕ್ರಿಯಾಶೀಲರಾಗುವಂತೆ ಕ್ರಮಕೈಗೊಳ್ಳಲು ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಶಾಲಾ ಕಾಲೇಜುಗಳಲ್ಲದೇ, ಎಲ್ಲಾ ಹಾಸ್ಟೆಲ್‍ಗಳಲ್ಲೂ ವಾರ್ಡನ್‍ಗಳಿಗೆ ಮಾದಕ ವಸ್ತುಗಳ ಚಟುವಟಿಕೆಗಳ ಮೇಲೆ ನಿಗಾ ಇಡಲು ನೋಡೆಲ್ ಆಗಿ ನೇಮಿಸಲಾಗುವುದು. ನೋಡೆಲ್ ಶಿಕ್ಷಕರಿಗೆ ಅಧಿಕೃತ ಪ್ರಮಾಣಪತ್ರ ನೀಡಲಾಗುವುದು. ಗಾಂಜಾ ಚಟುವಟಿಕೆ ಕಂಡುಬಂದರೆ ನೇರವಾಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಅವರಿಗೆ ತಿಳಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯು ಶೈಕ್ಷಣಿಕವಾಗಿ ಮುಂದುವರಿದಿದ್ದರೂ, ಮಾದಕ ವಸ್ತುಗಳ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯನ್ನು ಗಾಂಜಾ ಮುಕ್ತವನ್ನಾಗಿ ಮಾಡಲು ಪಣತೊಟ್ಟಿರುವುದಾಗಿ ಅವರು ತಿಳಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆಗಳು ಈ ನಿಟ್ಟಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ, ಸಿಗರೇಟು ಸೇರಿದಂತೆ ತಂಬಾಕು ಉತ್ಪನ್ನಗಳ ಸೇವನೆ ನಿಯಂತ್ರಿಸಲು ಕ್ರಿಯಾಯೋಜನೆ ರೂಪಿಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದ ಡಾ.ಕೆ.ಜಿ. ಜಗದೀಶ್, ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳತ್ತ ಆಕರ್ಷಿತರಾಗದಂತೆ ಮಾದಕ ವಸ್ತುಗಳ ನಿಯಂತ್ರಣಕ್ಕೆ ನೇಮಿಸಲಾದ ನೋಡೆಲ್ ಶಿಕ್ಷಕರಿಗೆ ಶೈಕ್ಷಣಿಕ ಸಂಸ್ಥೆಗಳ ಆಸುಪಾಸಿನಲ್ಲಿ ತಂಬಾಕು ಉತ್ಪನ್ನಗಳ ಚಟುವಟಿಕೆಗಳ ಮೇಲೂ ನಿಗಾ ಇಡಲು ಸೂಚಿಸಲಾಗುವುದು ಎಂದು ಹೇಳಿದರು. ಶಾಲಾ-ಕಾಲೇಜುಗಳ 100 ಮೀಟರ್ ವ್ಯಾಪ್ತಿಯಲ್ಲಿ ಬೀಡಿ ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಿಷೇಧ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಯಾಗಿರುವ ಬಗ್ಗೆ ನಿಗಾ ಇಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್.ಆರ್. ಉಮೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಮತ್ತಿತರರು ಇದ್ದರು.


Spread the love

Exit mobile version