ಗ್ರಾಮಾಂತರ ರಿಕ್ಷಾ ಚಾಲಕರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ತು.ರ.ವೇ ಪ್ರತಿಭಟನೆ

Spread the love

ಗ್ರಾಮಾಂತರ ರಿಕ್ಷಾ ಚಾಲಕರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ತು.ರ.ವೇ ಪ್ರತಿಭಟನೆ

ಮಂಗಳೂರು : ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ವಿಧಾನ ಸಭಾ ಕ್ಷೇತ್ರದ ವತಿಯಿಂದ ಕ್ಷೇತ್ರದ ಅಧ್ಯಕ್ಷರಾದ ಸಿರಾಜ್ ಅಡ್ಕರೆಯವರ ನೇತೃತ್ವದಲ್ಲಿ ಗ್ರಾಮಾಂತರ ರಿಕ್ಷಾ ಚಾಲಕರಿಗೆ ಮಂಗಳೂರು ನಗರ ಪ್ರವೇಶ ಸೇರಿದಂತೆ ವಿವಿಧ ಬೇಡಿಕೆಗಳನದನು ಈಡೇರಿಸಲು ಒತ್ತಾಯಿಸಿ ಬೃಹತ್ ಹಕ್ಕೊತ್ತಾಯ ಪ್ರತಿಭಟನಾ ಸಭೆ ತೊಕ್ಕೊಟ್ಟು ಜಂಕ್ಷನ್‍ನಲ್ಲಿ ನಡೆಯಿತು.

 ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಯೋಗೀಶ್ ಶೆಟ್ಟಿ ಜಪ್ಪುರವರು, ಗ್ರಾಮಾಂತರ ರಿಕ್ಷಾ ಚಾಲಕರಿಗೆ ರಕ್ಷಣೆಯಾಗಿ ತುಳುನಾಡ ರಕ್ಷಣಾ ವೇದಿಕೆ ಸದಾ ಸಿದ್ಧವಾಗಿರುತ್ತದೆ. ನಮಗೆ ನಗರ ಪ್ರದೇಶದ ರಿಕ್ಷಾ ಚಾಲಕರ ಮೇಲೆ ಯಾವುದೇ ದ್ವೇಶವಿಲ್ಲ, ಆದರೆ ಬಡ ಗ್ರಾಮಾಂತರ ರಿಕ್ಷಾ ಚಾಲಕರಿಗೆ ಆಗುತ್ತಿರುವ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ. ಒಬ್ಬ ರಿಕ್ಷಾ ಚಾಲಕ ಒಂದು ತಿಂಗಳು ದುಡಿದ ಸುಮಾರು 2000ದಿಂದ 4000ದ ವರೆಗಿನ ಮೊತ್ತದ ಹಣವನ್ನು ನಗರ ಪ್ರವೇಶದ ಕಾರಣವನ್ನು ನೀಡಿ ವಸೂಲಿ ಮಾಡುತ್ತಿರುವುದು ಹಗಲು ದರೋಡೆಯಾಗಿದೆ. ಗ್ರಾಮಾಂತರ ರಿಕ್ಷಾ ಚಾಲಕರು ಅಗತ್ಯ ಕೆಲಸಗಳಿಗಾಗಿ, ಗ್ಯಾಸ್ ಹಾಕಿಸಲು, ರೋಗಿಗಳನ್ನು ಕರೆತರಲು ಮಂಗಳೂರಿಗೆ ಆಗಮಿಸಿದರೆ ಅವರ ಮೇಲೆ ದಂಡ ವಿಧಿಸುತ್ತಿರುವುದು ಅಕ್ಷಮ್ಯವಾಗಿದೆ. ಮುಂದಿನ ಒಂದು ವಾರದಲ್ಲಿ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ತು.ರ.ವೇ ನೇತೃತ್ವದಲ್ಲಿ ಆರ್.ಟಿ.ಒ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ತು.ರ.ವೇ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಎಂ ಸಿರಾಜ್ ಅಡ್ಕರೆ ಮಾತನಾಡಿ ರಿಕ್ಷಾ ಚಾಲಕರು ರಾತ್ರಿ ಹಗಲೆನ್ನದೆ ಸಾರ್ವಜನಿಕರ ಅಥವಾ ಪ್ರಯಾಣಿಕರ ಸೇವೆಗಾಗಿ ತನ್ನ ಕುಟುಂಬವನ್ನು ಬಿಟ್ಟು ಕೆಲಸ ಮಾಡುತ್ತಿರುವಾಗ ಅವರಿಗೆ ಯಾವುದೇ ರೀತಿಯ  ತೊಂದರೆಯಾಗದಂತೆ ನೋಡಿಕೊಳ್ಳುವುದು ಸರಕಾರದ, ಜನಪ್ರತಿನಿಧಿಗಳ, ಅಧಿಕಾರಿಗಳ ಕರ್ತವ್ಯವಾಗಿರುತ್ತದೆ. ಆದರೆ ಗ್ರಾಮಾಂತರ ರಿಕ್ಷಾ ಚಾಲಕರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕಾದ ಸಂಬಂಧಪಟ್ಟವರು ನಗರ ಹಾಗೂ ಗ್ರಾಮೀಣ ಪ್ರದೇಶದ ರಿಕ್ಷಾ ಚಾಲಕರಿಗೆ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಮಲತಾಯಿ ಧೋರಣೆಯನ್ನು ಮಾಡುತ್ತಿರುವುದು ಆಕ್ಷಮ್ಯವಾಗಿದೆ. ಗ್ರಾಮಾಂತರ ರಿಕ್ಷಾ ಚಾಲಕರಿಗೆ ಅನ್ಯಾಯವಾದರೆ ಸುಮ್ಮನಿರಲು ನಾವು ತಯಾರಿಲ್ಲ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.

 ಮಂಗಳೂರು ನಗರದ ನೇತ್ರಾವತಿ ಸೇತುವೆಯಿಂದ ತೊಕ್ಕೊಟ್ಟು ಉಳ್ಳಾಲ ದೇರಳಕಟ್ಟೆ ಸೋಮೇಶ್ವರ, ಕೋಟೆಕಾರ್, ಕುತ್ತಾರ್, ಕೊಣಾಜೆ ಮುಂತಾದ ಪ್ರದೇಶಗಳು ಮಂಗಳೂರು ನಗರಕ್ಕೆ ಅತ್ಯಂತ ಸಮೀಪದಲ್ಲಿದ್ದು, ಕೇವಲ 10 ಕಿ.ಮೀ ಪರಿಮಿತಿಯಲ್ಲಿ ಈ ಎಲ್ಲಾ ಪ್ರದೇಶಗಳು ಇದ್ದು ನಗರ ಪಾಳಿಕೆಯಷ್ಟೇ ಜನಸಂಖ್ಯೆಯನ್ನು ಹೊಂದಿಕೊಂಡಿದೆ. ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 2000ಕ್ಕಿಂತ ಹೆಚ್ಚು ರಿಕ್ಷಾಗಳು ಬಾಡಿಗೆ ಮಾಡುತ್ತಿದ್ದು, ಮೇಲಿನ ಎಲ್ಲಾ ಪ್ರದೇಶದ ಜನರ ಪ್ರಮುಖ ಖರೀದಿ, ವೈದ್ಯಕೀಯ ಸೇವೆ, ಶಾಲಾ ಕಾಲೇಜುಗಳಿಗೆ ಮಂಗಳೂರು ನಗರವನ್ನೇ ಅವಲಂಬಿಸಿಕೊಂಡಿರುವುದರಿಂದ “ಅನೇಕ ಪ್ರಯಾಣಿಕರು ರಿಕ್ಷಾ ಮೂಲಕ ಮಂಗಳೂರು ನಗರಕ್ಕೆ ತುರ್ತು ಸೇವೆಗಾಗಿ ಬರುವವರಿಗೆ ನಗರ ಪ್ರದೇಶದಲ್ಲಿ ಬಿಟ್ಟು ಹೋಗಲು ಈ ಹಿಂದೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಸಮ್ಮುಖದಲ್ಲಿ ನಗರದ ಸಭೆಯಲ್ಲಿ ಗ್ರಾಮಾಂತರ ಪ್ರದೇಶದ ರಿಕ್ಷಾಗಳು ನಗರ ಪ್ರದೇಶಕ್ಕೆ ಬಾಡಿಗೆ ತರಬಹುದು. ಆದರೆ ರಿಕ್ಷಾ ನಿಲ್ದಾಣದಲ್ಲಿ ನಿಂತು ಬಾಡಿಗೆ ಮಾಡುವಂತಿಲ್ಲ” ಎಂಬ ಷರತ್ತಿನೊಂದಿಗೆ ಗ್ರಾಮಾಂತರ ಮತ್ತು ನಗರ ಎಂಬ ಎರಡು ವಲಯಗಳನ್ನಾಗಿ ಮಾಡಿ ಬಾಡಿಗೆ ಮಾಡುವ ಪ್ರದೇಶವನ್ನು ನಿಗದಿಪಡಿಸಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಸಂದರ್ಭದಲ್ಲಿ ತೊಕ್ಕೊಟ್ಟಿನಿಂದ ಆಸ್ಪತ್ರೆಗೆ ರೋಗಿಗಳನ್ನು ಕರೆದು ತರುವ ಸಂದರ್ಭದಲ್ಲಿ ಪೋಲೀಸರು ತಡೆದು ನಿಲ್ಲಿಸಿ ಕೇಸುಗಳನ್ನು ದಾಖಲು ಮಾಡುತ್ತಿದ್ದಾರೆ. ಈ ಬಗ್ಗೆ ಮೇಲಿನ ವಿವರಣೆ ನೀಡಿದರೆ ಅದನ್ನು ಆದೇಶ ರೂಪದಲ್ಲಿ ನೀಡುವಂತೆ ಕೇಳತ್ತಾರೆ.

ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೊತೆ ನಮ್ಮ ರಿಕ್ಷಾ ಚಾಲಕರು ಭೇಟಿ ಮಾಡಿ ಚರ್ಚೆ ಮಾಡಿದಾಗ ಅಧಿಕಾರಿಗಳು ಸಹ ಇದು ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ನೋಟಿಫಕೇಶನ್‍ನಲ್ಲಿ ಮೇಲಿನ ಅಂಶವನ್ನು ಸೇರಿಸಬಹುದಾಗಿದೆ ಎಂದು ಅಭಿಪ್ರಾಯವನ್ನು ನೀಡಿರುತ್ತಾರೆ.

ಮೇಲಿನ ನಿಯಮವನ್ನು ಆದೇಶ ರೂಪದಲ್ಲಿ ನೀಡದೆ ಇದ್ದರೆ ರಿಕ್ಷಾ ಚಾಲಕರಿಗೆ ಎಲ್ಲಾ ಸಂದರ್ಭಗಳಲ್ಲಿಯೂ ಪೋಲೀಸ್ ಮತ್ತು ಇತರ ಅಧಿಕಾರಿಗಳ ಬಲೆಗೆ ಬಿದ್ದು ದುಡಿದ ದುಡಿಮೆಯನ್ನು ದಂಡ ಪಾವತಿಸುವುದಕ್ಕೆ ಮತ್ತು ರಿಕ್ಷಾ ಚಾಲಕರಿಗೆ ಮಾನಸಿಕವಾಗಿ ಹಿಂಸೆಯನ್ನು ಅನುಭವಿಸಬೇಕಾಗುತ್ತದೆ. ನಗರಕ್ಕೆ ಆರ್.ಟಿ.ಒ ಕೆಲಸಗಳಿಗಾಗಿ ಗ್ಯಾಸ್ ತುಂಬಿಸಲಿಕ್ಕಾಗಿ ಮತ್ತು ಗ್ಯಾರೇಜಿಗಾಗಿ, ಬಿಡಿಭಾಗಗಳ ಖರೀದಿಗಾಗಿ ಗ್ರಾಮಾಂತರ ರಿಕ್ಷಾಗಳನ್ನು ನಗರ ಪ್ರದೇಶಕ್ಕೆ ತರಬೇಕಾದ ಅನಿವಾರ್ಯತೆ ಇದೆ. ಆದರೆ ತುರ್ತು ಸಂದರ್ಭದಲ್ಲಿ ಬಾಡಿಗೆಯನ್ನು ತಂದು ಬಿಡಲು ಅವಕಾಶವಿಲ್ಲ ಎಂದಾದರೆ ಸಾರ್ವಜನಿಕರಿಗೆ ಯಾವ ರೀತಿಯ ಉತ್ತರವನ್ನು ನೀಡಬೇಕೆಂದು ಪ್ರಶ್ನೆಯಾಗಿ ಉಳಿದಿದೆ.

ಪ್ರತಿಭಟನಾ ಸಭೆಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾದ ರಹೀಂ ಕುತ್ತಾರ್, ಕೇಂದ್ರೀಯ ಕೋಶಾಧಿಕಾರಿ ಅಬ್ದುಲ್ ರಶೀದ್ ಜಪ್ಪು, ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಆನಂದ್ ಅಮೀನ್ ಅಡ್ಯಾರ್, ತು.ರ.ವೇ ಮಂಗಳೂರು ವಿಧಾನಸಭಾ ಕ್ಷೇತ್ರದ ಮಹಿಳಾ ಘಟಕದ ಅಧ್ಯಕ್ಷೆಯಾದ ವಿದ್ಯಾ.ಯು ಜೋಗಿ, ಯುವ ಘಟಕದ ಜಿಲ್ಲಾಧ್ಯಕ್ಷರಾದ ಹರೀಶ್ ಶೆಟ್ಟಿ, ಜಿಲ್ಲಾ ಮಹಿಳಾ ಸಂಚಾಲಕಿ ರೇಷ್ಮಾ ಉಳ್ಳಾಲ್, ಶಿವು ಶೆಟ್ಟಿ, ನಾಗೇಶ್ ಶೆಟ್ಟಿ, ಅಬ್ದುಲ್ ರಹಿಮಾನ್ ಉಳ್ಳಾಲ್, ಅಬುಸಾಲಿ ಉಳ್ಳಾಲ್, ಜಮಾಲ್ ಕುತ್ತಾರ್, ಗಂಗಾಧರ್ ಅತ್ತಾವರ್ ಹಾಗೂ ರಿಕ್ಷಾ ಚಾಲಕ ಮತ್ತು ಮಾಲಕ ಘಟಕದ ಪ್ರಮುಖರು ಉಪಸ್ಥಿತರಿದ್ದರು.


Spread the love