ಗೌರಿ ಲಂಕೇಶ್ ಹತ್ಯೆಯನ್ನು ಭಯೋತ್ಪಾದಕ ಕೃತ್ಯ ಎಂಬುದಾಗಿ ಪರಿಗಣಿಸಿ ತನಿಖೆ ನಡೆಸಿ ; ಪ್ರೋ. ಫಣಿರಾಜ್ ಆಗ್ರಹ

Spread the love

ಗೌರಿ ಲಂಕೇಶ್ ಹತ್ಯೆಯನ್ನು ಭಯೋತ್ಪಾದಕ ಕೃತ್ಯ ಎಂಬುದಾಗಿ ಪರಿಗಣಿಸಿ ತನಿಖೆ ನಡೆಸಿ ; ಪ್ರೋ. ಫಣಿರಾಜ್  ಆಗ್ರಹ

ಉಡುಪಿ: ಪತ್ರಕರ್ತೆ ಗೌರಿ ಲಂಕೇಶ್ ಅವರ ಕೊಲೆಯನ್ನು ಕೇವಲ ಅಪರಾಧದ ದೃಷ್ಟಿಕೋನದಲ್ಲಿ ನೋಡದೆ ಭಯೋತ್ಪಾದಕ ಕೃತ್ಯ ಎಂಬುದಾಗಿ ಪರಿಗಣಿಸಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ತನಿಖೆಯನ್ನು ನಡೆಸಬೇಕು ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಪಾಧ್ಯಕ್ಷ ಪ್ರೋ. ಫಣಿರಾಜ್ ಆಗ್ರಹಸಿದ್ದಾರೆ.

  ಅವರು ಬುಧವಾರ ಅಜ್ಜರಕಾಡಿನ ಹುತಾತ್ಮ ಸ್ಮಾರಕದಲ್ಲಿ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ವಿರೋಧಿಸಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಗೌರಿ ಲಂಕೇಶ್ ಅವರು ಎತ್ತಿ ಹಿಡಿಯುತ್ತಿರುವ ವಿಚಾರಗಳಿಗೆ ಆದ ಕೊಲೆಯೇ ಹೊರತು ನಕ್ಸಲರು, ಆಸ್ತಿಗಾಗಿ, ವೈರಿಗಳಿಂದ ಆದ ಕೊಲೆಯಲ್ಲ. ಅಪಪ್ರಚಾರದ ಮೂಲಕ ಗೌರಿ ಲಂಕೇಶ್ ಅವರ ಕೊಲೆಯನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದರು.

ವೇದಿಕೆಯ ಅಧ್ಯಕ್ಷ ಜಿ ರಾಜಶೇಖರ್ ಮಾತನಾಡಿ ಗೌರಿ ಲಂಕೇಶರ ಸಾವಿನಿಂದ ಹಲವರಿಗೆ ಸಂತೋಷ ಆಗಿದೆ ವೈರಿಯ ಸಾವನ್ನು ದುಃಖಿಸುವ ಸಂಸ್ಕೃತಿ ಈಗ ದೇಶದಲ್ಲಿ ಉಳಿದಿಲ್ಲ. ಮಹಾತ್ಮ ಗಾಂಧಿಯ ಕೊಲೆಯನ್ನು ಸಿಹಿ ವಿತರಿಸಿ ಸಂಭ್ರಮಿಸಿದವರು ನಮ್ಮ ಆಳುತ್ತಿದ್ದು, ಗೌರಿ ಲಂಕೇಶರ ಮೌಲ್ಯ ಸಮಾನತೆ, ಪ್ರಜಾಪ್ರಭುತ್ವ, ಭ್ರಾತ್ವತ್ವದ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವುದೇ ಗೌರಿ ಲಂಕೇಶ್ ಅವರಿಗೆ ಸಲ್ಲಿಸುವ ನಿಜವಾದ ಶೃದ್ಧಾಂಜಲಿಯಾಗಿದೆ ಎಂದರು.

ಉಡುಪಿಯ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಮಾತನಾಡಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಜಾತ್ಯತೀತ ಧ್ವನಿ ಅಡಗಿಸುವ ಪ್ರಯತ್ನವಾಗಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವ ಕಾರ್ಯವಾಗಿದೆ ಒಬ್ಬ ಮನುಷ್ಯನನ್ನು ಇನ್ನೊಬ್ಬ ಬೈದರೆ ಕೊಲೆಗೆ ಮುಂದಾಗುವ ಪ್ರವೃತ್ತಿ ಪ್ರಜಾಪ್ರಭುತ್ವಕ್ಕೆ ಮಾರಕ. ಹೀಗಾಗಿ ಕೊಲೆಗಾರರನ್ನು ಸರಕಾರ ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿದರು.

ಉಪನ್ಯಾಸಕ ಹಯವದನ ಮೂಡುಸಗ್ರಿ ಮಾತನಾಡಿ, ಗೌರಿ ಸದಾ ಪ್ರಶ್ನಿಸುವ ಗುಣ ಹೊಂದಿದ್ದು, ನೊಂದವರ ಧ್ವನಿಯಾಗಿದ್ದರು.  ಸೈದ್ಧಾಂತಿಕವಾಗಿ ವಿರೋಧವಿದ್ದರೂ ಅವರು ಹಿಂಸೆಯನ್ನು ಬೆಂಬಲಿಸಲಿಲ್ಲ. ನಕ್ಸಲರನ್ನೂ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸುತ್ತಿದ್ದರು. ಅವರ ಹತ್ಯೆಯಿಂದ ಜಾತ್ಯಾತೀತ ತತ್ವಕ್ಕೆ ಕೊಡಲಿ ಏಟು  ಬಿದ್ದದೆ ಎಂದು ಆತಂಕವ್ಯಕ್ತಪಡಿಸಿದರು.

ಕ್ರೈಸ್ತ ಧರ್ಮಗುರು ವಂ ವಿಲಿಯಂ ಮಾರ್ಟಿಸ್ ಮಾತನಾಡಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದೆಲ್ಲೆಡೆ ಇಂತಹ ಕೊಲೆಗಳು ಹೆಚ್ಚುತ್ತಿದ್ದು, ಗೌರಿಯವರ ಸಿದ್ದಾಂತವನ್ನು ಎದುರಿಸಲು ಸಾಧ್ಯವಾಗದವರು ಇಂತಹ ಕೊಲೆಗಳನ್ನು ಮಾಡಿದ್ದಾರೆ. ಆದರೆ ಅವರ ಚಿಂತನೆ ಇನ್ನೂ ಉಳಿಯುತ್ತದೆ ಎಂದರು.

ಅಕ್ಬರ್ ಆಲಿ, ದಲಿತ ಚಿಂತಕ ಜಯನ್ ಮಲ್ಪೆ, ಆಲಂ ಬ್ರಹ್ಮಾವರ, ವಿಶ್ವನಾಥ ರೈ, ಶ್ಯಾಮ್ ರಾಜ್ ಬಿರ್ತಿ, ಹರ್ಷಕುಮಾರ್ ಕುಗ್ವೆ ಮಾತನಾಡಿದರು.

ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಹುಸೇನ್ ಕೋಡಿಬೆಂಗ್ರೆ, ಎಸ್ ಎಸ್ ಪ್ರಸಾದ್, ಪ್ರೋ ಸಿರಿಲ್ ಮಥಾಯಸ್, ಸಂವರ್ತ ಸಾಹಿಲ್, ಕವಿರಾಜ್, ರಾಜಾರಾಮ್ ತಲ್ಲೂರು, ಉದ್ಯಾವರ ನಾಗೇಶ್ ಕುಮಾರ್, ಇದ್ರೀಸ್ ಹೂಡೆ ಇತರರು ಉಪಸ್ತಿತರಿದ್ದರು.


Spread the love