ಗ್ರಾಮದ ಅಭಿವೃದ್ದಿಯಲ್ಲಿ ಸಾರ್ವಜನಿಕರು ಕೈ ಜೋಡಿಸಿದಾಗ ನಿಜವಾದ ಬದಲಾವಣೆ ಸಾಧ್ಯ; ಕೋಟ ಶ್ರೀನಿವಾಸ ಪೂಜಾರಿ
ಕೋಟ: ಗ್ರಾಮದ ಅಭಿವೃದ್ದಿಯಲ್ಲಿ ಗ್ರಾಮಪಂಚಾಯತ್ನೊಂದಿಗೆ ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯವಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಭಾನುವಾರ ಪಾಂಡೇಶ್ವರ 2ನೇ ವಾರ್ಡಿನ ಮಠತೋಟ ಕ್ರಾಸ್ ಬಳಿಯ ಗ್ರಾಮಸ್ಥರ ಬಹುದಿನದ ಕನಸಾದ ನೂತನ ಭಗೀರಥ ರಸ್ತೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಗ್ರಾಮಪಂಚಾಯತಿಗೆ ನೇರವಾದ ಹೆಚ್ಚು ಅನುದಾನದ ಲಭ್ಯತೆ ಇಲ್ಲದೆ ಹೋದರೂ ಇತರ ಜನಪ್ರತಿನಿಧಿಗಳ ಸಹಕಾರದಿಂದ ಗ್ರಾಮದ ಅಭಿವೃದ್ದಿಯನ್ನು ಕೈಗೊಂಡಾಗ ಆಯಾ ಭಾಗದ ಜನರು ತಮ್ಮ ತನು ಮನ ಧನದ ಸಹಕಾರ ನೀಡಿದಾಗ ಅಂತಹ ಅಭಿವೃದ್ದಿಯಲ್ಲಿ ಪ್ರತಿಯೊಬ್ಬರ ಪಾತ್ರ ಇದೆ ಎನ್ನುವ ತೃಪ್ತಿ ಮೂಡುತ್ತದೆ. ಇಂತಹ ತೃಪ್ತಿ ಮೂಡಿದಾಗ ಮಾತ್ರ ಅಂತಹ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಮಾದರಿಯಾದ ಅಭಿವೃದ್ದಿ ಕಾರ್ಯಗಳು ಸಂಪೂರ್ಣಗೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯತ್ ಸದಸ್ಯರಾದ ರಾಘವೇಂದ್ರ ಕಾಂಚನ್, ಮತ್ತು ತಾಲೂಕು ಪಂಚಾಯತ್ ಸದಸ್ಯೆ ಜ್ಯೋತಿ ಉದಯ ಪೂಜಾರಿ ಮಾತನಾಡಿ ಪ್ರಸ್ತುತ ರಸ್ತೆಗೆ ನಿಕಟಪೂರ್ವ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ರೂ 5 ಲಕ್ಷ ಮತ್ತು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ರೂ 2 ಲಕ್ಷ ಅನುದಾನ ನೀಡಿದ್ದು ಮುಂದಿನ ದಿನಗಳಲ್ಲಿ ತಮ್ಮ ಜಿಪಂ ಮತ್ತು ತಾಪಂ ವತಿಯಿಂದ ಅನುದಾನ ನೀಡುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪಾಂಡೇಶ್ವರ ಗ್ರಾಮಪಂಚಾಯತಿಯ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ವಿಧಾನಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ರಸ್ತೆಯನ್ನು ನಿರ್ಮಿಸಿದ ಗುತ್ತಿಗೆದಾರರಾದ ಜಯರಾಜ್ ಇವರುಗಳನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಪಾಂಡೇಶ್ವರ ಗ್ರಾಮಪಂಚಾಯತಿ ಅಧ್ಯಕ್ಷರಾದ ಗೋವಿಂದ ಪೂಜಾರಿ, ಉಪಾಧ್ಯಕ್ಷೆ ಪ್ರೇಮ, ಸದಸ್ಯರಾದ ಸುರೇಶ ಪೂಜಾರಿ, ಚಂದ್ರಮೋಹನ, ವಿಜಯ ಪೂಜಾರಿ, ಸುಜಾತಾ ಪೂಜಾರಿ, ಭಗೀರಥ ರಸ್ತೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಗಣಪತಿ ಮಂಜರ್ ಉಪಸ್ಥಿತರಿದ್ದರು.
ಭಗೀರಥ ರಸ್ತೆ ಅಭಿವೃದ್ಧಿ ಸಮಿತಿಯ ಗೋವಿಂದ ಪೂಜಾರಿ, ಲಕ್ಷ್ಮೀಶ ಮಂಜರ್, ಗಿರೀಶ್ ಮಂಜರ್, ರಾಜೇಶ್, ದಿನೇಶ್, ನಾರ್ಮನ್ ಡಿಸೋಜಾ, ಲೊರೇನ್ಸ್ ಪಿಂಟೊ, ರಮಾನಂದ, ಹಾಗೂ ಇತರರು ಸಹಕರಿಸಿದರು.
ಶ್ರೀಕಾಂತ್ ಚಡಗ ಸ್ವಾಗತಿಸಿ, ಮೈಕಲ್ ರೋಡ್ರಿಗಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.