ಗೆದ್ದಾಗಲೂ ಸೋತಾಗಲೂ ಸದಾ ಜನರೊಂದಿಗೆ ಇದ್ದು ಪ್ರಾಮಾಣಿಕ ಸೇವೆ ಮಾಡಿದ್ದೇನೆ; ಪ್ರಮೋದ್ ಮಧ್ವರಾಜ್

Spread the love

ಗೆದ್ದಾಗಲೂ ಸೋತಾಗಲೂ ಸದಾ ಜನರೊಂದಿಗೆ ಇದ್ದು ಪ್ರಾಮಾಣಿಕ ಸೇವೆ ಮಾಡಿದ್ದೇನೆ; ಪ್ರಮೋದ್ ಮಧ್ವರಾಜ್

ಉಡುಪಿ: ನನ್ನ ವಿರುದ್ದ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿ ಹಿಂದಿನ 5 ವರ್ಷಗಳಲ್ಲಿ ಯಾರ ಕಷ್ಟ ಸುಖಕ್ಕೂ ಬರಲಿಲ್ಲ ಆದರೆ ಈಗ ಚುನಾವಣೆ ಬಂದಾಗ ಮಾತ್ರ ಅವರಿಗೆ ಜನರ ನೆನಪಾಗುತ್ತದೆ. ಆದರೆ ನಾನು ಸೋತಾಗಲೂ ಜನರ ಸೇವೆ ಮಾಡಿದ್ದು ಗೆದ್ದಾಗಲೂ ಜನರ ಸೇವೆ ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರು ಕ್ಷೇತ್ರದ ವಿವಿಧ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಕಳೆದ 5 ವರ್ಷದ ಅವಧಿಯಲ್ಲಿ ನಾನು ಎಲ್ಲೂ ತಾರತಮ್ಯ ಮಾಡಿಲ್ಲ. ಯಾವುದೇ ಭ್ರಷ್ಠಾಚಾರ ಲಂಚ ಪಡೆಯದೆ ಜನರಿಗೆ ದಿನದ 24 ಗಂಟೆ ದುಡಿದ್ದೇನೆ. ಈಗಾಗಲೇ ಕ್ಷೇತ್ರದಲ್ಲಿ ಶೆ 70 ಕೆಲಸಗಳು ಮುಗಿದ್ದು ಇನ್ನೂ ಕೇವಲ ಶೆ 30 ಬಾಕಿ ಇದ್ದು ಮತ್ತೆ ಅವಕಾಶ ನೀಡಿದರೆ ಇಡೀ ಉಡುಪಿ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ರೂಪಿಸುವುದಾಗಿ ಹೇಳಿದರು.

ಕಳೆದ 5 ವರ್ಷಗಳಲ್ಲಿ ಸಚಿವನಾಗಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು ಜನರ ಮುಂದಿದ್ದು ಸತ್ಯವೇನೆಂದು ಜನರಿಗೆ ತಿಳಿದಿದೆ. ವಿಪಕ್ಷಗಳು ನಡೆಸುವ ಸುಳ್ಳಿನ ಪ್ರಚಾರಗಳು ಯಶಸ್ವಿಯಾಗಲಾರದು. ವಿಪಕ್ಷಗಳು ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಕಾರ್ಯವನ್ನು ಮಾಡುತ್ತಿವೆ. ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ವಸತಿ ಯೋಜನೆಗಳ ಸಹಿತ, ಮೂಲ ಸೌಕರ್ಯಗಳು ಅನುಷ್ಠಾನಗೊಂಡಿವೆ. ಜಾತಿ ಧರ್ಮ ನೋಡದೆ ಎಲ್ಲರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ.

ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಉಸ್ತುವಾರಿ ಸಚಿವನಾಗಿ 2026 ಕೋಟಿಗೂ ಮಿಕ್ಕಿ ಅನುದಾನವನ್ನು ತಂದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಿರಂತರವಾಗಿ ಶ್ರಮವಹಿಸಿದ್ದೇನೆ. ಕಳೆದ 5 ವರ್ಷಗಳ ಅವಧಿಯಲ್ಲಿ 21,000 ಕುಟುಂಬಗಳಿಗೆ ಬಿಪಿಎಲ್ ಪಡಿತರ ಚೀಟಿ, ತಾಂತ್ರಿಕ ಅಡಚಣೆಯನ್ನು ಹೊರತುಪಡಿಸಿ 24 ಗಂಟೆಗಳ ನಿರಂತರ ವಿದ್ಯುತ್, ಅಕ್ರಮ-ಸಕ್ರಮ ಯೋಜನೆಯಡಿಯಲ್ಲಿ ಹಕ್ಕು ಪತ್ರಗಳ ವಿತರಣೆ, ಹಳ್ಳಿಯ ಮೂಲೆ ಮೂಲೆಗಳಿಗೂ ಜೆ-ನರ್ಮ್ ಸರಕಾರಿ ಬಸ್ಗಳು, ಸಂಪರ್ಕ ಸೇತುವೆಗಳು ಪ್ರವಾಸತಾಣಗಳ ಅಭಿವೃದ್ಧಿ, ಬಂದರು ಅಭಿವೃದ್ಧಿ, ಸಮುದ್ರತೀರದಲ್ಲಿ ತಡೆಗೋಡೆ ನಿರ್ಮಾಣ, ಕ್ರೀಡಾಂಗಣ, ಬಡ ಕುಟುಂಬಗಳಿಗೆ ದಾನಿಗಳ ನೆರವಿನೊಂದಿಗೆ ಮನೆಗಳ ನಿರ್ಮಾಣ, ಹತ್ತು ಹಲವಾರು ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನಗೊಳಿಸಿ ಉಡುಪಿ ಕ್ಷೇತ್ರವನ್ನು ನಂ.1 ಕ್ಷೇತ್ರವನ್ನಾಗಿಸಿದ ಸಂತೃಪ್ತಿ ನನಗಿದೆ ಎಂದರು.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರಾಜ್ಯ ಸರಕಾರದ ಅನ್ನ ಭಾಗ್ಯ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಿರುವುದು ಕೆಲವರಿಗೆ ನುಂಗಲಾರದ ತುತ್ತಾಗಿದೆ. ಸರ್ಕಾರದ ಯೋಜನೆಗಳು ಮತ್ತು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಬದ್ಧತೆ ಬೇಕು. ಜನರ ಬದುಕನ್ನು ಹಸನುಗೊಳಿಸುವ ಯೋಜನೆಗಳನ್ನು ಮುಕ್ತ ಮನಸ್ಸಿನಿಂದ ಕಾರ್ಯಗತಗೊಳಿಸಬೇಕು ಇದಕ್ಕೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಉಡುಪಿ ಕ್ಷೇತ್ರದಲ್ಲಿ ರಾಜ್ಯ ಸರಕಾರದ ಜನೋಪಯೋಗಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಕಾರ್ಯಕರ್ತರು ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮತವನ್ನಾಗಿ ಪರಿವರ್ತಿಸುವ ಪ್ರಯತ್ನ ಮಾಡಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕಾಗಿದೆ ಎಂದರು.

ಕಳಂಕಿತ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವ ಮೂಲಕ ಭ್ರಷ್ಟಾಚಾರ ಪೋಷಣೆಗೆ ಸ್ವತಃ ಪ್ರಧಾನಿ ಮೋದಿಯವರು ಮುಂದಾಗಿರುವುದು ಕೇಂದ್ರ ಸರಕಾರ ಭ್ರಷ್ಟಾಚಾರವನ್ನು ಪೋಷಿಸುತ್ತಿದೆ ಎನ್ನುದಕ್ಕೆ ಸ್ಪಷ್ಟ ಉದಾಹರಣೆ. ಈ ನಿಟ್ಟಿನಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ತರಬೇಕೆಂದು ಎಐಸಿಸಿ ಸದಸ್ಯ ಅಮೃತ್ ಶೆಣೈಯವರು ಮತದಾರರಿಗೆ ಕರೆ ನೀಡಿದರು.


Spread the love