ಗ್ಯಾರಂಟಿ ಯೋಜನೆಯ ಲಾಭ ಪ್ರತಿಯೊಬ್ಬರಿಗೆ ಲಭಿಸಿದೆ – ಜೆಪಿ ಹೆಗ್ಡೆ

Spread the love

ಗ್ಯಾರಂಟಿ ಯೋಜನೆಯ ಲಾಭ ಪ್ರತಿಯೊಬ್ಬರಿಗೆ ಲಭಿಸಿದೆ – ಜೆಪಿ ಹೆಗ್ಡೆ

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಎ. 5 ರಂದು ಕೋಟ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಸಭೆಗಳಲ್ಲಿ ಭಾಗವಹಿಸಿ ಚುನಾವಣಾ ಪ್ರಚಾರ ನಡೆಸಿದರು.

ಈ ವೇಳೆ ಮಾತನಾಡಿದ ಅವರು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಎಲ್ಲಾ ವರ್ಗದ ಜನರ ಅನುಕೂಲವಾಗುವಂತಹ ಯೋಜನೆಗಳ ಮೂಲಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ. ಗ್ಯಾರಂಟಿ ಯೋಜನೆಗಳು ಇಂದು ಪ್ರತಿಯೊಬ್ಬರ ಮನೆಗೆ ತಲುಪಿದ್ದು ಪ್ರತಿ ತಿಂಗಳು ಮನೆಯ ಗೃಹಿಣಿಯರು, ಯುವಕರು, ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿಲ್ಲ ಎಂದು ಬಿಜೆಪಿಗರು ಧರಣಿ ನಡೆಸಿದರು ಜಾರಿಗೆ ತಂದ ಬಳಿಕ ರಾಜ್ಯ ದಿವಾಳಿಯಾಗುತ್ತಿದೆ ಎಂಬ ವಾದವನ್ನು ಮುಂದಿಡುತ್ತಿದ್ದಾರೆ. ದೇಶದ ವಿವಿಧ ಉದ್ಯಮಿಗಳ ಕೋಟ್ಯಾಂತರ ಮೊತ್ತದ ಸಾಲವನ್ನು ಮನ್ನಾ ಮಾಡಿದಾಗ ದೇಶ ದಿವಾಳಿಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು.

ತಾನು ಕೂಡ ಮೀನುಗಾರಿಕಾ ಸಚಿವನಾಗಿ ಕೆಲಸ ಮಾಡಿದ್ದು ನನ್ನ ಪ್ರತಿಸ್ಪರ್ಧಿ ಅಭ್ಯರ್ಥಿ ಕೂಡ ಅದೇ ಖಾತೆಯನ್ನು ನಿರ್ವಹಿಸಿದ್ದರು. ಜನರು ಮತ್ತು ಕಾರ್ಯಕರ್ತರು ಇಬ್ಬರ ಕೆಲಸವನ್ನು ತುಲನೆ ಮಾಡಬೇಕಾಗಿದೆ. ನಿರಂತರವಾಗಿ ನಡೆಯುವ ಕಾರ್ಯಕ್ರಮ ಯಾರು ಕೂಡ ಸಚಿವರಾಗಿ ಮಾಡಬಹುದು ಆದರೆ ಮೀನುಗಾರರಿಗೆ ಹೊಸ ಯೋಜನೆಗಳನ್ನು ತರುವುದರ ಮೂಲಕ ಅಭಿವೃದ್ಧಿ ಮಾಡುವುದು ಮುಖ್ಯ ಆ ಕೆಲಸವನ್ನು ನಾನು ನನ್ನ ಸಚಿವ, ಸಂಸದ ಮತ್ತು ಶಾಸಕ ಅವಧಿಯಲ್ಲಿ ಮಾಡಿದ್ದು ಕಾರ್ಯಕರ್ತರು ಈ ವಿಚಾರವನ್ನು ಮತದಾರರಿಗೆ ಮನಮುಟ್ಟುವಂತೆ ಹೇಳಬೇಕಾದ ಅಗತ್ಯತೆ ಇದೆ ಎಂದರು.

ಬೈಂದೂರಿನ ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ ಜಯಪ್ರಕಾಶ್ ಹೆಗ್ಡೆಯವರು ಸದಾ ಜನರಿಗೆ ಲಭ್ಯವಿರುವ ವ್ಯಕ್ತಿಯಾಗಿದ್ದು ಸಚಿವ, ಸಂಸದರಾಗಿದ್ದ ಸಮಯದಲ್ಲಿ ಹಲವಾರು ಯೋಜನೆಗಳನ್ನು ಜಿಲ್ಲೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಅನುಭವಿ ರಾಜಕಾರಣಿಯಾಗಿದ್ದು ಒರ್ವ ಉತ್ತಮ ಸಂಸದನಾಗುವಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಮುಂದಿನ ಕೆಲವೇ ದಿನಗಳ ಅವಧಿಯಲ್ಲಿ ಶಕ್ತಿ ಮೀರಿ ಅವರ ಗೆಲುವಿಗೆ ಪ್ರಯತ್ನಿಸುವಂತೆ ಕರೆ ನೀಡಿದರು.

ಈ ವೇಳೆ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಕೋಟತಟ್ಟು, ಸಾಲಿಗ್ರಾಮ ಪಟ್ಟಣ ಪಂಚಾಯತ್, ಕೋಡಿ, ಪಾಂಡೇಶ್ವರ, ಐರೋಡಿ ಭಾಗದಲ್ಲಿ ಕಾರ್ಯಕರ್ತರ ಸಭೆಗಳನ್ನು ನಡೆಸಿ ಪಕ್ಷದ ಹಿರಿಯ ಮುಖಂಡರು ಹಾಗೂ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು.

ಈ ವೇಳೆ ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ನಾಯಕರಾದ ವಿನಯ್ ಕಬ್ಯಾಡಿ, ಪ್ರಕಾಶ್ ಚಂದ್ರ ಶೆಟ್ಟಿ ಕಂಬದ ಕೋಣೆ, ತಿಮ್ಮ ಪೂಜಾರಿ, ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು & ಪಂಚಾಯತ್ ಸದ್ಯಸರು, ಶ್ರೀ. ಕೆ ಜಯಪ್ರಕಾಶ್ ಹೆಗ್ಡೆ ಅವರ ಹಿತೈಷಿಗಳು, ಎಲ್ಲ ಮುಂಚೂಣಿ ಘಟಕದ ಅಧ್ಯಕ್ಷರು & ಸದ್ಯಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love