ಗೋ ರಕ್ಷಣೆ ಹೆಸರಲ್ಲಿ ಹಿಂಸಾಚಾರ ಸಹಿಸೊಲ್ಲ, ಕಠಿಣ ಕ್ರಮ ಕೈಗೊಳ್ಳಿ: ರಾಜ್ಯಗಳಿಗೆ ಮೋದಿ ಸೂಚನೆ!
ನವದೆಹಲಿ: ಗೋ ರಕ್ಷಣೆ ಹೆಸರಲ್ಲಿ ಹಿಂಸಾಚಾರ ಮಾಡುವುದನ್ನು ಕೇಂದ್ರ ಸರ್ಕಾರ ಸಹಿಸುವುದಿಲ್ಲ.. ಕೂಡಲೇ ಇಂತಹ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ದೆಹಲಿಯಲ್ಲಿ ಭಾನುವಾರ ನಡೆದ ಸರ್ವಪಕ್ಷ ನಾಯಕರ ಸಭೆಯಲ್ಲಿ ಪ್ರಧಾನಿ ಮೋದಿ ಇಂತಹುದೊಂದು ಸೂಚನೆ ನೀಡಿದ್ದು, ಗೋ ರಕ್ಷಣೆ ಹೆಸರಲ್ಲಿ ಹಿಂಸಾಚಾರ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳು ಸ್ವತಂತ್ರ್ಯ ಎಂಬ ಸಂದೇಶ ನೀಡಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವರಾದ ಅನಂತ್ ಕುಮಾರ್ ಹಾಗೂ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಗೋರಕ್ಷಣೆ ಹೆಸರಲ್ಲಿ ಹಿಂಸಾಚಾರಕ್ಕಿಳಿಯುವುದನ್ನು ಕೇಂದ್ರ ಸರ್ಕಾರ ಸಹಿಸುವುದಿಲ್ಲ. ಹಿಂಸಾಚಾರಿಗಳ ವಿರುದ್ಧ ಸೂಕ್ತ ಕ್ರಮ ಹಾಗೂ ತನಿಖೆ ನಡೆಸುವುದಾಗಿ ಕೇಂದ್ರ ಸರ್ಕಾರ ಆಶ್ವಾಸನೆ ನೀಡಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಗೋರಕ್ಷಣೆ ಹಿಂಸಾಚಾರಕ್ಕೆ ರಾಜಕೀಯ ಬಣ್ಣ ಅಥವಾ ಕೋಮು ಬಣ್ಣ ಬಳಿಯದಂತೆ ರಾಜಕೀಯ ಪಕ್ಷಗಳಿಗೆ ಪ್ರಧಾನಿ ಮೋದಿ ಮನವಿ ಮಾಡಿದ್ದು, ಇಂತಹ ಕೃತ್ಯಗಳಿಂದ ದೇಶಕ್ಕಾಗುವ ಲಾಭವೇನೂ ಇಲ್ಲ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಈಶಾನ್ಯ ಭಾರತದಲ್ಲಿ ಸಂಭವಿಸುತ್ತಿರುವ ಪ್ರವಾಹದ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಅಧಿಕಾರಿಗಳಿಂಗ ವರದಿ ತರಿಸಿಕೊಂಡು ರಾಜ್ಯಗಳಿಗೆ ಬೇಕಾದ ಸೂಕ್ತ ನೆರವು ನೀಡುವಲ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮಾನ್ಸೂನ್ ಅಧಿವೇಶ ಆರಂಭವಾಗುವ ಹಿನ್ನಲೆಯಲ್ಲಿ ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಲು ಪ್ರಧಾನಿ ಮೋದಿ ಈ ಸರ್ವ ಪಕ್ಷ ಸಭೆಯನ್ನು ಕರೆದಿದ್ದರು. ಇಂದಿನ ಸಭೆಯಲ್ಲಿ ಜೆಡಿಯು, ತೃಣಮೂಲ ಕಾಂಗ್ರೆಸ್ ಪಕ್ಷದ ಮುಖಂಡರು ಗೈರಾಗಿದ್ದರು. ಕರ್ನಾಟಕದಿಂದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಸಭೆಯಲ್ಲಿ ಹಾಜರಿದ್ದರು.