ಗೋವಾ ಸರಕಾರಕ್ಕೆ ಶಾಸಕ ಕಾಮತ್ ಅಭಿನಂದನೆ

Spread the love

ಗೋವಾ ಸರಕಾರಕ್ಕೆ ಶಾಸಕ ಕಾಮತ್ ಅಭಿನಂದನೆ

ಗೋವಾ ಸರಕಾರ ಕರ್ನಾಟಕದಿಂದ ಬರುವ ಮೀನಿನ ಮೇಲೆ ಹೇರಿದ್ದ ನಿಷೇಧವನ್ನು ಹಿಂಪಡೆದುಕೊಂಡದ್ದಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ನಿಯೋಗದಲ್ಲಿದ್ದ ಕರಾವಳಿಯ ಬಿಜೆಪಿ ಶಾಸಕರುಗಳು ಮತ್ತು ಎಲ್ಲ ಮೀನುಗಾರರ ಮುಖಂಡರ ಪರವಾಗಿ ಗೋವಾ ಸರಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಶಾಸಕ ಕಾಮತ್, ಗೋವಾದ ಸ್ಪೀಕರ್ ಪ್ರಮೋದ್ ಸಾವಂತ್, ಆರೋಗ್ಯ ಸಚಿವ ವಿಶ್ವಜೀತ್ ಪಿ ರಾಣೆ, ಮೀನುಗಾರಿಕಾ ಸಚಿವ ವಿನೋದ್ ಪಾಲಿನರ್ಸ್ ಅವರೊಂದಿಗೆ ಗೋವಾ ರಾಜ್ಯ ಮುಖ್ಯ ಕಾರ್ಯದರ್ಶಿ, ಕಾರ್ಯದರ್ಶಿಗಳೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿರುವುದು ಮಾಧ್ಯಮಗಳ ಮೂಲಕ ಎಲ್ಲರಿಗೂ ಗೊತ್ತಿದೆ. ಇನ್ನು ಕರಾವಳಿಯ ಮೂರು ಜಿಲ್ಲೆಗಳ ಮೀನುಗಾರರು ಗೋವಾಕ್ಕೆ ಮೀನು ರಫ್ತು ಮಾಡಲು ಇದ್ದ ಅಡೆತಡೆ ಎಲ್ಲ ಕೊನೆಗೊಂಡಿದೆ. ಗೋವಾದ ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡಲು ನಮ್ಮ ರಾಜ್ಯದವರಿಗೆ ಅವಕಾಶ ಕೂಡ ಸಿಕ್ಕಿದೆ. ಗೋವಾ ಸರಕಾರದ ಈ ಕ್ರಮದಿಂದ ಕರಾವಳಿಯ ಮೀನುಗಾರರ ಮೇಲೆ ಇದ್ದ ಆತಂಕ ಕೊನೆಗೊಂಡಿದೆ. ಭವಿಷ್ಯದಲ್ಲಿ ಮೀನುಗಾರರಿಗೆ ಇನ್ನಷ್ಟು ಹೆಚ್ಚಿನ ಆರ್ಥಿಕ ಸದೃಢತೆ ಸಿಗುವಂತಾಗಲಿ ಎಂದು ಹೇಳಿದ್ದಾರೆ.

ಶಾಸಕರೊಂದಿಗೆ ಮಾಜಿ ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಮೀನುಗಾರ ಮುಖಂಡರಾದ ನಿತಿನ್ ಕುಮಾರ್, ಬಿಜೆಪಿ ಮುಖಂಡರಾದ ರವಿಶಂಕರ್ ಮಿಜಾರ್, ಆನಂದ ಬಂಟ್ವಾಳ್, ಪ್ರೇಮಾನಂದ ಶೆಟ್ಟಿ, ವಸಂತ ಜೆ ಪೂಜಾರಿ, ರಮೇಶ್ ಕಂಡೆಟ್ಟು, ಗ್ವಾಡ್ಲೀನ್ ಡಿಸೋಜಾ ಸಹಿತ ಹಲವಾರು ಮುಖಂಡರು ಉಪಸ್ಥಿತರಿದ್ದರು.


Spread the love