ಗೃಹರಕ್ಷಕ ದಳದ ಬಲವರ್ಧನೆಗೆ ವಿಶೇಷ ಕ್ರಮ : ರೂಪ ಮೌದ್ಗಿಲ್
ಮಂಗಳೂರು : ರಾಜ್ಯ ಗೃಹರಕ್ಷಕ ದಳದ ಬಲವರ್ಧನೆಗೆ ವಿಶೇಷ ಕ್ರಮಗಳನ್ನು ಇಲಾಖೆ ಕೈಗೊಂಡಿದೆ ಎಂದು ಗೃಹರಕ್ಷಕ ದಳ ಅಪರ ಮಹಾ ಸಮಾದೇಷ್ಟರಾದ ರೂಪ ಮೌದ್ಗಿಲ್ ನುಡಿದರು
ಅವರು ಆಗಸ್ಟ್ 7 ರಂದು ಮೇರಿಹಿಲ್ನ ಗೃಹರಕ್ಷಕ ದಳ ಕಚೇರಿಗೆ ಭೇಟಿ ನೀಡಿ ಗೃಹರಕ್ಷಕ ದಳದ ಸಿಬ್ಬಂದಿಗಳಿಂದ ಗೌರವ ರಕ್ಷೆ ಸ್ವೀಕರಿಸಿ, ಜಿಲ್ಲಾ ಗೃಹರಕ್ಷಕ ಸಿಬ್ಬಂದಿಗಳೊಂದಿಗೆ ಮುಕ್ತ ಸಮಾಲೋಚನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯ ಗೃಹರಕ್ಷಕ ದಳದ ಸಿಬ್ಬಂದಿಗಳ ವೇತನ ವಿಳಂಬವು ಮುಂದಿನ ದಿನಗಳಲ್ಲಿ ಸರಿಹೋಗಲಿದ್ದು, ರಾಜ್ಯ ಸರ್ಕಾರದ ಬಜೆಟ್ನಲ್ಲಿ ಅನುದಾನ ಬಿಡುಗಡೆಯು ವಿಳಂಬವಾದ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ಅವರು ಪ್ರತಿಯೊಬ್ಬ ಗೃಹರಕ್ಷಕ ಸಿಬ್ಬಂದಿಗೂ ತಮ್ಮ ಕರ್ತವ್ಯದ ವೇತನ ನೀಡಲು ನಮ್ಮ ಇಲಾಖೆ ಬದ್ದವಾಗಿದೆ ಎಂದರು. ಗೃಹರಕ್ಷಕ ದಳ ಸಿಬ್ಬಂದಿಗಳಿಗೆ ಕರ್ತವ್ಯದ ವೇಳೆ ಸರ್ಕಾರಿ ಬಸ್ಸ್ನಲ್ಲಿ ಸಂಚರಿಸಲು ಬಸ್ ಪಾಸ್ ನೀಡುವ ಬಗ್ಗೆ, ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ನೀಡುವಂತೆ ಪಡಿತರ ವ್ಯವಸ್ಥೆ, ಆರೋಗ್ಯ ವಿಮೆ ನೀಡುವ ಬಗ್ಗೆ ಇಲಾಖೆಯು ಕಾರ್ಯೋನ್ಮುಖವಾಗಿದೆ ಎಂದರು. ಕರ್ತವ್ಯದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗಳು ಮೃತ ಹೊಂದಿದ ಸಂದರ್ಭದಲ್ಲಿ ಇಲಾಖೆಯ ವತಿಯಿಂದ ಗೌರವ ರಕ್ಷೆ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಜಿಲ್ಲಾ ಗೃಹರಕ್ಷಕ ದಳದ ಸಿಬ್ಬಂದಿಗಳು ಪೊಲೀಸ್ ಠಾಣಾ ಕರ್ತವ್ಯದ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ನಾನು ಆಲಿಸಿದ್ದು, ಇದರ ಪರಿಹಾರಕ್ಕಾಗಿ ಪಶ್ವಿಮ ವಲಯ ಐಜಿಪಿ ಹಾಗೂ ಮಂಗಳೂರು ಪೊಲೀಸ್ ಕಮಿಷನರ್ ಜೊತೆ ಚರ್ಚಿಸುವೆ ಎಂದರು.
ಗೃಹರಕ್ಷಕ ಸಿಬ್ಬಂದಿಗಳ ವಾರ್ಷಿಕ ತರಬೇತಿ ಶಿಬಿರ ಹಾಗೂ ಕರ್ತವ್ಯದ ಸಂದರ್ಭದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯಡಿ ವೇತನವನ್ನು ನೀಡುವ ಬಗ್ಗೆ ಇಲಾಖೆ ಕ್ರಮ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಇಲಾಖೆಯ ಕವಾಯತು ಸಮಯದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಲಾಗುವುದು ಎಂದರು. ಜಿಲ್ಲಾ ಗೃಹರಕ್ಷಕ ದಳದ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಮುಂದಿನ ದಿನಗಳಲ್ಲಿ ಹೆಚ್ಚಿನ ಸಿಬ್ಬಂದಿಗಳ ನೇಮಕದ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು. ಜಿಲ್ಲೆಯಲ್ಲಿ ಸಿವಿಲ್ ಡಿಫೆನ್ಸ್ ಘಟಕವನ್ನು ತಕ್ಷಣ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಜಿಲ್ಲಾ ಸಿವಿಲ್ ಡಿಫೆನ್ಸ್ ಕಚೇರಿ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಸಿವಿಲ್ ಡಿಫೆನ್ಸ್ ಸೇವೆಯು ಲಭ್ಯವಾಗಲಿದೆ ಎಂದರು.
ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ: ಮುರಲೀ ಮೋಹನ್ ಚೂಂತಾರು, ಉಪ ಸಮಾದೇಷ್ಟರಾದ ರಮೇಶ್, ಸೆಕೆಂಡ್ ಇನ್ ಕಮಾಂಡ್ ಮಹಮ್ಮದ್ ಇಸ್ಮಾಯಿಲ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗೃಹರಕ್ಷಕ ದಳದ ಕ್ಷೇಮಾಭಿವೃಧ್ದಿ ನಿಧಿಯಿಂದ ಕರ್ತವ್ಯದ ಸಂಧರ್ಭದಲ್ಲಿ ಅಪಘಾತದಲ್ಲಿ ಮೃತ ಹೊಂದಿದ ಮಂಗಳೂರು ಘಟಕದ ಗೃಹರಕ್ಷಕ ಸಿಬ್ಬಂದಿ ರಾಜೇಶ್ ತಾಯಿಗೆ ಸಹಾಯ ಧನದ ಚೆಕ್ನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಕಳೆದ ವಾರ ಅಫಘಾತದಲ್ಲಿ ಮೃತ ಹೊಂದಿದ ಪುತ್ತೂರು ಘಟಕದ ಗೃಹರಕ್ಷಕನಾದ ಪ್ರಜ್ವಲ್ ಡಿಸೋಜಾ ಇವರಿಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕರು ಸಂಗ್ರಹಿಸಿದ 31,761/- ರೂಪಾಯಿಗಳನ್ನು ಮೃತರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.