ಗಾಂಜಾ ಮಾರಾಟ ಮಾಡುತಿದ್ದ ಐವರು ವ್ಯಕ್ತಿಗಳ ಬಂಧನ
ಮಂಗಳೂರು: ನಗರ ಬಿಜೈ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾದಕ ವಸ್ತುವಾದ ಗಾಂಜಾ ಮಾರಾಟ ಮಾಡುತಿದ್ದವರನ್ನು ದಸ್ತಗಿರಿ ಮಾಡುವಲ್ಲಿ ಮಂಗಳೂರು ದಕ್ಷಿಣ ರೌಡಿ ನಿಗ್ರಹದ ದಳದ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಬಂಧಿತರನ್ನು ಕೂಳೂರು ನಿವಾಸಿ ರೋಶನ್ ವೇಗಸ್ (23), ಬಿಜೈ ನಿವಾಸಿ ಅನಿಲ್ ಡಿಸೋಜಾ (45), ಯೆಯ್ಯಾಡಿ ನಿವಾಸಿ ಮೆಲ್ವಿನ್ ರೋಹಿತ್ (22), ಬಿಕರ್ನಕಟ್ಟೆ ನಿವಾಸಿ ರಕ್ಷಿತ್ ಶೆಟ್ಟಿ (21), ಬೆಂದೂರ್ ವೆಲ್ ನಿವಾಸಿ ಯಜ್ಞೇಶ್ ಶೆಟ್ಟಿ (21) ಎಂದು ಗುರುತಿಸಲಾಗಿದೆ.
ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳದ ಮತ್ತು ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಗೆ ಮಂಗಳೂರು ನಗರದ ಬಿಜೈ ರಾಮ ಮಂದಿರದ ಬಳಿಯಲ್ಲಿರುವ ತಿರುಮೇಲೇಶ್ ಎಂಬ ಮನೆಯಲ್ಲಿ ರೋಶನ್ ಎಂಬವರು ಗಾಂಜಾವನ್ನು ತಂದು, ಪ್ಯಾಕೇಟ್ ಮಾಡಿ, ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ ಕೆಲವೊಂದು ಗಿರಾಕಿಗಳ ಮೂಲಕ ಬೇರೆ ಗಿರಾಕಿಗಳಿಗೆ ಮಾರಾಟ ಮಾಡಿಸುತ್ತಾರೆ, ಗಿರಾಕಿಗಳು ಅವರ ಮನೆಗೆ ಬಂದು ಗಾಂಜಾವನ್ನು ತೆಗೆದುಕೊಂಡು ಹೋಗುತ್ತಾರೆ ಎಂಬುದಾಗಿ ಖಚಿತ ಮಾಹಿತಿ ಮೇರೆಗೆ ಮನೆಗೆ ದಾಳಿ ಮಾಡಿದಾಗ ಸದ್ರಿ ಮನೆಯಲ್ಲಿ ಮಾರಾಟಕ್ಕೆ ಇಟ್ಟಿದ್ದ 61 ಗಾಂಜಾ ಪ್ಯಾಕೇಟುಗಳು ಮತ್ತು ಬಿಡಿ(ಲೂಸ್) ಸೇರಿ ಒಟ್ಟು 2.200 ಕಿ.ಗ್ರಾಂ ಗಾಂಜಾ, 5 ಮೊಬೈಲ್ ಫೋನ್ ಮತ್ತು ನಗದು ರೂ.2390/- ಪತ್ತೆಯಾಗಿದ್ದು ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ಸೊತ್ತಿನ ಒಟ್ಟು ಮೌಲ್ಯ ಸುಮಾರು ರೂ.78,390/- ವಾಗಿರುತ್ತದೆ., ವಿಚಾರಿಸಿದಾಗ ಆರೋಪಿಗಳು ಸುಮಾರು ಎರಡು ವರ್ಷದಿಂದ ತೀರ್ಥಹಳ್ಳಿಯಿಂದ ಗಾಂಜಾವನ್ನು ತಂದು, ಪ್ಯಾಕೇಟ್ ಮಾಡಿ, ಅದನ್ನು ಸಾರ್ವಜನಿಕರಿಗೆ ಮತ್ತು ನಗರ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವುದಾಗಿ ವಿಚಾರಣೆಯ ವೇಳೆ ತಿಳಿಸಿರುತ್ತಾರೆ.