ಗೌರಿ ಲಂಕೇಶ್ ಹತ್ಯೆ: ಜಮಾಅತೆ ಇಸ್ಲಾಮೀ ಹಿಂದ್ ಖಂಡನೆ
ಬೆಂಗಳೂರು: ವಿಚಾರವಾದಿ ಕಲ್ಬುರ್ಗಿಯವರ ಹತ್ಯೆ ನಡೆದು ಮೂರು ವರ್ಷಗಳಾದ ಈ ಹೊತ್ತಿನಲ್ಲೇ ಇನ್ನೋರ್ವ ವಿಚಾರವಾದಿ ಮತ್ತು ಸಾಹಿತಿ ಗೌರಿ ಲಂಕೇಶ್ ರ ಹತ್ಯೆಯಾಗಿರುವುದು ಅತ್ಯಂತ ಆಘಾತಕಾರಿ ಮತ್ತು ಖಂಡನಾರ್ಹವಾದುದು ಎಂದು ಜಮಾಅತೆ ಇಸ್ಲಾಮೀ ಹಿಂದ್ ನ ರಾಜ್ಯಾಧ್ಯಕ್ಷ ಮುಹಮ್ಮದ್ ಅತ್ಹರುಲ್ಲಾ ಶರೀಫ್ ಹೇಳಿದ್ದಾರೆ.
ಇದು ಓರ್ವ ವ್ಯಕ್ತಿಯ ಹತ್ಯೆಯಲ್ಲ, ಒಂದು ವಿಚಾರ ಮತ್ತು ತರ್ಕದ ಹತ್ಯೆಯೆಂದೇ ನಾನು ಭಾವಿಸುತ್ತೇನೆ. ಕಲ್ಬುರ್ಗಿಯವರನ್ನು ಹತ್ಯೆಗೈದವರನ್ನು ಇನ್ನೂ ಬಂದಿಸಲಾಗಿಲ್ಲ. ಗೌರಿಯವರ ಹತ್ಯೆಯೂ ಕಲ್ಬುರ್ಗಿಯವರ ಹತ್ಯೆಯನ್ನೇ ಹೋಲುವಂತಿದೆ ಎಂಬುದಂತೂ ಇನ್ನಷ್ಟು ಆತಂಕವನ್ನು ಉಂಟುಮಾಡುತ್ತಿದೆ. ಇದು ಗೌರಿ ನಂಬಿದ್ದ ವಿಚಾರಧಾರೆಗೆ ಎದುರಾದ ಸವಾಲು ಅನ್ನುವುದಕ್ಕಿಂತ ವ್ಯವಸ್ಥೆಗೆ ಎದುರಾದ ಸವಾಲು ಎಂದೇ ಹೇಳಬೇಕಾಗುತ್ತದೆ.
ಸರಕಾರ ಆರೋಪಿಗಳನ್ನು ಬಂದಿಸದೇ ವಿರಮಿಸದಿರುವ ನಿರ್ಧಾರ ತಾಳಬೇಕು ಎಂದು ಅತ್ಹರುಲ್ಲಾ ಶರೀಫ್ ಆಗ್ರಹಿಸಿರುವರಲ್ಲದೇ ಗೌರಿ ಅವರ ಕುಟುಂಬ ಹಾಗೂ ಜೊತೆಗಾರರಿಗೆ ದೇವನು ಸಹನೆಯನ್ನು ದಯಪಾಲಿಸಲಿ ಎಂದವರು ಪ್ರಾರ್ಥಿಸಿದ್ದಾರೆ.